More

    ಜುಲೈನಲ್ಲಿ ಭರ್ಜರಿ ಮಳೆ ದಾಖಲು

    ಭರತ್ ಶೆಟ್ಟಿಗಾರ್ ಮಂಗಳೂರು
    ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಸುರಿದು ಆತಂಕಕ್ಕೆ ಕಾರಣವಾಗಿದ್ದ ಮುಂಗಾರ ಮಳೆ, ಜುಲೈನಲ್ಲಿ ವಾಡಿಕೆಗಿಂತ ಜಾಸ್ತಿ ಸುರಿದು ಮತ್ತೆ ಆತಂಕ ಸೃಷ್ಟಿಸಿದೆ!

    ಕರಾವಳಿಯ ದ.ಕ., ಉಡುಪಿ ಜಿಲ್ಲೆಗಳಲ್ಲಿ ಈ ಬಾರಿಯ ಮುಂಗಾರು ಅವಧಿ ಜನರನ್ನು ಆತಂಕಕ್ಕೀಡಾಗುವಂತೆ ಮಾಡಿದ್ದು, ಜೂನ್ ತಿಂಗಳಲ್ಲಿ ಉಭಯ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿತ್ತು. ಆದರೆ ಜುಲೈ ತಿಂಗಳ ಮೊದಲ ಒಂದು ವಾರದಲ್ಲಿ ಸುರಿದ ಮಳೆ ಜನರನ್ನು ಬೆಚ್ಚಿ ಬೀಳಿಸಿತ್ತು. ಕಡಲು ಕೊರೆತ, ನದಿಗಳಲ್ಲಿ ಪ್ರವಾಹ, ನೆರೆ, ಕೃತಕನೆರೆ ಎಲ್ಲವೂ ಉಂಟಾಗಿ ಸಾಕಷ್ಟು ಸಾವು ನೋವಿಗೆ ಕಾರಣವಾಗಿತ್ತು. ನಂತರ ಕಡಿಮೆಯಾದ ಮಳೆ ಕೊನೇ ವಾರದಲ್ಲಿ ಮತ್ತೆ ಅಬ್ಬರಿಸಲು ಆರಂಭಿಸಿ, ಸಾಕಷ್ಟು ಅನಾಹುತಗಳನ್ನು ಮತ್ತೆ ಸೃಷ್ಟಿಸಿತು. ಇದೀಗ ಆಗಸ್ಟ್ ಮೊದಲ ವಾರದಲ್ಲೂ ಬಿಡದೆ ಸುರಿಯುತ್ತಿದೆ. ಘಟ್ಟದ ತಪ್ಪಲಿನ ಭಾಗದಲ್ಲಂತೂ ಇನ್ನಿಲ್ಲದಂತೆ ಸುರಿದ ಮಳೆ ಮತ್ತೆ ಸತತ ಭೂ ಕುಸಿತಗಳಿಗೆ ಕಾರಣವಾಗಿದೆ.

    ಮಳೆ ಅಂಕಿ ಅಂಶ: ಕರ್ನಾಟಕ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ಅಂಕಿ-ಅಂಶ ಪ್ರಕಾರ ಜುಲೈ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಡಿಕೆ ಮಳೆ 123.2 ಸೆಂ.ಮೀ. ಆದರೆ ಸುರಿದಿರುವುದು 167.1 ಸೆಂ.ಮೀ. ಅಂದರೆ ಶೇ.36ರಷ್ಟು ಹೆಚ್ಚು ಮಳೆ.

    ಉಡುಪಿ ಜಿಲ್ಲೆಯಲ್ಲಿ 144.8 ಸೆಂ.ಮೀ ಮಳೆ ಸುರಿಯಬೇಕಾದಲ್ಲಿ 188.8 ಸೆಂ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.30ರಷ್ಟು ಹೆಚ್ಚು ಮಳೆಯಾಗಿದೆ. ಈ ಬಾರಿಯ ಮುಂಗಾರು ಅವಧಿಯಲ್ಲಿ ಆ.3ರ ವರೆಗೆ ದ.ಕ.ದಲ್ಲಿ 233.7 ಸೆಂ.ಮೀ. ಮತ್ತು ಉಡುಪಿ ಜಿಲ್ಲೆಯಲ್ಲಿ 274.1 ಸೆಂ.ಮೀ. ಮಳೆಯಾಗಿದೆ.

    ಬಲ ಕಳೆದುಕೊಂಡಿದ್ದ ಮುಂಗಾರು: ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದರೂ, ಅದು ಮುಂಗಾರಿನ ಪ್ರಭಾವದಿಂದ ಸುರಿದಿಲ್ಲ. ಪೂರ್ವದ ಮೋಡಗಳಿಂದ ಸುರಿದ ಮಳೆಯಾಗಿದೆ. ಪರಿಣಾಮ ಹಿಂಗಾರು ಅಥವಾ ಪೂರ್ವ ಮುಂಗಾರು ರೀತಿಯಲ್ಲಿ ಒಂದೊಂದು ಪ್ರದೇಶದಲ್ಲಿ ಸುರಿದಿದೆ. ಹಗಲು ಮೋಡ, ತುಂತುರು ಮಳೆ, ಸಂಜೆ, ರಾತ್ರಿ ವೇಳೆ ಉತ್ತಮ ಮಳೆಯಾಗಿರುವುದು, ಜಿಲ್ಲೆಯ ಕರಾವಳಿ ಭಾಗಕ್ಕಿಂತ ಘಟ್ಟದ ತಪ್ಪಲಿನಲ್ಲಿ, ಒಳನಾಡಿನ ವಿವಿಧೆಡೆ ಹೆಚ್ಚು ಸುರಿದಿರುವುದು ಅದರ ಲಕ್ಷಣವಾಗಿದೆ. ಆಗಸ್ಟ್‌ನಲ್ಲಿ ಮುಂಗಾರು ಮಾರುತಗಳು ಮತ್ತೆ ಬಲಗೊಳ್ಳಲಿದ್ದು, ಬಹುತೇಕ ಚುರುಕಾಗುವ ಸಾಧ್ಯತೆಯಿದೆ ಎನ್ನುವುದು ಹವಾಮಾನ ತಜ್ಞರ ಮಾತು.

    ಕರಾವಳಿಯಲ್ಲಿ ಮುಂಗಾರು ಚುರುಕಾಗಿದ್ದು, ಮತ್ತೆ ವ್ಯಾಪಕವಾಗಿ ಸುರಿಯಲಿದೆ. ಮುಂದಿನ ನಾಲ್ಕೈದು ದಿನ ಉತ್ತಮ ಮಳೆಯ ಮುನ್ಸೂಚನೆ ಇದೆ.
    -ಪ್ರಸಾದ್, ಐಎಂಡಿ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts