ಅಡಕೆಗೂ ಕೆಂಪು ಕೀಟ ಕಾಟ

ಭರತ್‌ರಾಜ್ ಸೊರಕೆ ಮಂಗಳೂರು
ಕಳೆದ ವರ್ಷ ತೆಂಗಿನ ಬೆಳೆಗೆ ಬಿಳಿ ಕೀಟ ಬಾಧೆ ನೀಡಿ ಕೃಷಿಕರನ್ನು ಸತಾಯಿಸಿದ್ದರೆ ಈ ಬಾರಿ ಅಡಕೆಗೆ ಅದೇ ರೀತಿಯ ಕೆಂಪುಬಣ್ಣದ ಕೀಟ ತಗಲಿಕೊಂಡಿದೆ.

ಮುಂಗಾರು ಪೂರ್ವ ಹವಾಮಾನ ವೈಪರೀತ್ಯದಿಂದ ಬಹುತೇಕ ಅಡಕೆ ತೋಟಗಳಲ್ಲಿ ಕೆಂಪು ಕೀಟ (ರೆಡ್‌ಮೈಟ್) ಬಾಧೆ ಆವರಿಸಿ ಅಡಕೆ ಮರಗಳ ಮೇಲೆ ಪರಿಣಾಮ ಬೀರಿದೆ.
2016-17ರಲ್ಲಿ ಜಿಲ್ಲೆಯ ಅಡಕೆ ತೋಟಗಳಿಗೆ ರೆಡ್‌ಮೈಟ್ಸ್ ಅಧಿಕ ಪ್ರಮಾಣದಲ್ಲಿತ್ತು. ಈ ವರ್ಷ ವಿಟ್ಲ, ಅಳಿಕೆ, ಬಂಟ್ವಾಳ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಗರಿಗಳು ನಾಶವಾಗಿವೆ. ಮರಗಳ ಮೇಲೆ ತಕ್ಷಣ ಪರಿಣಾಮ ಬೀರದಿದ್ದರೂ ಭವಿಷ್ಯದಲ್ಲಿ ಅದರ ಬೆಳವಣಿಗೆ ಮೇಲೆ ಪರಿಣಾಮ ಸಾಧ್ಯತೆ ಇದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಾರಿ ಜೂನ್ ಅಂತ್ಯದವರೆಗೂ ಬಿಸಿಲಿದ್ದುದರಿಂದ ಎಲೆ ಅಡಕೆ ಕಾಯಿಹಿಡಿಯುವ ಹಂತದಲ್ಲಿಯೇ ಕೀಟ ಆವರಿಸಿದೆ. ಇದು ಗರಿಗಳ ನಾಶಕ್ಕೆ ಕಾರಣವಾಗುವುದರಿಂದ ಗಿಡದ ಬೆಳವಣಿಗೆ, ಪೋಷಕಾಂಶ ಒದಸುವಲ್ಲಿ ಸಮಸ್ಯೆ ಮಾಡುತ್ತಿದೆ.

ಚಳಿಗಾಲದಲ್ಲಿ ಸಕ್ರಿಯವಾಗುವ ಮೈಟ್ಸ್ ಕ್ರಮೇಣ ಬೇಸಗೆಯಲ್ಲಿ ತೀವ್ರಗೊಳ್ಳುತ್ತದೆ. ಕೀಟ ಗರಿಗಳನ್ನು ಸಂಪೂರ್ಣ ಆವರಿಸಿದಾಗ ಗರಿ ಹಳದಿಯಾಗುತ್ತದೆ. ಬಳಿಕ ತುದಿಯಿಂದಲೇ ಒಣಗತೊಡಗುತ್ತದೆ. ಹೆಚ್ಚಿನ ರೈತರು ಈ ಬಾರಿಯ ಬರಗಾಲದಿಂದ ತೋಟಕ್ಕೆ ನೀರಿನ ಕೊರತೆಯಾಗಿ ಸೋಗೆ ಹಳದಿಯಾಗಿದೆ ಎಂದುಕೊಂಡಿದ್ದರು. ಈ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ಇರಲಿಲ್ಲ.

