More

    ರೈತರ ಹಿತ ಕಾಯಲು ಜೈಲು ಸೇರಲು ಸಿದ್ಧ

    ಚನ್ನರಾಯಪಟ್ಟಣ: ಬರದಿಂದ ರೈತರ ಬದುಕು ಸಂಕಷ್ಟದಲ್ಲಿದೆ. ಮೊದಲು ನಮ್ಮ ಭಾಗದ ಕೆರೆಗಳಿಗೆ ನೀರು ಹರಿಸಿ, ನಂತರ ಇತರ ಜಿಲ್ಲೆಗೆ ನೀರು ಹರಿಸಲು ಮುಂದಾಗಿ. ರೈತರ ತಾಳ್ಮೆ ಪರೀಕ್ಷಿಸಬೇಡಿ. ರೈತರ ಹಿತ ಕಾಪಾಡಲು ರೈತರ ಜತೆ ಜೈಲು ಸೇರಲು ಸಿದ್ಧ ಎಂದು ಸಂಸದ ಪ್ರಜ್ವಲ್ ರೇವಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಹೇಮಾವತಿ ಜಲಾಶಯದಿಂದ ತುಮಕೂರಿಗೆ ನೀರು ಬಿಟ್ಟಿರುವ ಹಾಗೆ ತಾಲೂಕಿನ ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯ 26 ಕೆರೆಗಳಿಗೂ ನೀರು ತುಂಬಿಸಬೇಕೆಂದು ಆಗ್ರಹಿಸಿ ಗುರುವಾರ ತಾಲೂಕಿನ ದಂಡಿಗನಹಳ್ಳಿ ಹೋಬಳಿ, ಆಲಗೋಡನಹಳ್ಳಿ ಏತನೀರಾವರಿ ಯೋಜನೆಯ ಪಂಪ್‌ಹೌಸ್ ಬಳಿ, ಆಲಗೋಡನಹಳ್ಳಿ ಏತ ನೀರಾವರಿ ಯೋಜನೆಯ ಸಂತ್ರಸ್ತರು ಹಾಗೂ ರೈತರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

    ರಾಜ್ಯ ಸರ್ಕಾರವೇ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ತಾಲೂಕಿನಾದ್ಯಂತ ಕೆರೆ-ಕಟ್ಟೆಗಳು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಆದಾಗ್ಯೂ ನಮಗೆ ನೀರಿಲ್ಲದ ಸಮಯದಲ್ಲಿ ತುಮಕೂರಿಗೆ ನೀರು ಹರಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

    ರೈತರು ವ್ಯವಸಾಯ ಮಾಡಲು ನೀರು ಕೇಳುತ್ತಿಲ್ಲ. ಜೀವನ ನಿರ್ವಹಣೆ ಹಾಗೂ ಜನ-ಜಾನುವಾರುಗಳಿಗೆ ಕುಡಿಯಲಷ್ಟೇ ನೀರನ್ನು ಕೇಳುತ್ತಿದ್ದಾರೆ. ಜಲಾಶಯದಿಂದ ತುಮಕೂರಿಗೆ ನೀರು ಹರಿಸುವ ಮೊದಲು ನೀರಾವರಿ ಸಮಿತಿ ಸಭೆ ಕರೆಯಬೇಕು. ಸಭೆಯಲ್ಲಿ ಜಿಲ್ಲೆಯ ಸಂಸದರು, ವಿಧಾನಪರಿಷತ್ ಸದಸ್ಯರು, ಹಾಗೂ ಜಿಲ್ಲೆಯ ಎಲ್ಲ ಶಾಸಕರು ಭಾಗಿಯಾಗಿ ಅವರ ಅಭಿಪ್ರಾಯ ಕೇಳಬೇಕು. ಇವ್ಯಾವುದನ್ನೂ ಮಾಡದೆ ಸರ್ಕಾರ ನೀರು ಬಿಟ್ಟಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.

    ಹೇಮಾವತಿ ಜಲಾಶಯದಿಂದ ತುಮಕೂರಿಗೆ ಹರಿಸಲು ನಮ್ಮ ವಿರೋಧವಿಲ್ಲ. ಆದರೆ ಹೇಮಾವತಿ ಜಲಾಶಯದಿಂದ ಜಿಲ್ಲಾ ಗಡಿಯವರಿಗೆ ಬರುವ ಎಲ್ಲ ಕೆರೆ-ಕಟ್ಟೆಗಳಿಗೂ ನೀರನ್ನು ತುಂಬಿಸುಬೇಕು ಎನ್ನುವುದು ನಮ್ಮ ಆಗ್ರಹ. ಮೊದಲೇ ಬರದಿಂದ ರೈತರು ತತ್ತರಿಸಿದ್ದಾರೆ. ಜಿಲ್ಲಾದ್ಯಂತ ಕೆರೆ-ಕಟ್ಟೆಗಳು ಬರಿದಾಗಿವೆ. ಇದೇ ವೇಳೆ ರೈತರ ತಾಳ್ಮೆಯನ್ನು ಕೆಣಕಬೇಡಿ. ರೈತರಿಗೆ ವಿದ್ಯುತ್ ಸರಿಯಾಗಿ ನೀಡುತ್ತಿಲ್ಲ. ಬಿತ್ತನೆ ಮಾಡಿದ ಬೀಜಕ್ಕೆ ಸರಿಯಾದ ಬೆಂಬಲ ಬೆಲೆ ನೀಡುತ್ತಿಲ್ಲ. ಬರ ಪರಿಹಾರ ಸಿಕ್ಕಿಲ್ಲ. ರೈತರಿಗೆ ಮತ್ತೊಮ್ಮೆ ನೋವು ಕೊಡುವ ಕೆಲಸ ಮಾಡಬೇಡಿ. ಹರಿಯುತ್ತಿರುವ 2 ಟಿಎಂಸಿ ನೀರಿನ ಜತೆ ಹೆಚ್ಚುವರಿಯಾಗಿ 2 ಟಿಎಂಸಿ ನೀರನ್ನು ಆರಿಸಿ ಸಂಜೆಯೊಳಗೆ ಕೆರೆ-ಕಟ್ಟೆಗಳಿಗೆ ನೀರು ಹರಿಸುವ ಕೆಲಸವಾಗಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

    ಹೇಮಾವತಿ ಎಡದಂಡೆ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಎಚ್.ಕೆ.ರಾಜು ಅವರಿಗೆ ರೈತರು ಮನವಿ ಸಲ್ಲಿಸಿದರು.
    ನೆಟ್ಟೆಕೆರೆ ನಾಗರಾಜು, ಉಪ್ಪಿನಹಳ್ಳಿ ದೊರೆ, ದೊಡ್ಡಮತಿಘಟ್ಟ ಮಂಜಣ್ಣ, ಚಿಕ್ಕಮತಿಘಟ್ಟ ಚಂದ್ರಣ್ಣ, ತರಬೇನಹಳ್ಳಿ ನಂಜುಂಡೇಗೌಡ, ಸಿಂಗೇನಹಳ್ಳಿ ಶಾಂತಣ್ಣ, ಎ.ಎಂ.ಬಾಲಚಂದ್ರ ಆನೆಕೆರೆ, ಕರಡೆವು ಸತೀಶ್, ರಂಗಸ್ವಾಮಿ, ಹೊನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿಗೌಡ ಸೇರಿದಂತೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts