ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ಉಪ್ಪಿ ಪ್ರಜಾಕೀಯದ ಬಗ್ಗೆ ಹೇಳಿದ್ದು ಹೀಗೆ…

ಬೆಂಗಳೂರು: ರಿಯಲ್​ ಸ್ಟಾರ್​ ಉಪೇಂದ್ರ ಕತ್ರಿಗುಪ್ಪೆ ನಿವಾಸದಲ್ಲಿ ಸ್ನೇಹಿತರು, ಅಭಿಮಾನಿಗಳ ಜತೆ ಜನ್ಮದಿನ ಆಚರಿಸಿಕೊಂಡರು.
ಉಪ್ಪಿ 51ನೇ ವರ್ಷಕ್ಕೆ ಕಾಲಿಟ್ಟಿದ್ದು ಮಧ್ಯರಾತ್ರಿ ಕೇಕ್​ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ನೂರಾರು ಅಭಿಮಾನಿಗಳು ಆಗಮಿಸಿ ಶುಭ ಕೋರಿ, ತಮ್ಮ ನೆಚ್ಚಿನ ನಟನ ಜತೆ ಸೆಲ್ಫೀ ತೆಗೆದುಕೊಂಡು ಸಂಭ್ರಮಪಟ್ಟರು.

ಈ ವೇಳೆ ಮಾತನಾಡಿದ ಉಪೇಂದ್ರ, 50 ವರ್ಷಗಳಲ್ಲಿ ನಾನೆಂದೂ ನನ್ನ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಸಿನಿಮಾ ಮಾಡಲು ಶುರುಮಾಡಿದ ಮೇಲೆ ಅಭಿಮಾನಿಗಳೇ ಆಚರಿಸಿಕೊಂಡು ಬಂದಿದ್ದಾರೆ. ಹಾಗಾಗೇ ಈ ದಿನವನ್ನು ಫ್ಯಾನ್ಸ್​ ಡೇ ಎಂದೇ ಕರೆಯುತ್ತೇನೆ. ಆದರೆ ಅಭಿಮಾನಿಗಳಲ್ಲಿ ಈ ಬಾರಿ ಒಂದು ಮನವಿಯಿದೆ. ಪ್ರಜೆಗಳಿಗೋಸ್ಕರವೇ ಯುಪಿಪಿ ಎಂಬ ವೇದಿಕೆ ಸಿದ್ಧಪಡಿಸಿದ್ದು ಇನ್ನು ಮುಂದೆ ಅದರ ಬರ್ತ್​ಡೇ ಆಚರಿಸಬೇಕು. ಈ ಬಗ್ಗೆ ಮಾಧ್ಯಮದವರಿಗೆ ಸವಿಸ್ತಾರವಾಗಿ ತಿಳಿಸುತ್ತೇನೆ ಎಂದು ಹೇಳಿದರು.

ನಾನು ರಾಜಕೀಯಕ್ಕೆ ಕಾಲಿಟ್ಟಿಲ್ಲ. ಇದೊಂದು ತಪ್ಪುಕಲ್ಪನೆ. ನನ್ನದು ಪ್ರಜಾಕೀಯ. ಪ್ರಜೆಗಳಿಗೋಸ್ಕರವೇ ಇರುವ ಪಕ್ಷ. ಹೊಸಬರನ್ನೇ ಸೇರಿಸಿಕೊಂಡು ಪ್ರಜಾಕೀಯ ಶುರು ಮಾಡಿದ್ದೇನೆ. ನಾವು ಮಾಡುವ ಕೆಲಸದ ಜತೆಗೇ ಇದನ್ನು ಬೆಳೆಸುತ್ತಿದ್ದೇವೆ. ಸತ್ಯದಿಂದ ನಡೆಯಬೇಕು. ರಾಜಕಾರಣಿಗಳ ಬಗ್ಗೆ ಏನೂ ಮಾತನಾಡುವುದಿಲ್ಲ. ಅವರೆಲ್ಲ ದೊಡ್ಡವರು. ನಾವು ಪ್ರಜೆಗಳು ಬದಲಾಗಬೇಕು. ನಾವು ಕಟ್ಟುವ ಟ್ಯಾಕ್ಸ್​ಗೆ ಲೆಕ್ಕ ಕೊಡಬೇಕು. ಪ್ರಜಾಕೀಯದ ಬಗ್ಗೆ ಎಲ್ಲ ಮಾಹಿತಿಯೂ ನಿಮಗೆ ಸಿಗುತ್ತದೆ ಎಂದರು. ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೋ ಇಲ್ಲವೋ ಶೀಘ್ರವೇ ತಿಳಿಯುತ್ತದೆ ಎಂದು ಹೇಳಿದರು.