ಹೊನ್ನಾವರ: ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಇಂದು ಓದುವ ಹವ್ಯಾಸ ಕಡಿಮೆಯಾಗಿದೆ. ಮಕ್ಕಳು ಕ್ರಿಯಾಶೀಲರಾಗಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ನಿವೃತ್ತ ಶಿಕ್ಷಕಿ, ಕ್ರೀಡಾಪಟು ಸುನಂದಾ ಭಂಡಾರಿ ಹುಬ್ಬಳ್ಳಿ ಹೇಳಿದರು.

ಕೆರೆಕೋಣ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಗ್ರಾ.ಪಂ. ಸಾಲಕೋಡ, ಕುಮುದಾ ಅಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ನಡೆಯುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಬೇಸಿಗೆ ಶಿಬಿರವು ಮಕ್ಕಳಲ್ಲಿ ಹೊಸ ಆಲೋಚನೆ ಹುಟ್ಟು ಹಾಕಲು ಹಾಗೂ ಯಾಂತ್ರೀಕೃತ ಬದುಕಿನಿಂದ ಹೊರಬರಲು ಸಹಾಯ ಮಾಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ ಮಾತನಾಡಿ, ಬೇಸಿಗೆ ಶಿಬಿರವು ಮಕ್ಕಳ ಶೈಕ್ಷಣಿಕ ಬದುಕಿನ ಒಂದು ಮುಖ್ಯ ಭಾಗವಾಗಿದೆ. ಮಕ್ಕಳು ಈ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಲ್ಲ ರೀತಿಯ ಕಲೆಗಳನ್ನು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಬೆಳವಣಿಗೆ ಹೊಂದಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷ ರಾಮ ಭಂಡಾರಿ, ಕೆರೆಕೋಣ ಗ್ರಂಥಾಲಯ ಮೇಲ್ವಿಚಾರಕಿ ಜ್ಯೋತಿ ಶೆಟ್ಟಿ ಮತ್ತು ಸಾಲ್ಕೋಡ ಗ್ರಂಥಾಲಯ ಮೇಲ್ವಿಚಾರಕಿ ನಾಗರತ್ನ ಗೌಡ, ಗಂಗೂಬಾಯಿ ಹೊಳೆಗದ್ದೆ ಉಪಸ್ಥಿತರಿದ್ದರು. ಕೇದಾರ ಭಟ್ಟ ಸ್ವಾಗತಿಸಿದರು. ಶ್ರೇಯಸ್ ಭಂಡಾರಿ ವಂದಿಸಿದರು. ಮಹೇಶ ಭಂಡಾರಿ ನಿರ್ವಹಿಸಿದರು.