ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ಬಹಿರಂಗ ಹೇಳಿಕೆ ನೀಡಲಾರಂಭಿಸಿದ್ದ ಬಿಜೆಪಿಯ ಅತೃಪ್ತ ಶಾಸಕರೆಲ್ಲ ಸಿಎಂ ಯಡಿಯೂರಪ್ಪ ಗಟ್ಟಿಧ್ವನಿಯಲ್ಲಿ ಗುಟುರು ಹಾಕಿದ ಬಳಿಕ ಮೌನಕ್ಕೆ ಶರಣಾಗಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ಪ್ರತಿಧ್ವನಿಸಿದ್ದ ಭಿನ್ನಧ್ವನಿ ಬಹುತೇಕ ಕ್ಷೀಣಿಸಿದಂತಾಗಿದೆ.
ಸಚಿವ ಸ್ಥಾನ ವಂಚಿತರ ಪೈಕಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಎಂದಿನ ಶೈಲಿಯಲ್ಲಿ ವಾಗ್ದಾಳಿ ಮುಂದುವರಿಸಿರುವುದನ್ನು ಬಿಟ್ಟರೆ ಉಳಿದವರು ದಿಢೀರ್ ಮೌನಕ್ಕೆ ಶರಣಾಗಿದ್ದಾರೆ.
ಸಚಿವ ಸ್ಥಾನ ಸಿಗಲಿಲ್ಲವೆಂಬ ಸಿಟ್ಟು, ಬೇಡವೆಂದವರನ್ನು ಸೇರಿಸಿಕೊಂಡ ಸೆಡವು ಇದ್ದಕ್ಕಿದ್ದಂತೆ ತಣ್ಣಗಾದದ್ದು ಅಚ್ಚರಿ ಮೂಡಿಸಿದೆ. ಇದು ನಿಗೂಢ ಬೆಳವಣಿಯ ಮುನ್ಸೂಚನೆ ಎಂದೂ ಹೇಳಲಾಗುತ್ತಿದೆ. ಬಹಿರಂಗ ಆಕ್ರೋಶ, ಆರೋಪಗಳಿಂದ ಸರ್ಕಾರದ ವರ್ಚಸ್ಸು, ಪಕ್ಷದ ಘನತೆ-ಗೌರವಕ್ಕೆ ಚ್ಯುತಿ, ಶಿಸ್ತಿಗೆ ವಿರುದ್ಧವಾದ ನಡೆ ಎಂಬ ಬಿಎಸ್ವೈ ಖಡಕ್ ಎಚ್ಚರಿಕೆ ಪರಿಣಾಮ ಬೀರಿದೆ. ಇನ್ನೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರದಿಂದ 2 ದಿನ ರಾಜ್ಯ ಪ್ರವಾಸ ಕೈಗೊಳ್ಳಲಿರುವುದು ಅತೃಪ್ತರ ಹಠಾತ್ ಮೌನಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಸಚಿವ ಸಂಪುಟ ವಿಸ್ತರಣೆ, ಅಸಮಾಧಾನ, ಸಿಡಿ ಅಸ್ತ್ರ, ಸಿಎಂ ವಿರುದ್ಧದ ದೂರುಗಳಿಗೆ ಅಮಿತ್ ಷಾ ಕಿವಿಗೊಡಬಹುದೇ ಹೊರತು, ಮಹತ್ವ ನೀಡುವುದಿಲ್ಲ.
ಆಕಾಂಕ್ಷಿಗಳ ಸಂಖ್ಯೆ ದೊಡ್ಡದು, ಪೈಪೋಟಿ ಹೆಚ್ಚಿದ್ದಾಗ ಇಂತಹವೆಲ್ಲ ಸಹಜ. ಪಕ್ಷ, ಸರ್ಕಾರಕ್ಕಿಂತ ವೈಯಕ್ತಿಕ ಹಿತದ ಅಹವಾಲುಗಳಿಗೆ ಬೆಲೆ ಸಿಗುವುದಿಲ್ಲ, ಚರ್ಚೆಗೂ ಅವಕಾಶ ನೀಡುವುದಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಹೆಚ್ಚೆಂದರೆ ಕೆಲವರ ಪ್ರತ್ಯೇಕ ಭೇಟಿ ಅಪೇಕ್ಷೆಯನ್ನು ಷಾ ಈಡೇರಿಸಬಹುದು. ಅಹವಾಲು ಆಲಿಸಿ ತಪು್ಪ ಸಂದೇಶ ರವಾನೆಯಾಗದಂತೆ ನೋಡಿಕೊಳ್ಳುವುದಕ್ಕೆ ಈ ‘ಮಾತುಕತೆ’ ಸೀಮಿತವಾಗಿರುವ ಸಾಧ್ಯತೆ ಇದೆ. ಅತೃಪ್ತಿ, ಅಸಮಾಧಾನ ಹೊರಬೀಳುವ ಕುರಿತು ವರಿಷ್ಠರಿಗೆ ಮುನ್ನಂದಾಜಿತ್ತು. ಸಿಎಂ ಬಿಎಸ್ವೈ ಗಟ್ಟಿತನ, ನಾಯಕತ್ವದಲ್ಲಿ ವಿಶ್ವಾಸವೂ ಇತ್ತು. ಹೀಗಾಗಿ ವೈಯಕ್ತಿಕ ನೆಲೆಗಟ್ಟಿನ ವಿರೋಧಕ್ಕೆ ವರಿಷ್ಠರು ಮಣೆ ಹಾಕುವುದಿಲ್ಲ ಎಂದು ಮೂಲಗಳು ಹೇಳಿವೆ.
ಅರುಣ್ ಸಿಂಗ್ರನ್ನು ಭೇಟಿಯಾದ ರೇಣುಕಾಚಾರ್ಯ: ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಶುಕ್ರವಾರ ದೆಹಲಿಯಲ್ಲಿ ಭೇಟಿಯಾಗಿ ಸುದೀಘ ಚರ್ಚೆ ನಡೆಸಿದ್ದಾರೆ. ಸಿ.ಪಿ.ಯೋಗೇಶ್ವರ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ದಾಖಲೆಗಳ ಸಹಿತ ದೂರು ಸಲ್ಲಿಸಿ, ಸಚಿವ ಸಂಪುಟದಿಂದ ಅವರನ್ನು ಕೈಬಿಡಲು ಸಿಎಂ ಬಿಎಸ್ವೈಗೆ ನಿರ್ದೇಶಿಸಬೇಕು ಎಂದು ಮೊರೆಯಿಟ್ಟಿದ್ದಾರೆ.
ಪಕ್ಷನಿಷ್ಠ ಕಾರ್ಯಕರ್ತರ ನಿಸ್ವಾರ್ಥ ಸೇವೆ, ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ. ಇವತ್ತು ನಾವೇನೇ ಆಗಿದ್ದರೂ ಅದು ನಮ್ಮ ತಳಮಟ್ಟದ ಕಾರ್ಯಕರ್ತ ಕೊಟ್ಟ ಭಿಕ್ಷೆಯೇ ಹೊರತು ಬೇರೆ ಏನೂ ಅಲ್ಲ.
| ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಯಡಿಯೂರಪ್ಪಗೆ ವರಿಷ್ಠರ ಬಲ
ಕೇಂದ್ರ ನಾಯಕರ ಆಶೀರ್ವಾದ ಇರುವ ಕಾರಣ ಯಾರೂ ಏನೂ ಮಾಡಲಾಗದು. ಬೇಕಾದರೆ ವರಿಷ್ಠರ ಬಳಿಗೆ ಹೋಗಿ ಎಂದು ಸಿಎಂ ಬಿಎಸ್ವೈ ಒಡ್ಡಿರುವ ಸವಾಲು ಅಸಮಾಧಾನಿತರ ಬಾಯಿ ಮುಚ್ಚಿಸಿದೆ. ಬಹಿರಂಗ ಹೇಳಿಕೆ ವರವಾಗುವ ಬದಲು ಶಾಪವಾದೀತು ಎಂದು ಪಕ್ಷನಿಷ್ಠ, ಶಿಸ್ತಿಗೆ ಬದ್ಧವಾದ ಶಾಸಕರು ಭಾವಿಸಿ, ನೋವು ನುಂಗಿಕೊಂಡಿದ್ದಾರೆ. ಅಲ್ಲದೆ, ವರಿಷ್ಠರೊಂದಿಗೆ ರ್ಚಚಿಸಿದ ನಂತರವೇ ಪಟ್ಟಿ ಅಂತಿಮವಾಗಿದೆ ಎನ್ನುವುದೂ ಅಪಸ್ವರ ತಗ್ಗುವುದಕ್ಕೆ ಮತ್ತೊಂದು ಕಾರಣವಾಗಿದೆ. ಏನೇ ಸಮಸ್ಯೆಯಿದ್ದರೂ ಪಕ್ಷದ ವೇದಿಕೆಯೊಳಗೆ ಪ್ರಸ್ತಾಪಿಸಿ ಬಗೆಹರಿಸಿಕೊಳ್ಳಬೇಕು ಎಂಬ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವ ಸಾಧ್ಯತೆಯಿದ್ದು, ಪರಿಸ್ಥಿತಿ ‘ಬೂದಿ ಮುಚ್ಚಿದ ಕೆಂಡ’ದಂತಿದೆ ಎನ್ನಲಾಗಿದೆ.