ಅತೃಪ್ತ ಶಾಸಕರ ಅರ್ಜಿ ವಿಚಾರಣೆ: ಮಂಗಳವಾರದವರೆಗೂ ಯಥಾಸ್ಥಿತಿ ಕಾಪಾಡಲು ಸ್ಪೀಕರ್​ಗೆ ಸುಪ್ರೀಂ ಸೂಚನೆ

ಬೆಂಗಳೂರು/ದೆಹಲಿ: ಸ್ಪೀಕರ್ ರಮೇಶ್​ಕುಮಾರ್​ ಕ್ರಮ ವಿರೋಧಿಸಿ ಅತೃಪ್ತರು ಶಾಸಕರು ಸಲ್ಲಿಸಿದ್ದ ಅರ್ಜಿ ಹಾಗೂ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸಮಯ ಕೋರಿ ಸ್ಪೀಕರ್​ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಶುಕ್ರವಾರ ಬೆಳಗ್ಗೆ ನಡೆಸಿದ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲು ನಿರ್ದೇಶಿಸಿದ್ದು, ಮಂಗಳವಾರ ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪ್ರಕರಣ ಸಾಂವಿಧಾನಿಕ ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ. ಶಾಸಕರ ರಾಜೀನಾಮೆ ಪ್ರಹಸನ ಶಾಸಕಾಂಗ ಮತ್ತು ನ್ಯಾಯಾಂಗ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಯಥಾಸ್ಥಿತಿಗೆ ಆದೇಶಿಸಲಾಗಿದ್ದು, ಮಂಗಳವಾರದವರೆಗೆ ಸ್ಪೀಕರ್​ ರಮೇಶ್​ಕುಮಾರ್​ ಅವರು ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತಿಲ್ಲ. ಶಾಸಕರ ಅನರ್ಹತೆ ಬಗ್ಗೆಯೂ ತೀರ್ಮಾನ ಕೈಗೊಳ್ಳುವಂತಿಲ್ಲ. ಮಂಗಳವಾರದ ವಿಚಾರಣೆಯ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ

ಸುದೀರ್ಘವಾಗಿ ನಡೆದ ವಿಚಾರಣೆ
ಸ್ಪೀಕರ್​ ಕ್ರಮ ಖಂಡಿಸಿ ಅತೃಪ್ತ ಶಾಸಕರು ಹಾಗೂ ಶಾಸಕರ ರಾಜೀನಾಮೆ ಅಂಗೀಕರಿಸಲು ಸಮಯಬೇಕೆಂಬ ಸ್ಪೀಕರ್​ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್​​ ಸುದೀರ್ಘವಾಗಿ ವಿಚಾರಣೆ ನಡೆಸಿತು. ಮೊದಲಿಗೆ ಅತೃಪ್ತ ಶಾಸಕರ ಪರ ವಾದ ಮಂಡಿಸಿದ ಅಡ್ವೊಕೇಟ್​ ಮುಕುಲ್ ರೋಹಟಗಿ ನಿನ್ನೆ ಸ್ಪೀಕರ್ ಆಡಿದ್ದ ಮಾತಿಗೆ(ಕೋರ್ಟ್​ ನನಗೆ ನಿರ್ದೇಶನ ನೀಡುವಂತಿಲ್ಲ) ಆಕ್ಷೇಪ ವ್ಯಕ್ತಪಡಿಸಿದರು. ರಾಜೀನಾಮೆ ಅಂಗೀಕಾರಕ್ಕೆ 10 ಸೆಕೆಂಡ್ ಸಾಕು, ಆದರೆ, ಸ್ಪೀಕರ್ ಯಾಕೆ ಪ್ರಕರಣವನ್ನು ವಿಳಂಬ ಮಾಡುತ್ತಿದ್ದಾರೆ. ಕಾಂಗ್ರೆಸ್ ಈಗ ವಿಪ್ ಜಾರಿ ಮಾಡಿದೆ. ವಿಪ್ ಜಾರಿ ಮಾಡಿ ವಿನಾಕಾರಣ ಸಿಲುಕಿಸಲು ಯತ್ನಿಸುತ್ತಿದೆ. ರಾಜೀನಾಮೆಯನ್ನು ಹಾಗೆ ಇಟ್ಟು ಅನರ್ಹಗೊಳಿಸುವುದು ಕಾಂಗ್ರೆಸ್ ತಂತ್ರವಾಗಿದೆ. ಸ್ಪೀಕರ್ ಉದ್ದೇಶಪೂರ್ವಕವಾಗಿಯೇ ಸಮಯ ತಳ್ಳುತ್ತಿದ್ದಾರೆ ಎಂದು ವಾದ ಮಂಡನೆ ಮಾಡಿದರು.

ಸ್ಪೀಕರ್​ ಪರ ವಾದ ಮಂಡಿಸಿದ ಅಡ್ವೊಕೇಟ್ ಅಭಿಷೇಕ್ ಮನು ಸಿಂಘ್ವಿ​ ರಾಜೀನಾಮೆ ಅಂಗೀಕಾರಕ್ಕೆ ಸಮಯ ಹಿಡಿಯುತ್ತದೆ. ಸದನದ ನೀತಿ-ನಿಯಮಗಳಂತೆ ಸ್ಪೀಕರ್ ನಡೆದುಕೊಳ್ತಿದ್ದಾರೆ. ರಾಜೀನಾಮೆ ನೀಡಿದ ಶಾಸಕರಿಂದ ಪಕ್ಷ ವಿರೋಧಿ ಚಟುವಟಿಕೆ ನಡೆದಿದೆ. ಸ್ಪೀಕರ್​ಗೆ ತೃಪ್ತಿ ಆದರೆ ಮಾತ್ರ ರಾಜೀನಾಮೆ ಅಂಗೀಕಾರವಾಗುತ್ತದೆ. ನಿಯಮದ ಪ್ರಕಾರ ಸ್ಪೀಕರ್​ ಕೈಗೆ ರಾಜೀನಾಮೆ ಕೊಡಬೇಕು. ಯಾರದ್ದೋ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಶಾಸಕರು ಹೋಟೆಲ್​ನಲ್ಲಿ ಅಡಗಿದ್ದೇಕೆ? ಶಾಸಕರ ವಿಚಾರಣೆಗೆ ಸಾಕಷ್ಟು ಸಮಯ ಬೇಕಾಗುತ್ತದೆ. ರಾಜೀನಾಮೆ ಅಂಗೀಕರಿಸಲ್ಲ ಎಂದು ಸ್ಪೀಕರ್ ಹೇಳಿಲ್ಲ. ಆದರೆ, ರಾಜೀನಾಮೆ ಅಂಗೀಕಾರ ಪರಿಶೀಲಿಸಲು ಸಮಯ ಕೇಳಿದ್ದಾರೆ ಎಂದು ಸುಪ್ರೀಂಗೆ ಮನವರಿಕೆ ಮಾಡಿದರು.

ಇದೇ ವೇಳೆ ರಾಜೀನಾಮೆಗಿಂತ ಮೊದಲು ಅನರ್ಹತೆ ತೀರ್ಮಾನಿಸುತ್ತೀರಾ ಎಂದು ಸಿಜೆಐ ರಂಜನ್ ಗೊಗೊಯ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್ ಮನು ಸಿಂಘ್ವಿ ಹೌದು ಎಂದು ಉತ್ತರಿಸಿದರು. ಅದಕ್ಕೆ ಸುಪ್ರೀಂ ಸಿಜೆಐ ಒಳ್ಳೆಯದು ಎಂದು ಹೇಳಿದರು. ಈ ಮಧ್ಯೆ ಸ್ಪೀಕರ್ ನಡೆಗೆ ಗರಂ ಆದ ಸಿಜೆಐ, ಸುಪ್ರೀಂಕೋರ್ಟ್ ಅನ್ನೇ ಸ್ಪೀಕರ್ ಪ್ರಶ್ನೆ ಮಾಡ್ತಿದ್ದಾರೆಯೇ? ನಾವು ಸ್ಪೀಕರ್ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಬಾರದೆ? ಸ್ಪೀಕರ್ ನಮಗೆ ಸವಾಲು ಹಾಕುತ್ತಿದ್ದಾರೆಯೇ? ನಾವು ಕೈಕಟ್ಟಿ ಕೂರಬೇಕೆಂದು ನಿಮ್ಮ ನಿಲುವೇ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡರು.

ಸಿಎಂ ಕುಮಾರಸ್ವಾಮಿ ಪರ ವಾದ ಮಂಡನೆ ಮಾಡಿದ ಅಡ್ವೊಕೇಟ್​ ರಾಜೀವ್ ಧವನ್, ಸಿಎಂಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಇದೆ. ಇಂತಹ ಪ್ರಕರಣಗಳಲ್ಲಿ ಗವರ್ನರ್ ಹಸ್ತಕ್ಷೇಪ ಇಲ್ಲ. ಸರ್ಕಾರಕ್ಕೆ ವಿಶ್ವಾಸಮತ ಇಲ್ಲವೆಂದು ದೂರುದಾರರು ಹೇಳ್ತಿದ್ದಾರೆ. ದುರಾಡಳಿತಕ್ಕೆ ಬೇಸತ್ತು ಶಾಸಕರು ರಾಜೀನಾಮೆ ಎನ್ನುತ್ತಿದ್ದಾರೆ. ಇದು ಸಕಾರಣವಲ್ಲ. ರಾಜೀನಾಮೆ ನೀಡಿದ ಶಾಸಕರಿಂದ ಜನಾದೇಶಕ್ಕೆ ಚ್ಯುತಿಯಾಗಿದೆ. ನೇರವಾಗಿ ಸುಪ್ರೀಂಕೋರ್ಟ್ ಈ ಅರ್ಜಿ ಸ್ವೀಕರಿಸಬಾರದಿತ್ತು. ನಿನ್ನೆ ಏಕಪಕ್ಷೀಯವಾಗಿ ಆದೇಶ ನೀಡಿದ್ದೀರಾ, ಹೀಗಾಗಿ ಆರ್ಟಿಕಲ್ 32 ಇಲ್ಲಿ ಅನ್ವಯ ಆಗಲ್ಲ. ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡಿದ್ದಾರೆ. ಸಿಎಂಗೆ ವಿಧಾನಸಭೆಯಲ್ಲಿ ವಿಶ್ವಾಸ ಮತ ಇದೆ ಎಂದು ಸ್ಪಷ್ಟನೆ ನೀಡಿದರು.

Leave a Reply

Your email address will not be published. Required fields are marked *