ಎಚ್.ಡಿ.ಕೋಟೆ: ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವುದರ ಜತೆಗೆ ಸಹ ಶಿಕ್ಷಕರನ್ನು ಶಾಲೆಗೆ ಮರು ನಿಯೋಜಿಸುವಂತೆ ಒತ್ತಾಯಿಸಿ ತಾಲೂಕಿನ ಶಿರಮಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರು ವಿದ್ಯಾರ್ಥಿಗಳು ಪಾಲಕರ ಜತೆಗೂಡಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಮಯಕ್ಕೆ ಸರಿಯಾಗಿ ಶಾಲೆಗೆ ಬಾರದ, ಸರಿಯಾಗಿ ಪಾಠ ಮಾಡದ, ಸಹ ಶಿಕ್ಷಕರನ್ನು ನಿಂದಿಸುತ್ತಿದ್ದರ ಕುರಿತು ಮುಖ್ಯ ಶಿಕ್ಷಕ ಎಚ್.ಎಂ.ಪುಟ್ಟರಾಜು, ಕನ್ನಡ, ನಲಿ-ಕಲಿ ಶಿಕ್ಷಕಿಯರಾಗಿದ್ದ ಗೌರಮ್ಮ ಮತ್ತು ಶಿಲ್ಪಾ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸಿದರು. ಇದರಿಂದ ಶಾಲೆಯಲ್ಲಿ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ. ಹೀಗಾಗಿ ಉತ್ತಮ ಶಿಕ್ಷಕರಾದ ಗೌರಮ್ಮ, ಶಿಲ್ಪಾ ಅವರನ್ನು ಇಲ್ಲಿಗೆ ಮರು ನಿಯೋಜಿಸಿ, ಮುಖ್ಯ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶಿಕ್ಷಣ ಸಂಯೋಜಕರಾದ ಚಿಕ್ಕನಾಯ್ಕ, ನಂಜರಾಜು, ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಪ್ರತಿಭಟನೆ ಕೈ ಬಿಟ್ಟು ಶಾಲೆಗೆ ಹೋಗುವಂತೆ ವಿದ್ಯಾರ್ಥಿಗಳ ಮನವೊಲಿಸಿದ ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಎಸ್‌ಡಿಎಂಸಿ ಉಪಾಧ್ಯಕ್ಷೆ ಸೌಮ್ಯಾ, ಸದಸ್ಯರಾದ ಈರೇಗೌಡ, ಬೀರೇಗೌಡ, ಸೋಮಣ್ಣ ಇತರರು ಹಾಜರಿದ್ದರು.