ಸಚಿವ ಶಿವಳ್ಳಿ ತಿಂದ ಉಪ್ಪಿಟ್ಟಲ್ಲಿ ವಿಷ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಅವರು ವಿಷಯುಕ್ತ ಉಪ್ಪಿಟ್ಟು ಸೇವಿಸಿ ಅಸ್ವಸ್ಥಗೊಂಡು ಇಲ್ಲಿನ ಕಿಮ್್ಸ ಆಸ್ಪತ್ರೆಗೆ ಭಾನುವಾರ ರಾತ್ರಿ ದಾಖಲಾಗಿದ್ದಾರೆ. ವೈದ್ಯರ ತಂಡ ಚಿಕಿತ್ಸೆ ನೀಡಿದ್ದು, ಸೋಮವಾರ ಬೆಳಗ್ಗೆ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ತಾಲೂಕಿನ ಕರಡಿಕೊಪ್ಪದಲ್ಲಿ ನಡೆದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲು ಸಚಿವರು ತೆರಳಿದ್ದರು. ಅವರಿಗೆ ಉಪ್ಪಿಟ್ಟು ನೀಡಲಾಗಿತ್ತು. ಅದನ್ನು ಸೇವಿಸಿದ ತಕ್ಷಣ ಸಚಿವ ಶಿವಳ್ಳಿ ಅವರಿಗೆ ಕಹಿ ಅನ್ನಿಸಿ, ತಲೆ ತಿರುಗಿ ವಾಂತಿ ಬರುವ ಲಕ್ಷಣವೂ ಕಂಡುಬಂತು. ಉಪ್ಪಿಟ್ಟು ಸೇವಿಸಿದ್ದ ಖಾಸಗಿ ಆಪ್ತ ಸಹಾಯಕರಾದ ಮುತ್ತು, ಕಾಂತಾ ಹಾಗೂ ಗನ್​ವ್ಯಾನ್ ಚನ್ನಪ್ಪ ಕೂಡ ಕಿಮ್ಸ್​ಗೆ ದಾಖಲಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಕರಡಿಕೊಪ್ಪ ಗ್ರಾಮದಲ್ಲಿ ಸಂಜೆ 6.30ರ ಸುಮಾರಿಗೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಬೇಕಿತ್ತು. ಆದರೆ, ರಾತ್ರಿ 10ರ ಸುಮಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸಚಿವ ಶಿವಳ್ಳಿ ಅವರಿಗೆ ಕಾರ್ಯಕ್ರಮ ಆಯೋಜಕರು ಉಪ್ಪಿಟ್ಟು ನೀಡಿದರು. ಅವರು ಸೇವಿಸಿದ ಉಪ್ಪಿಟ್ಟು ಕಹಿ ಮತ್ತು ವಗುರಾಗಿತ್ತು. ಅದನ್ನು ಸಚಿವರು ಅಲ್ಲಿಯೇ ಉಗುಳಿ ಅರ್ಧಕ್ಕೆ ಬಿಟ್ಟರು. ಆಗಲೇ ಸ್ವಲ್ಪ ತಲೆ ತಿರುಗಿದ್ದಲ್ಲದೇ ಬಾಯಿಯೂ ಕಹಿಯಾಗಿತ್ತು. ದಾರಿಯಲ್ಲಿ ವಾಂತಿಯೂ ಆಗಿದೆ. ಆದರೂ ಇನಾಂವೀರಾಪುರಕ್ಕೆ ಹೋಗಿ ಕಾಮಗಾರಿಯೊಂದಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸೀದಾ ಕಿಮ್ಸ್​ಗೆ ಆಗಮಿಸಿದ್ದಾರೆ. ವೈದ್ಯರು ಹೊಟ್ಟೆ ಸೇರಿದ್ದ ಆಹಾರವನ್ನೆಲ್ಲ ಹೊರತೆಗೆದಿದ್ದಾರೆ. ಫುಡ್ ಪಾಯಿಸನ್ ಶಂಕೆ ಇದೆ. ರಕ್ತ ಸೇರಿ ಇತರೆ ಮಾದರಿಯನ್ನು ಪುಣೆ ಹಾಗೂ ಬೆಳಗಾವಿಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ನಂತರ ಆಹಾರದಲ್ಲಿ ಏನಿತ್ತು ಎಂಬುದು ಗೊತ್ತಾಗಲಿದೆ ಎಂದು ಕಿಮ್್ಸ ಪ್ರಭಾರಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ತಿಳಿಸಿದ್ದಾರೆ.

ಯಾವುದೇ ಪ್ರಕರಣ ದಾಖಲಾಗಿಲ್ಲ:ಸಚಿವ ಸಿ.ಎಸ್. ಶಿವಳ್ಳಿ ಕರಡಿಕೊಪ್ಪ ಗ್ರಾಮದಲ್ಲಿ ಭಾನುವಾರ ರಾತ್ರಿ ಉಪ್ಪಿಟ್ಟು ಸೇವಿಸಿ ಅಸ್ವಸ್ಥರಾಗಿದ್ದರ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್​ಪೆಕ್ಟರ್ ಬಿ.ಎಸ್. ಮಾಳಗೊಂಡ ತಿಳಿಸಿದ್ದಾರೆ. ನನಗೆ ಯಾರ ಮೇಲೆಯೂ ಸಂಶಯವಿಲ್ಲ. ಫುಡ್ ಪಾಯಿಸನ್​ನಿಂದ ಹೀಗಾಗಿರಬಹುದು ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಹಾಗಾಗಿ, ಪ್ರಕರಣ ದಾಖಲಿಸಿಲ್ಲ ಎಂದು ಇನ್ಸ್​ಪೆಕ್ಟರ್ ಹೇಳಿದ್ದಾರೆ.

ಚಿಂತೆಗೀಡಾದ ಗ್ರಾಮಸ್ಥರು..: ಉಪ್ಪಿಟ್ಟು ತಿಂದ ಸಚಿವರು ವಾಂತಿ ಮಾಡಿಕೊಂಡು ಕಿಮ್ಸ್​ಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ದೇಶವೇ ಬೆಚ್ಚಿ ಬಿಳಿಸುವ ಪ್ರಕರಣಗಳಾದ ಸುಳ್ವಾಡಿ ಮಾರಮ್ಮ ದೇವಿ ಜಾತ್ರೆಯ ವಿಷಯುಕ್ತ ಪ್ರಸಾದ ಸೇವಿಸಿ ಹತ್ತಾರು ಜನ ಮೃತಪಟ್ಟಿದ್ದು ಹಾಗೂ ಕೋಲಾರ ಜಿಲ್ಲೆಯ ಗಂಗಮ್ಮ ದೇವಿ ಜಾತ್ರೆಯ ವಿಷಯುಕ್ತ ಪ್ರಸಾದ ದುರಂತ ಪ್ರಕರಣಗಳು ಗ್ರಾಮಸ್ಥರನ್ನು ಇನ್ನಷ್ಟು ಚಿಂತೆಗೀಡಾಗಿಸಿವೆ.

ಆಸ್ಪತ್ರೆಯಿಂದ ಬಿಡುಗಡೆ: ಅಸ್ವಸ್ಥರಾಗಿದ್ದ ಸಚಿವ ಸಿ.ಎಸ್. ಶಿವಳ್ಳಿ ಸೋಮವಾರ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಭಾನುವಾರ ರಾತ್ರಿ ಅವರು ಕಿಮ್ಸ್​ಗೆ ದಾಖಲಾಗಿದ್ದರು. ಸಚಿವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವುದರಿಂದ ಬಿಡುಗಡೆ ಮಾಡಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಅಂಬೇಡ್ಕರ್ ಭವನ ಹಾಗೂ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಕರಡಿಕೊಪ್ಪಕ್ಕೆ ಹೋಗಿದ್ದೆ. ಮುಂದೆ ಇನಾಂವೀರಾಪುರಕ್ಕೆ ಹೋಗಬೇಕಿತ್ತು. ಅಲ್ಲಿನವರು ಉಪ್ಪಿಟ್ಟು ಕೊಟ್ಟರು ಹಸಿವಾಗಿದ್ದರಿಂದ ಸೇವಿಸಿದೆ. ಎರಡನೇ ತುತ್ತು ವಿಷಯುಕ್ತವಾಗಿತ್ತು. ಅಲ್ಲಿಯೇ ಉಗುಳಿದೆ. ತಟ್ಟೆಯನ್ನು ಆ ಕಡೆ ಸರಿಸಿದೆ. ನನ್ನ ಸಹಾಯಕರು, ಗನ್ ಮ್ಯಾನ್ ಅದೇ ತಟ್ಟೆಯಲ್ಲಿದ್ದ ಉಪ್ಪಿಟ್ಟು ತಿಂದು ಅಸ್ವಸ್ಥಗೊಂಡರು. ನಾನೂ ಆರಾಮದಿಂದ ಇದ್ದೇನೆ. ಅವರೂ ಚೆನ್ನಾಗಿದ್ದಾರೆ. ಯಾರ ಮೇಲೂ ನನಗೆ ಅನುಮಾನವಿಲ್ಲ. ವೈದ್ಯಕೀಯ ವರದಿಯಲ್ಲಿ ಏನಿದೆ ಎಂಬುದನ್ನು ನೋಡಿ ತೀರ್ವನಿಸಲಾಗುವುದು.

| ಸಿ.ಎಸ್. ಶಿವಳ್ಳಿ ಪೌರಾಡಳಿತ ಸಚಿವ