More

  ಸಾಧಕರನ್ನು ಗುರುತಿಸುವ ಕಾರ್ಯ ಶ್ಲಾಘನೀಯ

  ರಾಯಚೂರು: ವಿವಿಧ ಕ್ಷೇತ್ರಗಳಲ್ಲಿ ಸಾಧಕರು ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದು, ಅವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಇದರಿಂದ ಅವರು ಮತ್ತಷ್ಟು ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪುರ ಹೇಳಿದರು.
  ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮಾತೋಶ್ರೀ ಮಹಾಂತಮ್ಮ ಶಿವಬಸವಪ್ಪ ಗೋನಾಳ ಪ್ರತಿಷ್ಠಾನದಿಂದ ಭಾನುವಾರ ಏರ್ಪಡಿಸಿದ್ದ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಅವರಿಗೆ ಸೂಕ್ತ ವೇದಿಕೆ ಒದಗಿಸುವುದರ ಜತೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕಾಗಿದೆ. ಪ್ರತಿಷ್ಠಾನ ಕಲಾವಿದರಿಗೆ ಬೆಳೆಸುವುದರ ಜತೆಗೆ ಅವರಿಗೆ ವೇದಿಕೆ ಒದಗಿಸುವ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.
  ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್.ಬಾಲಾಬಿ ಮಾತನಾಡಿ, ಜನಪದ ಅಜ್ಞಾನ ಕವಿಗಳಿಂದ ರಚಿತವಾದ ಸಾಹಿತ್ಯವಾಗಿದೆ. ಅಂತಹ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿದೆ. ಸರ್ಕಾರವೂ ಹೆಚ್ಚಿನ ಸಂಶೋಧನೆಗೆ ಒತ್ತು ನೀಡಬೇಕಾಗಿದೆ.
  ಪ್ರಶಸ್ತಿಗಳು ಮಾರಾಟದ ವಸ್ತುವಾಗಿರುವುದರಿಂದ ಇಂದಿನ ದಿನಗಳಲ್ಲಿ ಪ್ರಶಸ್ತಿಯ ವೌಲ್ಯಗಳು ಕುಸಿಯುವಂತಾಗಿದೆ. ಆದರೆ ಗೋನಾಳ ಪ್ರತಿಷ್ಠಾನದಂತಹ ಹಲವಾರು ಸಂಸ್ಥೆಗಳು ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದರಿಂದ ಪ್ರಶಸ್ತಿಗಳ ವೌಲ್ಯ ಅಲ್ಪ ಮಟ್ಟಿಗೆ ಉಳಿದುಕೊಳ್ಳುವಂತಾಗಿದೆ ಎಂದರು.
  ಮುಖಂಡ ಬಸವರಾಜಗೌಡ ಗಣೇಕಲ್ ಮಾತನಾಡಿ, ಕೃಷಿಯಿಂದ ಜನರು ವಿಮುಖರಾಗುತ್ತಿದ್ದು, ಆಧುನಿಕತೆ ಹೆಸರಿನಲ್ಲಿ ನಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಕಲಿಸುತ್ತಿಲ್ಲ. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗಿ ಹೊಲಗಳನ್ನು ತೋರಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
  ಈ ಸಂದರ್ಭದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಾೀಶ ಅರಳಿ ನಾಗರಾಜಗೆ ವಿಜಯಮಹಾಂತ ಅನುಗ್ರಹ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರದ ಗಣ್ಯರಿಗೆ ಮಹಾಂತಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಜೆ ಜರುಗಿದ ಜಾನಪದ ಸಂಭ್ರಮದಲ್ಲಿ ಗಾಯನ ಕಾರ್ಯಕ್ರಮ ಜರುಗಿತು.
  ಕಾರ್ಯಕ್ರಮದಲ್ಲಿ ಚೌಕಿಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು, ನ್ಯಾಯವಾದಿ ಶ್ರೀಕಾಂತರಾವ್, ಮುಖಂಡರಾದ ಎಸ್.ಎಲ್,ಕೇಶವರೆಡ್ಡಿ, ಗಣಪತಿ ಸಾಕ್ರೆ, ಪಾಗುಂಟಪ್ಪ, ಪ್ರತಿಷ್ಠಾನದ ಅಧ್ಯಕ್ಷ ಶರಣಪ್ಪ ಗೋನಾಳ, ಕಾರ್ಯದರ್ಶಿ ಪ್ರತಿಭಾ ಗೋನಾಳ ಉಪಸ್ಥಿತರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts