ಕ್ಯಾಪ್ಟನ್ ಸಹಿತ ಮೂವರ ವಶಕ್ಕೆ ಸಿದ್ಧತೆ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೊಚ್ಚಿನ್‌ನಲ್ಲಿ ದೋಣಿ ದುರಂತದಲ್ಲಿ ಮೂವರು ಮೀನುಗಾರರ ಸಾವಿಗೆ ಕಾರಣವಾದ ಆರೋಪ ಹೊತ್ತಿರುವ ಎಂ.ವಿ.ದೇಶಶಕ್ತಿ ನೌಕೆಯ ಕ್ಯಾಪ್ಟನ್ ಸಹಿತ ಮೂವರನ್ನು ಕೊಚ್ಚಿನ್ ಪೊಲೀಸರು ಬಂಧಿಸುವ ಸಾಧ್ಯತೆ ಕಂಡುಬಂದಿದೆ.
ಇದುವರೆಗೆ ಈ ದುರಂತಕ್ಕೆ ಕಾರಣವಾಗಿದ್ದ ಹಡಗು ಯಾವುದೆಂಬ ಕುತೂಹಲವಿದ್ದು, ಬಹುತೇಕ ದೇಶಶಕ್ತಿಯೇ ಇದು ಎನ್ನುವ ಹಂತಕ್ಕೆ ತನಿಖಾ ತಂಡ ಬಂದಿದೆ.
ಮಂಗಳೂರಿನಲ್ಲಿರುವ ಹಡಗಿನ ಕ್ಯಾಪ್ಟನ್, ಸೆಕೆಂಡ್ ಆಫೀಸರ್ ಹಾಗೂ ಸೀಮನ್‌ರನ್ನು ಈಗಾಗಲೆ ಇಮ್ಮಿಗ್ರೇಶನ್ ಇಲಾಖೆಯ ವಶದಲ್ಲಿ ಇರಿಸಲಾಗಿದೆ. ಸದ್ಯ ಕೊಚ್ಚಿನ್ ಪೊಲೀಸರು ಹಡಗಿನ ಕೆಲವೊಂದು ಮಾದರಿಗಳನ್ನು ಪರೀಕ್ಷೆಗಾಗಿ ಫೋರೆನ್ಸಿಕ್ ವಿಭಾಗಕ್ಕೆ ಕಳುಹಿಸಿದ್ದು, ಅದರ ವರದಿಗೆ ಕಾಯುತ್ತಿದ್ದಾರೆ.
ಅದರ ವರದಿ ಬಂದ ನಂತರ ಇಮ್ಮಿಗ್ರೇಶನ್ ಇಲಾಖೆಯಿಂದಲೂ ಅನುಮೋದನೆ ಸಿಕ್ಕಿದ ಬಳಿಕ ಈ ಮೂವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈಗಾಗಲೇ ಮುಂಬೈನಿಂದ ಆಗಮಿಸಿದ ಅಂಡರ್ ವಾಟರ್ ಡೈವಿಂಗ್ ತಂಡದವರು ಹಡಗಿನ ನೀರಿನೊಳಗಿನ ಭಾಗದ ಪರಿಶೀಲನೆ ನಡೆಸಿ ಕೆಲವು ಮಾದರಿಗಳನ್ನು ನೀಡಿದ್ದು, ಅವುಗಳನ್ನು ಫೋರೆನ್ಸಿಕ್ ಇಲಾಖೆ ಪರೀಕ್ಷೆ ನಡೆಸಿ ವರದಿ ನೀಡಲಿದೆ.

ಮಂಗಳೂರಿನಲ್ಲಿದೆ ಹಡಗು: ಆ.7ರಂದು ಮುಂಜಾನೆ 3.30ಕ್ಕೆ ಕೊಚ್ಚಿನ್‌ನಿಂದ 23 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕಾ ದೋಣಿ ಓಶಿಯಾನಿಕಾಗೆ ಹಡಗೊಂದು ಡಿಕ್ಕಿಯಾಗಿ ಮೂವರು ಮೀನುಗಾರರು ಸಾವನ್ನಪ್ಪಿದ್ದರು. ಬಳಿಕ ಹಡಗು ನಿಲ್ಲಿಸದೆ ಪಯಣ ಮುಂದುವರಿಸಿದ್ದು ಅಪಘಾತ ನಡೆಸಿದ ಹಡಗಿನ ಬಗ್ಗೆ ನೌಕಾಪಡೆ, ಕೋಸ್ಟ್‌ಗಾರ್ಡ್ ಶೋಧ ನಡೆಸಿದ್ದವು. ಮಂಗಳೂರಿನ ಬಳಿ ಇರಾಕ್‌ಗೆ ಪಯಣ ಬೆಳೆಸುತ್ತಿದ್ದ ದೇಶಶಕ್ತಿ ಹಡಗನ್ನು 8ರಂದು ರಾತ್ರಿ ನವಮಂಗಳೂರು ಬಂದರಿಗೆ ಕರೆತರಲಾಗಿತ್ತು. ಹಡಗಿನ ಬಗ್ಗೆ ತನಿಖೆಯನ್ನು ಮರ್ಕೆಂಟೈಲ್ ಮೆರೇನ್ ಇಲಾಖೆ ಕೈಗೊಳ್ಳುತ್ತಿದೆ.