ಕೋಲ್ಕತದಲ್ಲಿ ಕಿರಿಯ ವೈದ್ಯರ ಪ್ರತಿಭಟನೆ: ಸಿಎಂ ಮಮತಾ ಬ್ಯಾನರ್ಜಿಗೆ ಒಳಗಿನವರಿಂದಲೇ ಮುಜುಗರ!

ಕೋಲ್ಕತ: ಯಾವುದೇ ವಿಷಯದಲ್ಲಿ ಹೊರಗಿನವರಿಂದ ವಿರೋಧ ಬಂದಾಗ ಅದನ್ನು ಸುಲಭವಾಗಿ ಎದುರಿಸಬಹುದು. ಆದರೆ, ಮನೆಯ ಒಳಗಿನವರಿಂದಲೇ ಬಂದಾಗ ಪರಿಸ್ಥಿತಿ ನಿರ್ವಹಿಸುವುದು ತುಸು ಕಷ್ಟದ ಕೆಲಸ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಪರಿಸ್ಥಿತಿಯೂ ಸದ್ಯ ಇದೇ ಆಗಿದೆ.

ಕೋಲ್ಕತದಲ್ಲಿ ಕಿರಿಯ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಿಂದ ದೀದಿ ತುಂಬಾ ಸಿಟ್ಟಾಗಿದ್ದಾರೆ. ಇದರ ಹಿಂದೆ ‘ಹೊರಗಿನವರ’ ಕೈವಾಡ ಇದೆ ಎಂಬ ಅವರ ನಂಬಿಕೆ ಇದಕ್ಕೆ ಕಾರಣ. ಹಾಗಾಗಿ ಅವರು, ಇನ್ನು ನಾಲ್ಕು ಗಂಟೆಗಳೊಳಗೆ ಪ್ರತಿಭಟನೆ ನಿಲ್ಲಿಸಿ ಕರ್ತವ್ಯಕ್ಕೆ ಮರಳಬೇಕು ಎಂದು ಅವರು ಪ್ರತಿಭಟನಾಕಾರರಿಗೆ ತಾಕೀತು ಮಾಡಿದ್ದರು. ಆದರೆ, ಅವರ ಈ ಹೇಳಿಕೆ ಅವರ ‘ಮನೆಯೊಳಗಿನವರಿಗೆ’ ಇಷ್ಟವಾಗಿಲ್ಲ!

ದೀದಿಯ ಈ ಹೇಳಿಕೆ ಇಷ್ಟವಾಗದ ಅವರ ‘ಮನೆಯೊಳಗಿನವರು’ ಯಾರು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಒಬ್ಬರು ಸ್ವತಃ ಅವರ ಸೋದರ ಸಂಬಂಧಿ ಆಗಿದ್ದರೆ, ಮತ್ತೊಬ್ಬರು ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವವರ ಪುತ್ರಿ!

ಹೌದು. ರೋಗಿಯ ಕಡೆಯವರು ಎನ್​ಆರ್​ಎಸ್​ ಕಾಲೇಜು ಮತ್ತು ಆಸ್ಪತ್ರೆಯ ಕಿರಿಯ ವೈದ್ಯರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಜಾಧವ್​ಪುರದ ಕೆಪಿಸಿ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇವರಲ್ಲಿ ದೀದಿಯ ಸಹೋದರ ಕಾರ್ತಿಕ್​ ಅವರ ಪುತ್ರ ಅಬೇಶ್​ ಕೂಡ ಸೇರಿದ್ದಾರೆ. ಪಶ್ಚಿಮ ಬಂಗಾಳದ ನಗರಾಭಿವೃದ್ಧಿ ಸಚಿವ ಫಿರ್ಹಾದ್​ ಹಕೀಂ ಅವರ ಪುತ್ರಿ ಶಬ್ಬಾ ಹಕೀಂ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕಿರಿಯ ವೈದ್ಯರ ಮೇಲಿನ ಹಲ್ಲೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ದೀದಿ ನೀಡಿದ್ದ 4 ಗಂಟೆಗಳ ಗಡುವನ್ನೂ ಉಲ್ಲಂಘಿಸಿ ಇವರು ಪ್ರತಿಭಟನೆ ಮಾಡುತ್ತಿರುವುದು ವಿಶೇಷ. (ಏಜೆನ್ಸೀಸ್​)

Leave a Reply

Your email address will not be published. Required fields are marked *