ಕರ್ನಾಟಕಕ್ಕೆ ಇನಿಂಗ್ಸ್ ಹಿನ್ನಡೆ

ರಾಜ್​ಕೋಟ್: ಬೌಲಿಂಗ್​ನಲ್ಲಿ ಕಂಡ ಯಶಸ್ಸನ್ನು ಬ್ಯಾಟಿಂಗ್ ಮೂಲಕ ಸದ್ಬಳಕೆ ಮಾಡಿಕೊಳ್ಳಲು ವಿಫಲಗೊಂಡ ಕರ್ನಾಟಕ ತಂಡ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಆತಿಥೇಯ ಸೌರಾಷ್ಟ್ರ ತಂಡದ ಎದುರು ಮೊದಲ ಇನಿಂಗ್ಸ್ ಹಿನ್ನಡೆ ಕಂಡಿದೆ. ಎಡಗೈ ಸ್ಪಿನ್ನರ್ ಧಮೇಂದ್ರ ಸಿನ್ಹ ಜಡೇಜಾ(103ಕ್ಕೆ 7) ಜೀವನಶ್ರೇಷ್ಠ ಬೌಲಿಂಗ್ ನಿರ್ವಹಣೆಯ ಬಲದಿಂದ ಕರ್ನಾಟಕದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಸೌರಾಷ್ಟ್ರ ತಂಡ, 99 ರನ್​ಗಳ ಅಮೂಲ್ಯ ಮುನ್ನಡೆ ಕಾಣುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಮೊದಲ ಮೂರೂ ಪಂದ್ಯಗಳಲ್ಲಿ ಯಶಸ್ವಿ ನಿರ್ವಹಣೆ ತೋರಿದ್ದ ಕರ್ನಾಟಕ, 4ನೇ ಲೀಗ್ ಪಂದ್ಯದ ಮೂಲಕ ಟೂರ್ನಿಯಲ್ಲಿ ಮೊದಲ ಬಾರಿ ಇನಿಂಗ್ಸ್ ಹಿನ್ನಡೆ ಅನುಭವಿಸಿತು. ಶುಕ್ರವಾರ 9 ವಿಕೆಟ್​ಗೆ 288 ರನ್​ಗಳಿಂದ 2ನೇ ದಿನದಾಟ ಮುಂದುವರಿಸಿದ ಸೌರಾಷ್ಟ್ರ ತಂಡ, ಕಮಲೇಶ್ ಮಕ್ವಾನ (46 ರನ್, 96 ಎಸೆತ, 4 ಬೌಂಡರಿ) ಮತ್ತು ಬಾಲಂಗೋಚಿ ಯುವರಾಜ್ ಚೂಡಾಸ್ಮ(20) ಜೋಡಿ ಕೊನೇ ವಿಕೆಟ್​ಗೆ ಸೇರಿಸಿದ 42 ರನ್ ನೆರವಿನಿಂದ 316 ರನ್​ಗೆ ಮೊದಲ ಇನಿಂಗ್ಸ್ ಮುಗಿಸಿತು. ಮೊದಲ ದಿನದ ಮೊತ್ತಕ್ಕೆ ಸೌರಾಷ್ಟ್ರ ಮತ್ತೆ 28 ರನ್ ಸೇರಿಸಿತು. ಪ್ರತಿಯಾಗಿ ಕರ್ನಾಟಕ ತಂಡ, ಅನುಭವಿ ಕರುಣ್ ನಾಯರ್ (63 ರನ್, 83 ಎಸೆತ, 11 ಬೌಂಡರಿ) ಮತ್ತು ಡಿ. ನಿಶ್ಚಲ್(58 ರನ್, 179 ಎಸೆತ, 3 ಬೌಂಡರಿ, 1 ಸಿಕ್ಸರ್) ಅರ್ಧಶತಕ ಹೊರತುಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳ ಪರದಾಟದಿಂದ ದಿನದಂತ್ಯದಲ್ಲಿ 217 ರನ್​ಗೆ ಆಲೌಟ್ ಆಯಿತು.

