More

  ಸಂಶೋಧನಾ ಕಾರ್ಯ ಆಧರಿಸಿ ಅನುದಾನ ನೀಡಲು ಶಿಫಾರಸು

  ಮೈಸೂರು: ಸಂಶೋಧನಾ ಕಾರ್ಯಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಹೇಳಿದರು.


  ಕರ್ನಾಟಕ ಕೌಶಾಲಾಭಿವೃದ್ಧಿ ನಿಗಮ, ಮೈಸೂರು ವಿಶ್ವವಿದ್ಯಾಲಯ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ನಾಲ್ಕು ಜಿಲ್ಲೆಗಳ ಪ್ರಥಮ ದರ್ಜೆ ಕಾಲೇಜುಗಳ ಬೋಧಕರಿಗೆ ಔದ್ಯೋಗಿಕ ಕೌಶಲ ಬೋಧನೆ ಕುರಿತು ಸೋಮವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


  ರಾಜ್ಯದ ಪ್ರತಿ ವಿಶ್ವವಿದ್ಯಾಲಯದಿಂದ ಸಂಶೋಧನೆ ಕುರಿತು ಮಾಹಿತಿ ಕೇಳಲಾಗಿದೆ. ಬೋಧಕರು ಮಾಡಿರುವ ಸಂಶೋಧನೆಗಳು ಮತ್ತು ಪ್ರಬಂಧಗಳೆಷ್ಟು, ವಿದ್ಯಾರ್ಥಿಗಳು ಮಾಡಿರುವ ಸಂಶೋಧನೆಗಳೆಷ್ಟು ಎಂಬುದು ಸೇರಿದಂತೆ ಅನ್ವೇಷಣಾ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡುವಂತೆ ಪತ್ರದ ಮೂಲಕ ತಿಳಿಸಲಾಗಿದೆ. ಸಂಶೋಧನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿರುವ ವಿವಿಗೆ ಪ್ರೋತ್ಸಾಹ, ಅನುದಾನ ದೊರೆಯಲಿದ್ದು, ಪ್ರಗತಿ ಕುಂಠಿತ ವಿವಿಗಳಿಗೆ ಹೆಚ್ಚಿನ ಸಂಶೋಧನೆ ಮಾಡಲು ತಾಕೀತು ಮಾಡಲಾಗುವುದು ಎಂದರು.

  ಯಾವ ರೀತಿ ಶಿಕ್ಷಣ ಕೊಡಬೇಕು ಎಂಬುದು ಈಗಿನ ಸವಾಲು


  ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ಸರಿಸಮಾನವಾಗಿ ಮತ್ತು ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಉನ್ನತ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಬೇಕಿದೆ. ಆದ್ದರಿಂದ ಯಾವ ರೀತಿ ಶಿಕ್ಷಣ ಕೊಡಬೇಕು ಎಂಬುದು ಈಗಿನ ಸವಾಲು. ಶಿಕ್ಷಣದೊಂದಿಗೆ ಕೌಶಲವನ್ನೂ ವಿದ್ಯಾರ್ಥಿಗಳಿಗೆ ಕಲಿಸುವ ದೊಡ್ಡ ಜವಾಬ್ದಾರಿಯೂ ಬೋಧಕರ ಮೇಲಿದೆ ಎಂದು ತಿಳಿಸಿದರು.


  ಉತ್ಕೃಷ್ಟ, ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಇದಕ್ಕೆ ಪೂರಕವಾಗಿ ಸಂಶೋಧನೆಗಳು ನಡೆಯಬೇಕಿದೆ. ಮುಂದುವರಿದ ದೇಶಗಳ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಸಂಶೋಧನೆಗಳ ಸಂಖ್ಯೆ ಕಡಿಮೆ. ಗುಣಮಟ್ಟದಲ್ಲೂ ಕೊರತೆ ಇದೆ ಎಂದರು.
  ವಿದ್ಯಾರ್ಥಿಗಳಿಗೆ ಕಲಿಕೆಯಷ್ಟೇ ಅಲ್ಲ, ಕೌಶಲವೂ ಅಗತ್ಯವಾಗಿ ಬೇಕು. ಸಂವಹನ, ತಂಡದೊಂದಿಗೆ ಕಾರ್ಯ, ಸಮಸ್ಯೆಗೆ ಪರಿಹಾರಾತ್ಮಕ ಮನೋಭಾವ, ನಿರ್ವಹಣೆ ಸೇರಿದಂತೆ ಇನ್ನಿತರ ಕೌಶಲಗಳ ಕೊರತೆಯಿಂದ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

  ಬೋಧಕರ ಹುದ್ದೆ ಭರ್ತಿ ಮಾಡುವ ಭರವಸೆ


  ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಲೆ ಉತ್ತಮವಾಗಿ ಇರುವುದಿಲ್ಲ. 34 ಅಂಕ ಪಡೆದು ಉನ್ನತ ಶಿಕ್ಷಣಕ್ಕೆ ಬಂದಿರುವ ವಿದ್ಯಾರ್ಥಿಯನ್ನು 95 ಅಂಕ ಪಡೆದುಕೊಳ್ಳುವಂತೆ ಬೋಧಕರು ತಯಾರು ಮಾಡಬೇಕು ಎಂದು ಸಲಹೆ ನೀಡಿದರು.


  ರಾಜ್ಯದಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳನ್ನು ಇನ್ನೆರಡು ವರ್ಷಗಳಲ್ಲಿ ಭರ್ತಿ ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದು, ಅನ್ನದಾಸೋಹದೊಂದಿಗೆ ಶಿಕ್ಷಣ ದಾಸೋಹ ನೀಡಲು ಮುಂದಾಗಿದ್ದಾರೆ. ರಾಜ್ಯ ಶಿಕ್ಷಣ ನೀತಿ ರಚನೆಗೂ ಆಯೋಗವನ್ನು ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ, ಸಂಶೋಧನೆಗಳಿಗೆ ಹೆಚ್ಚಿನ ಅವಕಾಶ, ಉತ್ತೇಜನ ಸಿಗಲಿದೆ ಎಂದರು.


  ಬೋಧಕರ ವೇತನದ ಮೇಲೆಯೇ ಎಲ್ಲರಿಗೂ ಕಣ್ಣು. ಆದರೆ, ಅಷ್ಟೇ ಕೆಲಸ, ಜವಾಬ್ದಾರಿ ಇದೆ. ಅದಕ್ಕಾಗಿ ಇಷ್ಟು ವೇತನ ನೀಡಲಾಗುತ್ತದೆ. ಇದನ್ನು ಬೋಧಕರು ಕೆಲಸದ ಮೂಲಕ ತೋರಿಸಿಕೊಡಬೇಕು ಎಂದು ಹೇಳಿದರು.


  ಉನ್ನತ ಶಿಕ್ಷಣ ದಾಖಲಾತಿ ಪ್ರಮಾಣ ರಾಜ್ಯದಲ್ಲಿ ಶೇ.35ರಷ್ಟಿದೆ. ಇದನ್ನು ಶೇ.50ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕೆ ಬೋಧಕರು ಸಜ್ಜಾಗಬೇಕು ಎಂದರು.

  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯದ ಮಕ್ಕಳು ವಿಫಲ


  ಕರ್ನಾಟಕ ರಾಜ್ಯ ಕೌಶಲಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ.ಗೌಡ ಮಾತನಾಡಿ, ಇಡೀ ಕಲಿಕಾ ಪ್ರಕ್ರಿಯೆ ಪಠ್ಯಕ್ರಮ ಕೇಂದ್ರೀತವಾಗಿದೆ. ಸ್ಪರ್ಧಾತ್ಮಕ ಯುಗಕ್ಕೆ ತಕ್ಕಂತೆ ಮಕ್ಕಳನ್ನು ತಯಾರು ಮಾಡುತ್ತಿಲ್ಲ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯದ ಮಕ್ಕಳು ವಿಫಲರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.


  ರೈಲ್ವೆ, ಆರ್‌ಬಿಐ, ಬ್ಯಾಂಕಿಂಗ್ ಹಾಗೂ ರಾಷ್ಟ್ರ ಮಟ್ಟದ ಸ್ವಾಯತ್ತ ಸಂಸ್ಥೆಗಳು ವರ್ಷಕ್ಕೆ 3 ಲಕ್ಷ ಹುದ್ದೆಗಳಿಗೆ ನೇಮಕಾತಿ ನಡೆಸುತ್ತವೆ. ಈ ಪೈಕಿ ರಾಜ್ಯದಿಂದ ಶೇ.2ರಷ್ಟು (600 ಜನರು) ಮಾತ್ರ ಆಯ್ಕೆಯಾಗುತ್ತಿದ್ದಾರೆ. ಈ ಕುರಿತು ಅರಿವಿನ ಕೊರತೆ ಇದೆ ಎಂದು ಹೇಳಲಾಗುವುದಿಲ್ಲ. 150 ಪಿಎಸ್‌ಐ ಹುದ್ದೆಗಳಿಗೆ 2 ಲಕ್ಷ ಅರ್ಜಿಗಳು ಬರುತ್ತವೆ. ಆದರೆ, ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ರಾಜ್ಯದವರು ಆಸಕ್ತಿ ತೋರುತ್ತಿಲ್ಲ. ಇದಕ್ಕೆ ಕಾರಣ ಕೌಶಲ ಕೊರತೆ ಎಂದು ಹೇಳಿದರು.


  ರಾಜ್ಯದಲ್ಲಿ ವರ್ಷಕ್ಕೆ 60 ಸಾವಿರ ಇಂಜಿನಿಯರ್‌ಗಳು ಉತ್ತೀರ್ಣರಾಗಿ ಹೊರಬರುತ್ತಿದ್ದಾರೆ. ಈ ಪೈಕಿ ಶೇ.10-12ರಷ್ಟು ವಿದ್ಯಾರ್ಥಿಗಳಿಗೆ ಕೆಲಸ ದೊರೆಯುತ್ತಿದೆ. 36 ಸಾವಿರ ವಿದ್ಯಾರ್ಥಿಗಳಿಗೆ ಕೆಲಸ ದೊರೆಯುತ್ತಿಲ್ಲ. ಆದ್ದರಿಂದ ಪಠ್ಯಕ್ರಮದೊಂದಿಗೆ ಔದ್ಯೋಗಿಕ ಕೌಶಲವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕಿದೆ ಎಂದರು.


  ರಾಜ್ಯ ಉನ್ನತ ಶಿಕ್ಷಣ ಪರಿಷತ್ ವಿಶೇಷಾಧಿಕಾರಿ ಡಾ.ಜಯಪ್ಪ, ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕುಲಸಚಿವೆ ವಿ.ಆರ್.ಶೈಲಜಾ, ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಡಿ.ಆನಂದ್, ಯೋಜನೆ ಉಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕ ಪ್ರೊ.ಎನ್.ನಾಗರಾಜು, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಯಿಂದ ಅಂದಾಜು 400 ಉಪನ್ಯಾಸಕರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts