ಎಂಡೋ ಪೀಡಿತರ ಮರು ಸರ್ವೇ

ಉಡುಪಿ: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂತ್ರಸ್ತರು ಸರ್ಕಾರದ ಪರಿಹಾರದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪುನರ್ ಸರ್ವೇ ನಡೆಸಲಾಗುವುದು. ಕುಂದಾಪುರದಲ್ಲಿ ಎಂಡೋ ಪೀಡಿತರ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದರು.

4 ದಶಕಗಳ ಹಿಂದೆ ಎಂಡೋಸಲ್ಫಾನ್ ಸಿಂಪಡಿಸಲಾಗಿತ್ತು. ನೆಲ, ಜಲದಲ್ಲಿ ಎಂಡೋಸಲ್ಫಾನ್ ವಿಷಕಾರಿ ಅಂಶಗಳು ಅಡಕವಾಗಿ ವಿಜ್ಞಾನಿಗಳು ಹಾಗೂ ಪರಿಣತರನ್ನು ಒಳಗೊಂಡ ತಂಡದಿಂದ ಸರ್ವೇ ನಡೆಸಿ, ಸಂತ್ರಸ್ತರ ಪರಿಹಾರಕ್ಕಾಗಿ ಪ್ಯಾಕೇಜ್ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸಿಆರ್‌ಝಡ್ ವ್ಯಾಪ್ತಿಯಲ್ಲಿ ಗುರುತಿಸಲಾದ 8 ದಿಬ್ಬಗಳಲ್ಲಿ ಮರಳುಗಾರಿಕೆಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ನಾನ್ ಸಿಆರ್‌ಝಡ್ ವ್ಯಾಪ್ತಿಯ 30 ದಿಬ್ಬಗಳ ಪೈಕಿ 7 ದಿಬ್ಬಗಳಿಂದ ತೆರವಾಗುವ ಮರಳನ್ನು ಸರ್ಕಾರಿ ಕಾಮಗಾರಿಗೆ ಬಳಸಲಾಗುತ್ತಿದ್ದು, ಉಳಿದ 23 ದಿಬ್ಬಗಳಲ್ಲಿ ಮರಳುಗಾರಿಕೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಮೀನುಗಾರರ ಪತ್ತೆ ತನಿಖೆ ಪ್ರಗತಿಯಲ್ಲಿ: ದುಬೈನಲ್ಲಿ ಮೀನುಗಾರರ ಪತ್ತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಎಸ್‌ಪಿ ನಿಶಾ ಜೇಮ್ಸ್ ಹೇಳಿದರು. ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ 5-6 ತಂಡಗಳನ್ನು ರಚಿಸಲಾಗಿದ್ದು, ಮಾಹಿತಿ ಲಭ್ಯವಾದರೆ ತಕ್ಷಣ ಈ ಬಗ್ಗೆ ಕಾರ್ಯಪ್ರವೃತ್ತವಾಗುತ್ತಿದೆ. ಕಳೆದ ವಾರ ಕುಟುಂಬಿಕರು ರತ್ನಗಿರಿಯಲ್ಲಿ ಹುಡುಕುವಂತೆ ಕೋರಿದ್ದರು. ತಂಡ ಅಲ್ಲಿಗೆ ತೆರಳಿ ಮಾಹಿತಿ ಕಲೆಹಾಕಿ ಬಂದಿದೆ. ತನಿಖೆ ಇನ್ನೂ ಮುಗಿದಿಲ್ಲ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ಜಿಲ್ಲೆಯಿಂದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಆರತಿ ಕೃಷ್ಣ ಮತ್ತು ಡಾ.ವಿಜಯಕುಮಾರ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
| ಜಯಮಾಲಾ, ಸಚಿವೆ