ನಾವು ಹೃದಯದಿಂದ ರಾಷ್ಟ್ರವಾದಿಗಳು: ವಂದೇ ಮಾತರಂ ಹಾಡಿದರಷ್ಟೇ ದೇಶಪ್ರೇಮಿಗಳಲ್ಲ ಎಂದ ಕಮಲ್​ನಾಥ್​

ಭೋಪಾಲ್​: ನಾವು ಹೃದಯದಿಂದ ರಾಷ್ಟ್ರವಾದಿಗಳು. ಒಂದು ದಿನ ವಂದೇ ಮಾತರಂ, ರಾಷ್ಟ್ರಗೀತೆ ಹಾಡಿದವರೆಲ್ಲ ದೇಶಪ್ರೇಮಿಗಳಾಗಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್​ ನಾಥ್​ ಹೇಳಿದ್ದಾರೆ.

ಮಧ್ಯಪ್ರದೇಶದ ಸಚಿವಾಲದಲ್ಲಿ ತಿಂಗಳ ಆರಂಭದ ಮೊದಲ ದಿನ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡುವ ಸಂಪ್ರದಾಯವನ್ನು ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಜಾರಿಗೆ ತಂದಿತ್ತು. ಆದರೆ, ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಈ ಸಂಪ್ರದಾಯಕ್ಕೆ ತಡೆ ನೀಡಿದೆ. ತಮ್ಮ ಸರ್ಕಾರ ಜಾರಿಗೆ ತಂದ ಸಂಪ್ರದಾಯಕ್ಕೆ ತಡೆ ನೀಡುತ್ತಲೇ ಕೆರಳಿರುವ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಸಿಎಂ ಕಮಲ್​ ನಾಥ್​ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

” ರಾಷ್ಟ್ರಗೀತೆ ದೇಶಪ್ರೇಮದ ಸಂಕೇತ. ಸಚಿವಾಲಯಗಳಲ್ಲಿ ತಿಂಗಳ ಮೊದಲ ದಿನ ರಾಷ್ಟ್ರಗೀತೆ, ಒಂದೇ ಮಾತರಂ ಹಾಡುವುದನ್ನು ಮತ್ತೆ ಜಾರಿಗೆ ತರಬೇಕು. ನಾವು ಜಾರಿಗೆ ತಂದಿರುವ ಈ ಸತ್ಸಂಪ್ರದಾಯವನ್ನು ಕಾಂಗ್ರೆಸ್​ ಮುಂದುವರಿಸಿಕೊಂಡು ಹೋಗಬೇಕು ಎಂದು ನಾನು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ. ವಂದೇ ಮಾತರಂ ಕೇವಲ ಗೀತೆಯಲ್ಲ. ಬದಲಿಗೆ ಅದು ಮಂತ್ರ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ರಾಷ್ಟ್ರ ಮೊದಲು ಎಂಬುದನ್ನು ಎಲ್ಲರೂ ಅರಿಯಬೇಕು,” ಎಂದು ಚೌಹಾಣ್​ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಕಮಲ್​ ನಾಥ್​, ” ರಾಷ್ಟ್ರಗೀತೆಯ ವಿರುದ್ಧವಾಗಿ ನಡೆದುಕೊಳ್ಳುವ ಅಥವಾ ಅದನ್ನು ಪ್ರತಿಭಟಿಸುವ ಯಾವುದೇ ಉದ್ದೇಶ ಸರ್ಕಾರದ್ದಲ್ಲ. ಹೊಸ ಮಾದರಿಯ ಆದೇಶ ಜಾರಿಗೆ ತರುವ ಉದ್ದೇಶದಿಂದ ಸಚಿವಾಲಯದಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಸದ್ಯಕ್ಕೆ ತಡೆ ನೀಡಿದ್ದೇವೆ. ವಂದೇ ಮಾತರಂ ಹಾಡದವರು ದೇಶಪ್ರೇಮಿಗಳಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಅಲ್ಲದೆ, ನಾವು ಹೃದಯದಿಂದ ರಾಷ್ಟ್ರವಾದಿಗಳು ಎಂದು ನಂಬಿದ್ದೇವೆ. ವಂದೇ ಮಾತರಂ ಹಾಡಿದ್ದವರೆಲ್ಲ ದೇಶಭಕ್ತರಾಗಲು ಸಾಧ್ಯವಿಲ್ಲ. ದೇಶಪ್ರೇಮವನ್ನು ರಾಷ್ಟ್ರಗೀತೆ ಹಾಡುವ ಮೂಲಕ ಅಳೆಯಲು ಸಾಧ್ಯವಿಲ್ಲ ಎಂದು ಅವರು ತಿರುಗೇಟು ನೀಡಿದರು.