ಅನುಮತಿ ನೀಡಲು ರೇರಾ ವಿಳಂಬ ನೀತಿ

ಮಂಗಳೂರು:  ಬಿಲ್ಡರ್‌ಗಳಿಂದ ಗ್ರಾಹಕರಿಗೆ ಆಗುತ್ತಿದ್ದ ತೊಂದರೆ ನಿವಾರಿಸಲು ರಚನೆಯಾದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವೇ ಈಗ ಕರ್ನಾಟಕದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರದ ಬೆಳವಣಿಗೆಗೆ ಅಡ್ಡಿಯಾಗಿ ನಿಂತಿದೆ.

ಪ್ರಾಧಿಕಾರದ ಅಧಿಕಾರಿಗಳ ಹಣದ ದಾಹ, ವಿಳಂಬ ನೀತಿ ಪರಿಣಾಮ ಬಿಲ್ಡರ್‌ಗಳು ತಮ್ಮ ಯೋಜನೆಗೆ ಅನುಮತಿ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರೋಕ್ಷವಾಗಿ ಗ್ರಾಹಕರು ಕೂಡ ಇದರಿಂದ ತೊಂದರೆ ಅನುಭವಿಸುವಂತಾಗಿದೆ.

ರಿಯಲ್ ಎಸ್ಟೇಟ್ ಉದ್ಯಮವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎರಡು ವರ್ಷದ ಹಿಂದೆ ಹೊಸ ಕಾಯ್ದೆ ಜಾರಿಗೊಳಿಸಿತ್ತು. ಕೇಂದ್ರದ ಆದೇಶದನ್ವಯ ಕರ್ನಾಟಕ ಸರ್ಕಾರ ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ) ರಚಿಸಿ ಕಾಯ್ದೆ ಜಾರಿಗೊಳಿಸಿತ್ತು. ಇದರನ್ವಯ 3 ತಿಂಗಳೊಳಗೆ ಬಿಲ್ಡರ್‌ಗಳು ರೇರಾದಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು.

292 ಯೋಜನೆ: ರೇರಾ ಜಾರಿ ಸಂದರ್ಭ ಚಾಲ್ತಿಯಲ್ಲಿದ್ದ ಯೋಜನೆಗಳಿಗೂ ಅನ್ವಯಗೊಳಿಸಲಾಗಿತ್ತು. ರಾಜ್ಯದಲ್ಲಿ 3276 ಯೋಜನೆಗಳು ನೋಂದಣಿಯಾಗಿವೆ. ಈ ಪೈಕಿ 176 ಯೋಜನೆಯನ್ನು ರೇರಾ ರದ್ದುಗೊಳಿಸಿದೆ. 2696 ದೂರು ದಾಖಲಾಗಿದೆ. 117 ಪ್ರಕರಣದಲ್ಲಿ ದಂಡ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗೆ ರೇರಾ ಸೂಚನೆ ನೀಡಿದೆ. ರೇರಾ ನೋಂದಣಿಯಾದ ಯೋಜನೆಗಳ ಪೈಕಿ ಶೇ.85ರಷ್ಟು ಬೆಂಗಳೂರು ನಗರದ ಯೋಜನೆಗಳಾಗಿವೆ. ಮಂಗಳೂರು ನಗರದ 292 ಯೋಜನೆಗಳು ರೇರಾ ಅನುಮತಿ ಪಡೆದಿವೆ. ಈ ಪೈಕಿ 30 ಯೋಜನೆ ಈಗ ಪೂರ್ಣಗೊಂಡಿದೆ. 3 ಯೋಜನೆ ತಾಂತ್ರಿಕ ಕಾರಣದಿಂದ ರದ್ದುಗೊಂಡಿದ್ದು, ಬಳಿಕ ಅವಶ್ಯ ದಾಖಲೆಗಳನ್ನು ಸಲ್ಲಿಸಿ ಅನುಮತಿ ಪಡೆದಿದ್ದಾರೆ ಎನ್ನುವ ಮಾಹಿತಿ ಇದೆ.

ಉತ್ತಮ ಕಾಯ್ದೆ: ಕಾಯ್ದೆಯನ್ನು ಗ್ರಾಹಕರು ಮಾತ್ರವಲ್ಲ, ಬಿಲ್ಡರ್‌ಗಳು ಕೂಡ ಸ್ವಾಗತಿಸಿದ್ದಾರೆ. ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಬಿಲ್ಡರ್‌ಗಳಿಗೆ ಕಾಯ್ದೆ ವರದಾನವಾಗಿದೆ. ಆದರೆ ಸ್ಥಳೀಯವಾಗಿ ನಗರ ಪಾಲಿಕೆ, ಮುಡಾ, ಅಗ್ನಿಶಾಮಕ ದಳ ಸಹಿತ ಸುಮಾರು 20 ಇಲಾಖೆಗಳ ನಿರಾಕ್ಷೇಪಣಾ ಪತ್ರ ಪಡೆದು ನಿಯಮಬದ್ಧವಾಗಿ ಅರ್ಜಿ ಸಲ್ಲಿಸಿದರೂ ರೇರಾ ಸಕಾಲದಲ್ಲಿ ಅನುಮತಿ ನೀಡದೆ ಸತಾಯಿಸುತ್ತಿದೆ ಎನ್ನುವುದೇ ಬಿಲ್ಡರ್‌ಗಳ ಅಳಲು.

ಲಂಚದ ಕೇಂದ್ರ:  ರೇರಾ ಈಗ ಲಂಚ ಸಂಗ್ರಹಿಸುವ ಕೇಂದ್ರವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ಅದನ್ನು ಪರಿಶೀಲಿಸಿ ಸಮರ್ಪಕವಾಗಿದ್ದರೆ ಅನುಮತಿ ನೀಡುವುದು ಪ್ರಾಧಿಕಾರದ ಕರ್ತವ್ಯ. ಆದರೆ ಅಧಿಕಾರಿಗಳು ಕಚೇರಿಯಲ್ಲಿ ಇರುವುದೇ ಇಲ್ಲ . ವಿನಾಕಾರಣ ವಿಳಂಬ ನೀತಿ ಅನುಸರಿಸಿ ಯೋಜನೆಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಗ್ರಾಹಕರಿಗೂ ತೊಂದರೆಯಾಗುತ್ತಿದೆ ಎನ್ನುವುದು ಬಿಲ್ಡರ್‌ಗಳ ಆರೋಪ.

ಏನಿದು ಕಾಯ್ದೆ?: ಗ್ರಾಹಕರ ಹಿತಾಸಕ್ತಿ ರಕ್ಷಿಸುವುದು ರೇರಾ ಜಾರಿಯ ಮುಖ್ಯ ಉದ್ದೇಶ. ರೇರಾ ಅನುಮೋದನೆ ಪಡೆಯದೆ ಜಾಹೀರಾತು ನೀಡುವುದು, ಮಾರಾಟ ಅಥವಾ ಮುಂಗಡ ಬುಕ್ಕಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧ. ಫ್ಲಾೃಟ್ ಹಸ್ತಾಂತರಕ್ಕೆ ವಿಳಂಬವಾದರೆ ಖರೀದಿದಾರರು ತಾವು ಪಾವತಿಸಿದ ಹಣಕ್ಕೆ ಶೇ.10ರ ಬಡ್ಡಿದರದಲ್ಲಿ ಮರುಪಾವತಿಗೆ ಇದರಲ್ಲಿ ಅವಕಾಶವಿದೆ. ಗ್ರಾಹಕರಿಂದ ಸಂಗ್ರಹಿಸಿದ ಒಟ್ಟು ಮೊತ್ತದ ಶೇ.70ರಷ್ಟು ಪ್ರತ್ಯೇಕ ಅಕೌಂಟ್‌ನಲ್ಲಿ ಬಿಲ್ಡರ್ ಠೇವಣಿ ಇಡುವುದು ಕಡ್ಡಾಯ. ಉಳಿದ ಶೇ.30 ಮೊತ್ತವನ್ನು ಮಾರಾಟ ಅವಶ್ಯಕತೆಗಳಿಗೆ ಬಳಸಬಹುದು. ಈ ಹಿಂದೆ ಶೇ.100ರಷ್ಟು ಮೊತ್ತವನ್ನು ಬೇರೆ ಯೋಜನೆಗೆ ಹೂಡಿಕೆ ಮಾಡಿ ಮುಂಗಡ ಪಾವತಿಸಿದ ಗ್ರಾಹಕರಿಗೆ ತೊಂದರೆ ಉಂಟು ಮಾಡುತ್ತಿದ್ದರು. ಈ ನಿಯಮ ಜಾರಿ ಬಳಿಕ ಬಿಲ್ಡರ್‌ಗಳು ಮಂಗಳೂರಿನಲ್ಲಿ ಜಾಗ ಖರೀದಿಸುವ ಭರಾಟೆ ಕಡಿಮೆಯಾಗಿದೆ.

ವೃತ್ತಿಪರ ಬಿಲ್ಡರ್‌ಗಳಿಗೆ ರೇರಾ ಕಾಯ್ದೆ ಬಗ್ಗೆ ಯಾವುದೇ ಅಭ್ಯಂತರವಿಲ್ಲ. ಈ ಉದ್ಯಮದಲ್ಲಿ ಲಾಭವಿದೆ ಎನ್ನುವ ಕಾರಣದಿಂದ ಆಕರ್ಷಿತರಾಗಿ ಈ ಕ್ಷೇತ್ರಕ್ಕೆ ಬರುವವರಿಗೆ ಸಮಸ್ಯೆ ಉಂಟಾಗಬಹುದು. ಸರ್ಕಾರದಿಂದ ಪ್ರಾಧಿಕಾರ ಅನುಷ್ಠಾನ ಮಾಡುವ ಹಂತದಲ್ಲಿ ಕೆಲವು ನ್ಯೂನತೆ ಉಂಟಾಗಿದೆ. ಇದನ್ನು ಸರಿ ಪಡಿಸಬೇಕು ಎನ್ನುವುದು ಬಿಲ್ಡರ್‌ಗಳ ವಿನಂತಿ.
– ಜಿತೇಂದ್ರ ಕೊಟ್ಟಾರಿ, ಕಟ್ಟಡ ನಿರ್ಮಾಣ ಉದ್ಯಮಿ, ಮಂಗಳೂರು

ಗ್ರಾಹಕರ ಹಾಗೂ ಬಿಲ್ಡರ್‌ಗಳ ಹಿತ ಗಮನದಲ್ಲಿರಿಸಿ ರೇರಾ ಜಾರಿಯಾಗಿದೆ. ಸರ್ಕಾರದ ಯಾವುದೇ ನಿಯಮ ಜಾರಿ ಆರಂಭದ ಹಂತದಲ್ಲಿ ಕೆಲವು ಸಮಸ್ಯೆಗಳಿರುವುದು ಸಹಜ. ಈಗ ಅನುಮತಿ ನೀಡಲು ಪ್ರಾಧಿಕಾರದಿಂದ ಕೊಂಚ ವಿಳಂಬವಾಗುತ್ತಿದೆ. ಕಾಲಮಿತಿಯಲ್ಲಿ ಅನುಮತಿ ನೀಡಬೇಕೆಂದು ಕ್ರೆಡೈ ವತಿಯಿಂದ ಕೋರಿಕೆ ಸಲ್ಲಿಸಿದ್ದೇವೆ. ಶೀಘ್ರ ಈ ವ್ಯವಸ್ಥೆ ಜಾರಿಯಾಗಲಿದೆ ಎನ್ನುವ ನಿರೀಕ್ಷೆ ಹೊಂದಿದ್ದೇವೆ.
-ನವೀನ್ ಕಾರ್ಡೋಜ, ಕ್ರೆಡೈ ಮಂಗಳೂರು ಅಧ್ಯಕ್ಷ

Leave a Reply

Your email address will not be published. Required fields are marked *