ಐಸಿಸ್​ಗೆ ಸೋಲಾದ ಬಳಿಕ ಇರಾಕ್​ನಲ್ಲಿ ಮೊದಲ ಚುನಾವಣೆ: ಶೇ. 44 ರಷ್ಟು ಮತದಾನ

ಬಾಗ್ದಾದ್​: ಐಸಿಸ್​ ಉಗ್ರ ಸಂಘಟನೆಗೆ ಸೋಲಾದ ಬಳಿಕ ಇರಾಕ್​ನಲ್ಲಿ ಮೊದಲ ಬಾರಿಗೆ ಶನಿವಾರ ಸಾರ್ವತ್ರಿಕ ಚುನಾವಣೆ ನಡೆಸಿದ್ದು, ಶೇ. 44 ರಷ್ಟು ಮತದಾನವಾಗಿದೆ.

2003ರ ನಂತರ ಇದೇ ಮೊದಲ ಬಾರಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಮತ ಚಲಾಯವಣೆಯಾಗಿದೆ. 2003ರಿಂದ ಈಚೆಗೆ ನಡೆದ ಚುನಾವಣೆಗಳಲ್ಲಿ ಶೇ. 60 ಕ್ಕಿಂತ ಹೆಚ್ಚಿನ ಮತದಾನವಾಗಿತ್ತು. 2003ರ ನಂತರ ಇದೇ ಮೊದಲ ಬಾರಿಗೆ ಯಾವುದೇ ಮತಗಟ್ಟೆ ಮೇಲೆ ಬಾಂಬ್​ ದಾಳಿ ಅಥವಾ ಗುಂಡಿನ ದಾಳಿ ನಡೆಯದೆ ಶಾಂತಿಯುತವಾಗಿ ಮತದಾನ ನಡೆದಿದೆ. ಶನಿವಾರ ನಡೆದ ಚುನಾವಣೆಯಲ್ಲಿ 1 ಕೋಟಿಗೂ ಹೆಚ್ಚಿನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಪ್ರಧಾನಿ ಹೈದರ್ ಅಲ್-ಬಾದಿ ಆಡಳಿತದ ವಿರುದ್ಧ ಜನರ ಅಸಮಾಧಾನ ಮತ್ತು ಶಿಯಾ ನಾಯಕರ ಪ್ರಾಬಲ್ಯದ ರಾಜಕೀಯ ಮೇಲಾಟಗಳು ಇರಾಕ್ ಪ್ರಜೆಗಳಿಗೆ ಮತದಾನದಲ್ಲಿ ನಿರಾಸಕ್ತಿ ಮೂಡಿಸಿದೆ ಎಂದು ಹೇಳಲಾಗುತ್ತಿದೆ. ಕಡಿಮೆ ಪ್ರಮಾಣದ ಮತದಾನ ಆಗಿರುವುದರಿಂದ ಸುನ್ನಿ ನಾಯಕರ ನೇತೃತ್ವದ ಪಕ್ಷಗಳು ಮತ್ತು ಕುರ್ದಿಶ್ ಪಡೆಗಳು ಸಮ್ಮಿಶ್ರ ಸರ್ಕಾರ ರಚನೆಗೆ ತಂತ್ರಗಳನ್ನು ಹೆಣೆಯಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಮಿತಿಮೀರಿದ ಭ್ರಷ್ಟಾಚಾರ, ದಿವಾಳಿ ಕಡೆಗೆ ಹೊರಳುತ್ತಿರುವ ಆರ್ಥಿಕತೆ ಮತ್ತು ಕಳಪೆ ಸಾರ್ವಜನಿಕ ಸೇವೆಗಳು ಇರಾಕ್ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *