ತ.ನಾಡು 18 ಬಂಡಾಯ ಶಾಸಕರ ಅನರ್ಹ ಆದೇಶ ಎತ್ತಿಹಿಡಿದ ಹೈಕೋರ್ಟ್

ಚೆನ್ನೈ: ತಮಿಳುನಾಡಿನ ಆಡಳಿತ ಪಕ್ಷ ಎಐಎಡಿಎಂಕೆಯಿಂದ ಬಂಡಾಯವೆದ್ದಿದ್ದ 18 ಜನ ಶಾಸಕರ ಅನರ್ಹತೆಯನ್ನು ಮದ್ರಾಸ್​ ಹೈಕೋರ್ಟ್​ ಇಂದು ಎತ್ತಿ ಹಿಡಿದಿದ್ದು, ಮುಖ್ಯಮಂತ್ರಿ ಇ. ಪಳಿನಿಸ್ವಾಮಿ (ಇಪಿಎಸ್​) ಸರ್ಕಾರ ಸೇಫ್​ ಆಗಿದೆ.

ಈ 18 ಜನ ಶಾಸಕರು ಬಂಡಾಯ ನಾಯಕರಾದ ವಿ.ಕೆ.ಶಶಿಕಲಾ ಮತ್ತು ಟಿಟಿವಿ ದಿನಕರನ್​ಗೆ ನಿಷ್ಠರಾಗಿದ್ದವರಾಗಿದ್ದರು. ಅವರ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಹೈಕೋರ್ಟ್​ನ ತೀರ್ಪಿನಿಂದ ಬಂಡಾಯವೆದ್ದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಪಕ್ಷ ಸ್ಥಾಪಿಸಿದ್ದ ಟಿಟಿವಿ ದಿನಕರನ್​ಗೆ ತೀವ್ರ ಹಿನ್ನಡೆಯಾಗಿದೆ. ಈ ಶಾಸಕರೇ ಬಂಡಾಯವೆದ್ದಿದ್ದನ್ನು ಮುಂದಿಟ್ಟುಕೊಂಡು ಪಳಿನಿಸ್ವಾಮಿ, ಪನ್ನೀರಸೆಲ್ವಂ ಅವರನ್ನು ಅಧಿಕಾರದಿಂದ ಕೆಳಗಿಳಿಸಿ, ಸರ್ಕಾರದ ಮೇಲೆ ಹಿಡಿತ ಸಾಧಿಸಲು ಹೊರಟಿದ್ದ ದಿನಕರನ್​ ವಿರುದ್ಧವಾಗಿ ತೀರ್ಪು ಬಂದಿದೆ.

ಈ ಶಾಸಕರು ಕಳೆದ ವರ್ಷ ತಮ್ಮ ಸದಸ್ಯತ್ವವನ್ನು ಬಿಡುವುದಾಗಿ ಹೇಳಿದ್ದಲ್ಲದೆ, ಮುಖ್ಯಮಂತ್ರಿ ಪಳಿನಿಸ್ವಾಮಿಯವರಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದರು. ಈ ಕಾರಣಕ್ಕೆ ಅವರನ್ನು ಸ್ಪೀಕರ್​ ಪಿ.ಧನಪಾಲ್​ ಅನರ್ಹಗೊಳಿಸಿದ್ದರು. ಅದಾದ ಬಳಿಕ ದಿನಕರನ್​ ಎಎಂಎಂಕೆ ಪಕ್ಷ ಸ್ಥಾಪಿಸಿದ್ದರು.
ಈಗ ನ್ಯಾಯಾಧೀಶ ಎಂ.ಸತ್ಯನಾರಾಯಣನ್​ ಅವರು ಸ್ಪೀಕರ್​ ನೀಡಿದ್ದ ಸದಸ್ಯತ್ವ ಅನರ್ಹ ಆದೇಶವನ್ನು ಎತ್ತಿಹಿಡಿದಿದ್ದಾರೆ. ಈ ತೀರ್ಪಿನಿಂದ ತಮಿಳುನಾಡು ಸರ್ಕಾರಕ್ಕೆ ಏನೂ ಸಮಸ್ಯೆಯಿಲ್ಲದೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಸದ್ಯ ಸರ್ಕಾರದ ಶಾಸನಸಭೆಯ ಸದಸ್ಯರ ಸಂಖ್ಯೆ 234ರಿಂದ 214ಕ್ಕೆ ಇಳಿದಿದೆ. ಆಡಳಿತ ಪಕ್ಷದಲ್ಲಿ 116 ಜನರಿದ್ದಾರೆ. ವಿಶ್ವಾಸ ಮತ ಯಾಚಿಸಿದರೆ 107 ಮತಗಳು ನಿಶ್ಚಿತವಾಗಿ ದೊರೆಯುತ್ತವೆ.