ಬನ್ನೇರುಘಟ್ಟ ಸುತ್ತಮುತ್ತ ಹೆಚ್ಚಲಿದೆ ಬೇಡಿಕೆ!

ಜೇಡಿಮರ ಜಂಕ್ಷನ್​ನಿಂದ ಕೋಳಿ ಫಾರಂ ಗೇಟ್​ವರೆಗೆ ರಸ್ತೆ ವಿಸ್ತರಿಸಲಾಗುತ್ತಿದ್ದು, ಈ ರಸ್ತೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಐಐಎಂಬಿ ಕಟ್ಟಡ, ಐಟಿ ಪಾರ್ಕ್​ಗಳಿದ್ದರೂ ಕಿರಿದಾದ ರಸ್ತೆ ಹಿನ್ನೆಲೆಯಲ್ಲಿ ಬಹುತೇಕರು ಆ ಭಾಗದಲ್ಲಿ ಭೂಮಿಯನ್ನು ಖರೀದಿಸಲು ಹಿಂಜರಿಯುತ್ತಿದ್ದರು. ಇದೀಗ ರಸ್ತೆ ವಿಸ್ತರಣೆಯಿಂದಾಗಿ ಅಲ್ಲಿನ ರಿಯಲ್ ಎಸ್ಟೇಟ್​ಗೆ ಭಾರಿ ಬೇಡಿಕೆ ಕಂಡು ಬರುತ್ತಿದ್ದು, ಭೂಮಿಗೆ ಬಂಗಾರದ ಬೆಲೆ ಬಂದಿದೆ.

| ಅಭಯ್ ಮನಗೂಳಿ

ಬೆಂಗಳೂರು: ಬನ್ನೇರುಘಟ್ಟ ರಸ್ತೆ ವಿಸ್ತರಣೆಯಿಂದಾಗಿ ವಾಹನಗಳ ಸಂಚಾರಕ್ಕೆ ಅನುಕೂಲವಾಗುವುದಷ್ಟೇ ಅಲ್ಲ ಅಲ್ಲಿನ ರಿಯಲ್ ಎಸ್ಟೇಟ್ ಬೆಳವಣಿಗೆಗೂ ಅದು ಪೂರಕವಾಗಲಿದೆ.

ಜೇಡಿಮರ ಜಂಕ್ಷನ್​ನಿಂದ ಕೋಳಿಫಾರಂ ಗೇಟ್​ವರೆಗೆ ರಸ್ತೆ ವಿಸ್ತರಿಸಲಾಗುತ್ತಿದ್ದು, ಈ ರಸ್ತೆಯಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಐಐಎಂಬಿ ಕಟ್ಟಡ, ಐಟಿ ಪಾರ್ಕ್​ಗಳಿದ್ದರೂ ಕಿರಿದಾದ ರಸ್ತೆ ಹಿನ್ನೆಲೆಯಲ್ಲಿ ಬಹುತೇಕರು ಆ ಭಾಗದಲ್ಲಿ ಭೂಮಿಯನ್ನು ಖರೀದಿಸಲು ಹಿಂಜರಿಯುತ್ತಿದ್ದರು. ಇದೀಗ ರಸ್ತೆ ವಿಸ್ತರಣೆಯಿಂದಾಗಿ ಅಲ್ಲಿನ ರಿಯಲ್ ಎಸ್ಟೇಟ್​ಗೆ ಭಾರಿ ಬೇಡಿಕೆ ಕಂಡು ಬರುತ್ತಿದ್ದು, ಭೂಮಿಗೆ ಬಂಗಾರದ ಬೆಲೆ ಬಂದಿದೆ. ಬನ್ನೇರುಘಟ್ಟ ರಸ್ತೆ ಕಿರಿದಾಗಿದ್ದರಿಂದ ಈವರೆಗೆ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಇನ್ನುಮುಂದೆ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದರೊಂದಿಗೆ ಮೆಟ್ರೋ ರೈಲು ಸಂಚಾರಕ್ಕೆ ಮಾರ್ಗ ನಿರ್ಮಾಣ ಮಾಡುತ್ತಿರುವುದರಿಂದ ಒಟ್ಟಾರೆ ಅಲ್ಲಿ ಮನೆ ಮಾಡುವುದು ಸೂಕ್ತ ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ.

