ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್-16ರ ಆರಂಭದಲ್ಲೇ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ ಭರ್ಜರಿ ಜಯ ಗಳಿಸಿದೆ. ಈ ಮೂಲಕ ಮೂರು ವರ್ಷಗಳ ಬಳಿಕ ಆರ್ಸಿಬಿ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯವಾಡಿದ್ದು, ಈ ಸ್ಟೇಡಿಯಮ್ಗೂ ಗೆಲುವು ಮರುಕಳಿಸಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ (82*ರನ್, 49 ಎಸೆತ, 6 ಬೌಂಡರಿ, 5 ಸಿಕ್ಸರ್) ಮತ್ತು ನಾಯಕ ಫಾಫ್ ಡು ಪ್ಲೆಸಿಸ್ (73 ರನ್, 43 ಎಸೆತ, 5 ಬೌಂಡರಿ, 6 ಸಿಕ್ಸರ್) ಅವರ ದಿಟ್ಟ ಚೇಸಿಂಗ್ ಸಾಹಸದಿಂದ ಆರ್ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ನಿರ್ಧಾರವನ್ನು ಬೌಲರ್ಗಳು ಆರಂಭದಲ್ಲಿ ಸಮರ್ಥಿಸಿಕೊಂಡರು. ಬಳಿಕ, ಪ್ರಮುಖ ಬ್ಯಾಟರ್ಗಳ ವೈಫಲ್ಯದ ನಡುವೆ ಯುವ ಬ್ಯಾಟರ್ ತಿಲಕ್ ವರ್ಮ (84*ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದ ಬಲದಿಂದ ಪುಟಿದೆದ್ದ ಮುಂಬೈ ಇಂಡಿಯನ್ಸ್ ತಂಡ 7 ವಿಕೆಟ್ಗೆ 171 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಪ್ರತಿಯಾಗಿ ಕೊಹ್ಲಿ-ಪ್ಲೆಸಿಸ್ ಜೋಡಿ ಮುಂಬೈ ಬೌಲರ್ಗಳನ್ನು ಬೆಂಡೆತ್ತಿ ಮೊದಲ ವಿಕೆಟ್ಗೆ 148 ರನ್ಗಳ ಭರ್ಜರಿ ಜತೆಯಾಟ ಆಡುವುದರೊಂದಿಗೆ ಆರ್ಸಿಬಿ ತಂಡ 16.2 ಓವರ್ಗಳಲ್ಲೇ 2 ವಿಕೆಟ್ಗೆ 172 ರನ್ ಗಳಿಸಿ ತವರು ಪ್ರೇಕ್ಷಕರ ಎದುರು ಗೆಲುವಿನ ಕೇಕೆ ಹಾಕಿತು.
ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