ಕರ್ನಾಟಕಕ್ಕೆ ಕರುಣ್-ನಿಶ್ಚಲ್ ಆಸರೆ

ಕರುಣ್ ನಾಯರ್ ಮತ್ತು ಆರ್. ಸಮರ್ಥ್ ನ್ಯೂಜಿಲೆಂಡ್ ಚತುರ್ದಿನ ಟೆಸ್ಟ್ ಪ್ರವಾಸ ಮುಗಿಸಿ ತಂಡಕ್ಕೆ ಮರಳಿದ ಬಲವಿದ್ದರೂ, ಕರ್ನಾಟಕ ಮೇಲುಗೈ ಸಾಧಿಸಲು ಧಮೇಂದ್ರ ಸಿನ್ಹ ಜಡೇಜಾ ಅವಕಾಶ ಕೊಡಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಸಮರ್ಥ್​ರನ್ನು(15) ಎಲ್​ಬಿ ಬಲೆಗೆ ಬೀಳಿಸಿದ ಧಮೇಂದ್ರ ಮೊದಲ ಆಘಾತ ನೀಡಿದರು. ಬೆನ್ನಲ್ಲೇ ದೇವದತ್ ಪಡಿಕ್ಕಲ್(3) ಕೂಡ ನಿರ್ಗಮಿಸಿದರು. ನಂತರ ಕರುಣ್-ನಿಶ್ಚಲ್ 3ನೇ ವಿಕೆಟ್​ಗೆ 96 ರನ್ ಪೇರಿಸಿ ಆಸರೆಯಾದರು.

ವಿದಾಯ ಶತಕದ ಸನಿಹದಲ್ಲಿ ಗಂಭೀರ್

ನವದೆಹಲಿ: ವಿದಾಯದ ಪಂದ್ಯವನ್ನಾಡುತ್ತಿರುವ ದೆಹಲಿಯ ಅನುಭವಿ ಬ್ಯಾಟ್ಸ್​ಮನ್ ಗೌತಮ್ ಗಂಭೀರ್ (92*ರನ್,154 ಎಸೆತ, 8 ಬೌಂಡರಿ) ತವರಿನಲ್ಲಿ ಆಂಧ್ರ ತಂಡದ ವಿರುದ್ಧ ಆಡುತ್ತಿರುವ ರಣಜಿ ಪಂದ್ಯದಲ್ಲಿ ಶತಕದ ಸನಿಹ ತಲುಪಿದ್ದಾರೆ. ಮೊದಲ ಇನಿಂಗ್ಸ್​ನಲ್ಲಿ ಆಂಧ್ರ ಪೇರಿಸಿದ 390 ರನ್​ಗೆ ಪ್ರತಿಯಾಗಿ ದೆಹಲಿ ತಂಡ, ಭಾರತ ಪರ 2 ವಿಶ್ವಕಪ್ ಗೆದ್ದಿರುವ ಆಟಗಾರ ಗಂಭೀರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್​ನಿಂದ ದಿನದಂತ್ಯದ ವೇಳೆಗೆ 1 ವಿಕೆಟ್​ಗೆ 190 ರನ್ ಪೇರಿಸಿದೆ. ದೆಹಲಿ ಇನ್ನೂ 200 ರನ್​ಗಳ ಹಿನ್ನಡೆಯಲ್ಲಿದೆ. ಫಿರೋಜ್ ಷಾ ಕೋಟ್ಲಾದಲ್ಲಿ ಗಂಭೀರ್ ಬ್ಯಾಟಿಂಗ್​ಗೆ ಇಳಿದಾಗ ಆಂಧ್ರ ಆಟಗಾರರು ಗಾರ್ಡ್ ಆಫ್ ಹಾನರ್ ನೀಡಿದರು.