ಏನಿದು ಕೆಂಪು ಕೀಟ?: ಇದು ಅಡಕೆಯ ಪತ್ರಹರಿತ್ತನ್ನು ಮಾತ್ರ ತಿಂದು ಬದುಕುವ ಕೀಟ. ಎಲೆಯ ಅಡಿಭಾಗದಲ್ಲಿ ಹುಟ್ಟಿಕೊಳ್ಳುವ ಇದರ ಜೀವಿತಾವಧಿ 45ರಿಂದ 50 ದಿನ. ಈ ನೊಣದಲ್ಲಿ ಎರಡು ಜಾತಿಗಳಿವೆ. ರೆಡ್ ಪಾಮ್ ಮೈಟ್ ಮತ್ತು ವೈಟ್ ಅಥವಾ ಜೊವಾರ್ ಮೈಟ್. ಜನವರಿಯಿಂದ ಮೇ ನಡುವೆ ಸಕ್ರಿಯವಾಗಿರುತ್ತದೆ. ಜೋರು ಮಳೆ ಬಂದ ಬಳಿಕ ನೀರಿನ ಹೊಡೆತಕ್ಕೆ ನಾಶವಾಗುತ್ತದೆ. ರೋಗ ಲಕ್ಷಣ ಕಾಣಿಸಿಕೊಂಡ ಗರಿಗಳನ್ನು ಕಡಿದು ಬೇರ್ಪಡಿಸುವುದು ಉತ್ತಮ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೇದಾರನಾಥ್ ಹೇಳಿದ್ದಾರೆ.

ರೋಗ ಲಕ್ಷಣಗಳೇನು?: ಚಳಿಗಾಲದಲ್ಲಿ ಎಲೆಯ ಅಡಿ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಚುರುಕಾಗುವ ಕ್ರಿಮಿ ಬಳಿಕ ಸಂಪೂರ್ಣ ಎಲೆಗೆ ಅಂಟಿಕೊಳ್ಳುತ್ತದೆ. ಕೀಟ ಹರಿತ್ತನ್ನು ಹೀರುತ್ತಾ ಇಡೀ ತೋಟಕ್ಕೆ ಆವರಿಸಿದರೆ ತೋಟವೇ ಹಳದಿ ಬಣ್ಣಕ್ಕೆ ತಿರುಗಿದಂತೆ ಕಾಣುತ್ತದೆ. ಈ ಫಂಗಸ್ ಬಂದಿರುವ ಸೋಗೆಯನ್ನು ಕೈಯಲ್ಲಿ ಸವರಿದರೆ ಕುಂಕುಮದಂಥ ಬಣ್ಣ ಕೈಗೆ ಅಂಟಿಕೊಳ್ಳುತ್ತದೆ.

ಕೆಂಪು ಕೀಟದಿಂದ ಫಸಲಿನ ಮೇಲೆ ಏಕಾಏಕಿ ಪರಿಣಾಮ ಬೀರದು. ಬೇಸಿಗೆಯಲ್ಲಿ ತೀವ್ರ ಬಿಸಿಲಿರುವಾಗ ಇದರ ಸಂಖ್ಯೆ ಹೆಚ್ಚಾಗುತ್ತದೆ. ಜೋರು ಮಳೆಬಂದಾಗ ತೊಳೆದು ಹೋಗುತ್ತದೆ. ಕಳೆದ ವರ್ಷವೂ ಕಂಡುಬಂದಿತ್ತು. ಮಳೆ ಪೂರ್ವ ಇದಕ್ಕೆ ಮದ್ದು ಸಿಂಪಡಿಸುವುದಾದರೆ ಡೈಮೇತೋಟ್ ದ್ರಾವಣವನ್ನು 1ಲೀಟರ್ ನೀರಿಗೆ 1.5 ಎಂ.ಎಲ್ ಮಿಶ್ರಣ ಮಾಡಿ ಗರಿಯ ಅಡಿಭಾಗಕ್ಕೆ ಸಿಂಪಡಿಸಬಹುದು.
ಡಾ.ಶಿವಾಜಿ, ಕೃಷಿ ವಿಜ್ಞಾನಿ, ಸಿಪಿಸಿಆರ್‌ಐ
ಈ ಬಾರಿಯ ಬರಗಾಲದ ಪರಿಣಾಮ ಮುಂದಿನ ವರ್ಷದ ಫಸಲಿನಲ್ಲಿ ಪರಿಣಾಮ ಬೀಳಲಿದೆ. ನೀರಿಲ್ಲದ ಸಂದರ್ಭವೇ ಕೆಂಪು ಕೀಟ ಬಾಧೆಯಾಗಿದ್ದರಿಂದ ಗರಿಗಳು ನಾಶವಾಗಿವೆ. ಗಿಡದ ಬೆಳವಣಿಗೆ ಮೇಲೆ ಕೀಟದಿಂದ ತೊಂದರೆಯಾಗಲಿದೆ. ಇನ್ನೊಂದೆಡೆ ಆರಂಭಿಕ ಹಂತದಲ್ಲೇ ಕೊಳೆರೋಗ ಕಾಣಿಸಿಕೊಂಡಿರುವುದು ನಮ್ಮನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.
ಮನೋಹರ ಶೆಟ್ಟಿ, ರೈತ ಮುಖಂಡ

Leave a Reply

Your email address will not be published. Required fields are marked *