ಬೆಂಗಳೂರು: ಅನುದಾನ ರಹಿತ ಶಾಲಾ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿಳಿಸಿದ್ದಾರೆ.
ವಿವಿ ಪುರಂನ ಶ್ರೀ ವಾಸವಿ ಕನ್ವೆನ್ಸನ್ ಸೆಂಟರ್‌ನಲ್ಲಿ ಬೆಂಗಳೂರು ದಕ್ಷಿಣ ವಲಯ 1 ಹಾಗೂ 2 ರ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಹಲವು ಬೇಡಿಕೆಗಳು ದೀರ್ಘಕಾಲದಿಂದ ಈಡೇರಲಿಲ್ಲ.ಈ ಸಂಬಂಧ ಸರ್ಕಾರದ ಜೊತೆ ಸಂಧಾನ ಮಾತುಕತೆ ನಡೆಸುತ್ತೇನೆ. ಸಾಧ್ಯವಾಗದಿದ್ದರೆ ಹೋರಾಟ ಮಾಡುತ್ತೇನೆ, ಹೋರಾಟ ತಮಗೆ ಹೊಸದಲ್ಲ. ವಿದ್ಯಾರ್ಥಿ ಹಂತದಿಂದಲೇ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ ಎಂದರು.
ಅದಮ್ಯ ಚೇತನ ಪ್ರತಿಷ್ಠಾನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ತಾವು ಅನ್ನದಾಸೋಹದ ಮೂಲಕ ಶಾಲೆಗಳ ಜೊತೆ ನಿಕಟ ಬಾಂಧವ್ಯ ಹೊಂದಿದ್ದು, ಶಿಕ್ಷಕರು ವಿದ್ಯಾರ್ಥಿಗಳ ನಿಜವಾದ ಮಾರ್ಗದರ್ಶಕರು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ಯಾಮ್ಸ್ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಕ್ರೇಡೋ ಅರ್ಲಿ ಚೈಲ್ಡ್ ಹುಡ್ ಸಲ್ಯೂಶನ್ ಸಹ ಸಂಸ್ಥಾಪಕ ಮೃದುಲ , ಒಕ್ಕಲಿಗ ಸಂಘದ ನಿರ್ದೇಶಕ ವೆಂಕಟರಾಮೇಗೌಡ, ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ 1 ಮತ್ತು 2 ಅಧ್ಯಕ್ಷ ಜಯಪ್ರಕಾಶ್, ಬಸವೇಶ್ವರ ಶಾಲೆಯ ಮುಖ್ಯಸ್ಥೆ ರಂಗಲಕ್ಷ್ಮಿ ಶ್ರೀನಿವಾಸ ಮತ್ತಿತರರಿದ್ದರು.