ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯದಲ್ಲೆಡೆ ವರುಣಾರ್ಭಟ ಮುಂದುವರಿದಿರುವ ಬೆನ್ನಲ್ಲೇ ಎರಡು ತಿಂಗಳಲ್ಲಿ ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಕ್ಕಿಂತ ಕರಾವಳಿ ಜಿಲ್ಲೆಗಳಲ್ಲಿ ದಾಖಲೆ ಮಳೆಯಾಗಿದೆ.
ಜೂ 1ರಿಂದ ಆ.2ರವರೆಗೆ ಕರಾವಳಿ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ವಾಡಿಕೆಯಂತೆ 2,046 ಮಿಮೀ ಮಳೆಯಾಗಬೇಕಿತ್ತು. ಆದರೆ, 2,713 ಮಿಮೀ ಸುರಿದಿದೆ. ಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿ 993 ಮಿಮೀಗೆ ಬದಲಾಗಿ 1,295 ಮಿಮೀ, ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 151 ಮಿಮೀಗೆ ಬದಲು 215 ಮಿಮೀ, ಉತ್ತರ ಕರ್ನಾಟಕ ಭಾಗದಲ್ಲಿ 228 ಮಿಮೀಗೆ ಬದಲಾಗಿ 293 ಮಿಮೀ ಮಳೆ ಸುರಿದಿದೆ. 4 ವರ್ಷದ ಬಳಿಕ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.
ಶಿರಾಡಿಘಾಟ್ನಲ್ಲಿ ಮತ್ತೆ ಭೂಕುಸಿತ: ಸಕಲೇಶಪುರ ತಾಲೂಕಿನಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದ್ದು, ರಾಷ್ಟ್ರಿಯ ಹೆದ್ದಾರಿ-75ರ ಶಿರಾಡಿಘಾಟ್ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಉತ್ತಮ ಮಳೆಯಾಗಿದ್ದು, ಬಳಿಕ ಇಳಿಮುಖವಾಗಿದೆ. ಮಧ್ಯಾಹ್ನ ತನಕ ಬಿಟ್ಟು ಬಿಟ್ಟು ಮಳೆಯಾಗಿದ್ದು, ಬಳಿಕ ದಟ್ಟ ಮೋಡ ಕವಿದಿತ್ತು. ಕರಾವಳಿಗೆ ಶನಿವಾರ ಆರೆಂಜ್ ಅಲರ್ಟ್ ಘೊಷಿಸಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಉತ್ತರ ಕನ್ನಡ, ಹಾವೇರಿ ಮತ್ತು ಗದಗ ಜಿಲ್ಲೆಯ ನದಿ ಸಮೀಪದ ಹಲವು ಗ್ರಾಮಗಳಲ್ಲಿ ಪ್ರವಾಹ ಭೀತಿ ಹೆಚ್ಚಿದೆ. ಜಲಾಶಯದಿಂದ ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದು, ಹಾವೇರಿ ಜಿಲ್ಲೆಯ ಹಲವು ಗ್ರಾಮಗಳಿಗೆ ತುಂಗಭದ್ರಾ ನೀರು ನುಗ್ಗುತ್ತಿದೆ. ಮಲಪ್ರಭಾ ಜಲಾಶಯದಿಂದ 1 ಸಾವಿರ ಕ್ಯೂಸೆಕ್ ನೀರು ಬಿಟ್ಟಿರುವುದರಿಂದ ನರಗುಂದ ತಾಲೂಕಿನ ಕೆಲವು ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಕಸ್ತೂರಿರಂಗನ್ ವರದಿ ಮತ್ತೊಮ್ಮೆ ಪರಿಶೀಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಕೊಡಗಿನ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗತ್ಯ ದುರಸ್ತಿ ಕಾರ್ಯಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸೂಚಿಸಿದರು. ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದಲ್ಲಿ ಮೃತಪಟ್ಟ ಬಾಲಕ ರೋಹಿತ್ ತಾಯಿ ಜತೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ, ಅವರಿಗೆ ಸಾಂತ್ವನ ಹೇಳಿ ಪರಿಹಾರ ಕೊಡುವ ಭರವಸೆ ನೀಡಿದರು. ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎನ್ನುವುದು ನಮ್ಮ ತೀರ್ವನವಾಗಿದೆ. ಆದರೆ ಈಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಗ್ಗೆ ಅರಣ್ಯ ಸಚಿವರ ಜತೆ ಮತ್ತೊಮ್ಮೆ ರ್ಚಚಿಸಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಇದೇ ವೇಳೆ ತಿಳಿಸಿದರು.
ತುಂಬಿ ಹರಿಯುತ್ತಿರುವ ತುಂಗಭದ್ರೆ
ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ಹರಿದು ಬರುತ್ತಿರುವ ಹೆಚ್ಚುವರಿ ನೀರಿನಿಂದ ಗಂಗಾವತಿ ತಾಲೂಕಿನ ನದಿ ಪಾತ್ರ ಗ್ರಾಮಗಳಲ್ಲಿ ನೆರೆ ಭೀತಿ ಎದುರಾಗಿದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದ ಬಳಿಯ ಗಡ್ಡೆ ಖಾದರಬಾಷಾ ದರ್ಗಾ ಜಲಾವೃತವಾಗಿದೆ. ಮಳೆ ಅವಾಂತರಕ್ಕೆ ಪ್ರವಾಸಿಗರು ಬೆದರಿದ್ದು, ವಿಶ್ವವಿಖ್ಯಾತ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಪ್ರವಾಸೋದ್ಯಮ ನಂಬಿದ ಕುಟುಂಬಗಳ ಆದಾಯಕ್ಕೆ ಕೊಕ್ಕೆ ಬಿದ್ದಿದೆ.
ಹೊಳೆಯಲ್ಲಿ ಕೊಚ್ಚಿಹೋದ ರೈತ: ಮೂಡಿಗೆರೆ ತಾಲೂಕು ಬೈದುವಳ್ಳಿ ಗ್ರಾಮದಲ್ಲಿ ಶುಕ್ರವಾರ ಜಾನುವಾರು ಕಟ್ಟಲು ಹೋದ ರೈತರೊಬ್ಬರು ಹೇಮಾವತಿ ಉಪನದಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಡಿ.ಎಲ್.ಗೋಪಾಲಗೌಡ(63) ಎಂಬುವರು ಜಾನುವಾರುಗಳನ್ನು ಗದ್ದೆಯಲ್ಲಿ ಕಟ್ಟಲು ಹೋದಾಗ ತುಂಬಿ ಹರಿಯುತ್ತಿದ್ದ ಉಪನದಿಗೆ ಜಾರಿ ಬಿದ್ದಿದ್ದು, ನೀರಿನ ರಭಸ ಜೋರಾಗಿದ್ದರಿಂದ ಕೊಚ್ಚಿಕೊಂಡು ಹೋಗಿದ್ದಾರೆ. ಮಲೆನಾಡಿನ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ, ಭದ್ರಾ ಮತ್ತು ಶರಾವತಿ ನದಿಗಳು ತುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದೆ.
ಸ್ವಾಮೀಜಿ ಸ್ಥಳಾಂತರ: ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿಯ ನಡುಗಡ್ಡೆ ಗೌತಮ ಕ್ಷೇತ್ರದ ಗಜಾನನ ಸ್ವಾಮೀಜಿ, ಅವರ ಪರಿವಾರ ಅಗ್ನಿಶಾಮಕ ದಳ ಸಿಬ್ಬಂದಿ ಕೊನೆಗೂ ಸುರಕ್ಷಿತವಾಗಿ ಸ್ಥಳಾಂತರಿಸಿದರು. ದೊಡ್ಡೇಗೌಡನಕೊಪ್ಪಲು ಗ್ರಾಮ ಹೊರವಲಯದ ಕಾವೇರಿ ನದಿಯ ನಡುಗಡ್ಡೆಯಲ್ಲಿ ಸ್ವಾಮೀಜಿ ಮತ್ತು ಅವರ ತಾಯಿ ಮಾತಾಜಿ ಕೋಕಿಲಾಬಾಯಿ ಹಾಗೂ ಸೇವಕಿ ರತ್ನಮ್ಮ ಸಿಲುಕಿದ್ದರು.
ಅರಬ್ಬಿ ಸಮುದ್ರ ಪೂರ್ವ ಭಾಗದಲ್ಲಿ ತೇವಾಂಶ ಭರಿತ ಮೋಡಗಳು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ,ಮೇಲ್ಮೈ ಸುಳಿಗಾಳಿ ದೀರ್ಘವಾಗಿ ಇದ್ದಿರುವ ಕಾರಣದಿಂದಾಗಿ ಜೂನ್ ಮತ್ತು ಜುಲೈನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಯಿತು. ಪ್ರಸ್ತುತ ಹವಮಾನ ಸ್ಥಿತಿ ಗಮನಿಸಿದರೆ ಈ ತಿಂಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ.
| ಸಿ.ಎಸ್.ಪಾಟೀಲ್ , ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ
ದೆಹಲಿ ಕೋಚಿಂಗ್ ಸೆಂಟರ್ ದುರಂತ: ಸಿಬಿಐ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