ಆರ್​ಸಿಬಿ ಟೀಮ್ ಗೆಲುವಿನ ವಿದಾಯ: ಸನ್​ರೈಸರ್ಸ್ ಪ್ಲೇಆಫ್ ಆಸೆಗೆ ಹಿನ್ನಡೆ

>

ಬೆಂಗಳೂರು: ಟೂರ್ನಿಯ ಆರಂಭದಿಂದಲೂ ನಿರೀಕ್ಷೆಗೆ ತಕ್ಕ ಆಟವಾಡಲು ವಿಫಲರಾಗಿದ್ದ ಕೆರಿಬಿಯನ್ ಯುವ ಸ್ಟಾರ್ ಶಿಮ್ರೊನ್ ಹೆಟ್ಮೆಯರ್ (75 ರನ್, 47 ಎಸೆತ, 4 ಬೌಂಡರಿ, 6 ಸಿಕ್ಸರ್) ಕೊನೆಗೂ ಐಪಿಎಲ್-12ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಂತಿಮ ಪಂದ್ಯದಲ್ಲಿ ಸಿಡಿಯುವ ಮೂಲಕ ಗೆಲುವಿನ ವಿದಾಯ ಕೊಡಿಸಿದ್ದಾರೆ. ಅವರಿಗೆ ಆಲ್ರೌಂಡರ್ ಗುರುಕೀರತ್ ಮಾನ್ ಸಿಂಗ್(65 ರನ್, 48 ಎಸೆತ, 8 ಬೌಂಡರಿ, 1 ಸಿಕ್ಸರ್) ಅತ್ಯುತ್ತಮ ಸಾಥ್ ನೀಡುವುದರೊಂದಿಗೆ ಆರ್​ಸಿಬಿ ತಂಡ ಸನ್​ರೈಸರ್ಸ್ ಹೈದರಾಬಾದ್ ತಂಡವನ್ನು 4 ವಿಕೆಟ್​ಗಳಿಂದ ಮಣಿಸಿತು.

ಇದರಿಂದ ಸನ್​ರೈಸರ್ಸ್ ತಂಡದ ಪ್ಲೇಆಫ್ ಆಸೆಗೆ ಹಿನ್ನಡೆಯಾಗಿದ್ದರೆ, ಆರ್​ಸಿಬಿ ತಂಡ 5ನೇ ಜಯದೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ 7ನೇ ಸ್ಥಾನಕ್ಕೇರಿದೆ. ಭಾನುವಾರ ಪಂಜಾಬ್ ಗೆದ್ದರೆ ಆರ್​ಸಿಬಿ ಮತ್ತೆ ಕೊನೇ ಸ್ಥಾನಕ್ಕೆ ಕುಸಿಯಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ, ಹಲವು ಪಂದ್ಯಗಳ ನಂತರ ಟಾಸ್ ಗೆದ್ದ ವಿರಾಟ್ ಕೊಹ್ಲಿ ಸನ್​ರೈಸರ್ಸ್ ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಸ್ಪಿನ್ನರ್ ವಾಷಿಂಗ್ಟನ್ ಸುಂದರ್ (24ಕ್ಕೆ3) ಹಾಗೂ ವೇಗಿ ನವದೀಪ್ ಸೈನಿ (39ಕ್ಕೆ2) ಸಂಘಟಿತ ದಾಳಿಗೆ ಆರಂಭದಲ್ಲಿ ಸಂಪೂರ್ಣ ಮಂಕಾಗಿದ್ದ ಸನ್​ರೈಸರ್ಸ್ ತಂಡ ಕೊನೇ ಓವರ್​ನಲ್ಲಿ ಕೇನ್ ವಿಲಿಯಮ್ಸನ್(70*ರನ್, 43ಎಸೆತ, 5ಬೌಂಡರಿ, 4ಸಿಕ್ಸರ್) ಆಡಿದ ಅಬ್ಬರದಾಟದಿಂದ 7 ವಿಕೆಟ್​ಗೆ 175 ರನ್ ಪೇರಿಸಿತು.

ಈ ಸವಾಲು ಬೆನ್ನಟ್ಟಿದ ಆರ್​ಸಿಬಿ ತಂಡ ಶಿಮ್ರೊನ್ ಹೆಟ್ಮೆಯರ್ ಹಾಗೂ ಗುರುಕೀರತ್ ಮಾನ್ ಸಿಂಗ್ ಜೋಡಿ 4ನೇ ವಿಕೆಟ್​ಗೆ ಸೇರಿಸಿದ 144 ರನ್​ಗಳ ಅಮೋಘ ಜತೆಯಾಟದ ನೆರವಿನಿಂದ 19.2 ಓವರ್​ಗಳಲ್ಲಿ 6 ವಿಕೆಟ್​ಗೆ 178 ರನ್ ಬಾರಿಸಿ ಜಯಿಸಿತು. ಈ ಮೂಲಕ ಹೈದರಾಬಾದ್ ತವರಿನಲ್ಲಿ ಕಂಡಿದ್ದ ಹೀನಾಯ ಸೋಲಿಗೆ ಸೇಡು ತೀರಿಸಿಕೊಂಡಿತು. ಸನ್​ರೈಸರ್ಸ್ ಇನ್ನು ಪ್ಲೇಆಫ್​ಗೇರಬೇಕಾದರೆ, ಕೆಕೆಆರ್ ತಂಡ ಭಾನುವಾರ ಮುಂಬೈ ವಿರುದ್ಧ ಸೋಲು ಕಾಣಬೇಕಾಗಿದೆ.

ಜಯ ತಂದ ಹೆಟ್ಮೆಯರ್-ಗುರು

ಆರಂಭಿಕ ಪಾರ್ಥಿವ್ ಪಟೇಲ್(0) ಮೊದಲ ಓವರ್​ನಲ್ಲೆ ವೇಗಿ ಭುವನೇಶ್ವರ್​ಗೆ ವಿಕೆಟ್ ಒಪ್ಪಿಸಿದರು. ನಾಯಕ ವಿರಾಟ್ ಕೊಹ್ಲಿ(16) ಎಡಗೈ ವೇಗಿ ಖಲೀಲ್ ಅಹ್ಮದ್ ಎಸೆತದಲ್ಲಿ ಮುನ್ನುಗ್ಗಿ ಬಾರಿಸಲು ಯತ್ನಿಸಿ ಕೀಪರ್​ಗೆ ಕ್ಯಾಚ್ ಕೊಟ್ಟರು. ಅಪಾಯಕಾರಿ ಎಬಿ ಡಿವಿಲಿಯರ್ಸ್(1) ಕೂಡ ಖಲೀಲ್​ಗೆ ಕ್ಯಾಚ್ ನೀಡಿದರು.

ನಂತರ ನಿಧಾನವಾಗಿ ಕ್ರೀಸಿಗಂಟಿಕೊಂಡ ಹೆಟ್ಮೆಯರ್ ಹಾಗೂ ಗುರುಕೀರತ್ ಮಾನ್ ಸಿಂಗ್ ಸನ್​ರೈಸರ್ಸ್ ಬೌಲರ್​ಗಳಿಗೆ ಅನಿರೀಕ್ಷಿತ ಸವಾಲಾದರು. ಹಂತ ಹಂತವಾಗಿ ತಂಡದ ರನ್​ರೇಟ್ ಏರಿಸಿದ ಈ ಜೋಡಿ ಗೆಲುವಿನ ನಿರೀಕ್ಷೆ ಗರಿಗೆದರಿಸಿತು.

ಕಣಕ್ಕಿಳಿದ ಯಾವುದೇ ಬೌಲರ್​ಗಳನ್ನೂ ಲೆಕ್ಕಿಸದೆ ಬೌಂಡರಿ-ಸಿಕ್ಸರ್​ಗಳ ಸುರಿಮಳೆಗರೆದ ಹೆಟ್ಮೆಯರ್ 32 ಎಸೆತಗಳಲ್ಲಿ ಐಪಿಎಲ್​ನ ಚೊಚ್ಚಲ ಅರ್ಧಶತಕ ಪೂರೈಸಿದರು. ಆದರೆ ಗೆಲುವಿಗೆ 12ರನ್ ಅಗತ್ಯವಿದ್ದಾಗ ಹೆಟ್ಮೆಯರ್ ಸ್ಪಿನ್ನರ್ ರಶೀದ್ ಖಾನ್​ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಗುರುಕೀರತ್, ವಾಷಿಂಗ್ಟನ್ ಸುಂದರ್(0) ಕೂಡ ಡಗೌಟ್ ಸೇರಿದಾಗ ಆರ್​ಸಿಬಿ ಭೀತಿ ಎದುರಿಸಿತು. ಆದರೆ ಕೊನೇ ಓವರ್​ನಲ್ಲಿ ಗೆಲುವಿಗೆ 6 ರನ್ ಅಗತ್ಯವಿದ್ದಾಗ ಉಮೇಶ್ ಯಾದವ್, ಸ್ಪಿನ್ನರ್ ನಬಿಯ ಮೊದಲೆರಡು ಎಸೆತಗಳಲ್ಲಿ 2 ಬೌಂಡರಿ ಬಾರಿಸಿ ಜಯ ತಂದರು.

ಸನ್​ರೈಸರ್ಸ್​ಗೆ ವಾಷಿಂಗ್ಟನ್ ಆಘಾತ

ಕಿವೀಸ್ ಸ್ಪೋಟಕ ಬ್ಯಾಟ್ಸ್​ಮನ್ ಮಾರ್ಟಿನ್ ಗುಪ್ಟಿಲ್ (30) ಹಾಗೂ ವೃದ್ಧಿಮಾನ್ ಸಾಹ (20) ಜೋಡಿ ಮೊದಲ ವಿಕೆಟ್​ಗೆ 5 ಓವರ್​ಗಳೊಳಗೆ 46 ರನ್ ಸೇರಿಸಿತು. ನವದೀಪ್ ಸೈನಿ ಈ ಜೋಡಿಯನ್ನು ಬೇರ್ಪಡಿಸಿದರು. ನಂತರ ಕ್ರೀಸಿಗಿಳಿದ ಮನೀಷ್ ಪಾಂಡೆ (9) ಜತೆ ಗುಪ್ಟಿಲ್ ಅಪಾಯಕಾರಿಯಾಗುವ ಲಕ್ಷಣ ತೋರಿದರು. ಆಗ ವಾಷಿಂಗ್ಟನ್ ಕೈಗೆ ಚೆಂಡು ನೀಡಿದ ನಾಯಕ ಕೊಹ್ಲಿ ಯಶ ಪಡೆದರು.

ವಾಷಿಂಗ್ಟನ್ ದಾಳಿಯಲ್ಲಿ ಶಾರ್ಟ್​ವಿುಡ್ ವಿಕೆಟ್​ನಲ್ಲಿ ಕೊಹ್ಲಿಗೆ ಕ್ಯಾಚ್ ಕೊಟ್ಟ ಗುಪ್ಟಿಲ್ ಡಗೌಟ್ ಸೇರಿದರು. ಬಳಿಕ ಮನೀಷ್, ಹೆಟ್ಮೆಯರ್ ಹಿಡಿದ ಆಕರ್ಷಕ ಕ್ಯಾಚ್​ಗೆ ಬಲಿಯಾದರು. ಬಳಿಕ ವಿಲಿಯಮ್ಸನ್ ಮತ್ತು ಆಲ್ರೌಂಡರ್ ವಿಜಯ್ ಶಂಕರ್(27) 45 ರನ್ ಜತೆಯಾಟವಾಡಿದರು. ಕೊನೆಯಲ್ಲಿ ವಿಲಿಯಮ್ಸನ್, ಭುವನೇಶ್ವರ್ ಬೆಂಬಲದೊಂದಿಗೆ ಗುಡುಗಿದರು.

One Reply to “ಆರ್​ಸಿಬಿ ಟೀಮ್ ಗೆಲುವಿನ ವಿದಾಯ: ಸನ್​ರೈಸರ್ಸ್ ಪ್ಲೇಆಫ್ ಆಸೆಗೆ ಹಿನ್ನಡೆ”

  1. ಆರ್ ಸಿ ಬಿ ರಾಜಸ್ಥಾನ್ ರಾಯಲ್ಸ್ ಮೇಲೆ ಮತ್ತೊಮ್ಮೆ ಆಡಬೇಕು ಮಳೆ ಬಂದಾಗ ಕಾರಣದಿಂದ ರದ್ದಾಗಿದೆ ಇದಕ್ಕಾಗಿ ಮತ್ತೊಮ್ಮೆ ಆಟವಾಡಿ ಪ್ಲೇ ಆಫ್ ಅವಕಾಶ ಸಿಗಬಹುದೇ ಎಂದು ಭಾವಿಸಿದ್ದೇವೆ

Comments are closed.