ಪಾಲಿಕೆಯಿಂದ ಭೂಸ್ವಾಧೀನ: ಜೇಡಿಮರ ಜಂಕ್ಷನ್​ನಿಂದ ಕೋಳಿ ಫಾರಂ ಜಂಕ್ಷನ್​ವರೆಗೆ 7.5 ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಣೆ ಆಗಲಿದೆ. ಈಗಾಗಲೇ ಪಾಲಿಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿ, ಕಟ್ಟಡಗಳ ತೆರವು ಕಾರ್ಯಾಚರಣೆ ಕೈಗೊಂಡಿದೆ. ವಿಸ್ತರಣೆಗೊಳ್ಳಲಿರುವ ರಸ್ತೆಗೆ 5.50 ಮೀಟರ್ ವಿಸ್ತೀರ್ಣದ ಲಿಂಕ್ ರಸ್ತೆಯೂ ಇರಲಿದೆ. ಒಟ್ಟು 298 ಕಟ್ಟಡ, 117 ಖಾಲಿ ನಿವೇಶನ ಹಾಗೂ 11 ದೇವಸ್ಥಾನಗಳನ್ನು ಭೂಸ್ವಾಧೀನ ಮಾಡಲಾಗುತ್ತಿದೆ. ಕೆಲವು ಆಸ್ತಿಗಳು ಪೂರ್ಣ ಪ್ರಮಾಣದಲ್ಲಿ ಹಾಗೂ ಕೆಲ ಆಸ್ತಿಗಳು ಭಾಗಶಃ ಸ್ವಾಧೀನಗೊಂಡಿವೆ. ಕೆಲವು ಪ್ರತಿಷ್ಠಿತ ಆಸ್ಪತ್ರೆ ಹಾಗೂ ಐಟಿ, ಶಿಕ್ಷಣ ಸಂಸ್ಥೆಗಳು ಭೂಮಿಯನ್ನು ಕಳೆದುಕೊಂಡಿವೆ.

ಟೆಂಡರ್​ಶ್ಯೂರ್ ಮಾದರಿ ರಸ್ತೆ: ಈಗಾಗಲೇ ನಗರದ ಹಲವು ರಸ್ತೆಗಳನ್ನು ಟೆಂಡರ್​ಶ್ಯೂರ್​ಗೊಳಿಸಲಾಗಿದೆ. ಅಂತಾರಾಷ್ಟ್ರೀಯ ದರ್ಜೆ ಮಾನದಂಡಗಳನ್ನು ಇರಿಸಿಕೊಂಡು ಉತ್ತಮ ಗುಣಮಟ್ಟದಲ್ಲಿ ಈ ರಸ್ತೆಯನ್ನು ಮಾಡಲಾಗುತ್ತದೆ. 11 ಮೀಟರ್ ರಸ್ತೆ, 3 ಮೀಟರ್ ಪಾದಚಾರಿ ಮಾರ್ಗ, 5.5 ಮೀಟರ್ ಸರ್ವೀಸ್ ರಸ್ತೆಗಳ ನಿರ್ಮಾಣ ಕಾರ್ಯ ನಡೆಯಲಿದೆ.

ಒಎಫ್​ಸಿ ಕೇಬಲ್, ಕೊಳವೆ ಮಾರ್ಗಗಳು ಪಾದಚಾರಿ ಮಾರ್ಗದ ಅಡಿಯಿರುತ್ತವೆ. ಈ ರಸ್ತೆಗಳನ್ನು ಸುಸಜ್ಜಿತಗೊಳಿಸುವುದರೊಂದಿಗೆ ಅವುಗಳು ಸ್ವಚ್ಛ ಮತ್ತು ಸುಂದರವಾಗಿ ಕಾಣುವುದರಿಂದ ನಗರದ ಅಂದವೂ ಹೆಚ್ಚುತ್ತದೆ ಎಂಬುದು ಸರ್ಕಾರದ ಚಿಂತನೆ ಆಗಿದೆ. ಇದರಿಂದಾಗಿ ಭವಿಷ್ಯದಲ್ಲಿ ಗುಂಡಿ ಸಮಸ್ಯೆಗೂ ಮುಕ್ತಿ ಸಿಗಲಿದೆ ಎಂಬುದು ಪಾಲಿಕೆ ವಾದವಾಗಿದೆ.