ಯುಗಾದಿಗೂ ಆರ್​ಸಿಬಿಗಿಲ್ಲ ಸಿಹಿ

| ಸಂತೋಷ್ ನಾಯ್ಕ್​ ಬೆಂಗಳೂರು

ಎದುರಿಸಿದ ಕೇವಲ 13 ಎಸೆತಗಳಲ್ಲಿ 7 ಸಿಡಿಲಬ್ಬರದ ಸಿಕ್ಸರ್​ನೊಂದಿಗೆ ಅಜೇಯ 48 ರನ್ ಚಚ್ಚಿದ ವೆಸ್ಟ್ ಇಂಡೀಸ್​ನ ವಿಧ್ವಂಸಕ ಆಲ್ರೌಂಡರ್ ಆಂಡ್ರೆ ರಸೆಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಯುಗಾದಿಯ ಬೆಲ್ಲ ಉಣಿಸಲಿದ್ದ ಗೆಲುವನ್ನು ಕೆಕೆಆರ್ ಮಡಿಲಿಗೆ ಹಾಕಿದರು. ಕೊನೆಯ 18 ಎಸೆತಗಳಲ್ಲಿ ಗೆಲುವಿಗೆ 53 ರನ್ ಬಾರಿಸುವ ಕಠಿಣ ಸವಾಲಿದ್ದ ವೇಳೆ ಜಮೈಕಾದ ಸುಂಟರಗಾಳಿ ರಸೆಲ್ ಬ್ಯಾಟಿಂಗ್ ಪ್ರಹಾರಕ್ಕೆ ತತ್ತರಿಸಿದ ಆರ್​ಸಿಬಿ ಐಪಿಎಲ್-12ರಲ್ಲಿ ಸತತ 5ನೇ ಸೋಲು ಎದುರಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಿತು. ವಿರಾಟ್ ಕೊಹ್ಲಿ (84ರನ್, 49 ಎಸೆತ, 9 ಬೌಂಡರಿ, 2 ಸಿಕ್ಸರ್) ಐಪಿಎಲ್​ನಲ್ಲಿ ಏಳು ಇನಿಂಗ್ಸ್​ಗಳ ಬಳಿಕ ಬಾರಿಸಿದ ಅರ್ಧಶತಕ ಹಾಗೂ ಎಬಿ ಡಿವಿಲಿಯರ್ಸ್ (63ರನ್, 32 ಎಸೆತ, 5 ಬೌಂಡರಿ, 4 ಸಿಕ್ಸರ್) ಹಾಲಿ ಟೂರ್ನಿಯಲ್ಲಿ ಬಾರಿಸಿದ 2ನೇ ಅರ್ಧಶತಕದ ನೆರವಿನಿಂದ 3 ವಿಕೆಟ್​ಗೆ 205 ರನ್​ಗಳ ದೊಡ್ಡ ಮೊತ್ತ ಪೇರಿಸಿತ್ತು. ಪ್ರತಿಯಾಗಿ ಕೆಕೆಆರ್, ಆಂಡ್ರೆ ರಸೆಲ್ (48*ರನ್, 13 ಎಸೆತ, 1 ಬೌಂಡರಿ, 7 ಸಿಕ್ಸರ್) ಆಡಿದ ಮನಮೋಹಕ ಇನಿಂಗ್ಸ್​ನ ನೆರವಿನಿಂದ 19.1 ಓವರ್​ಗಳ್ಲಿ 5 ವಿಕೆಟ್​ಗೆ 206 ರನ್ ಬಾರಿಸಿ ಗೆಲುವು ಕಂಡಿತು. ರಸೆಲ್​ರ ಸ್ಪೋಟಕ ಇನಿಂಗ್ಸ್​ಗಿಂತ ಹೆಚ್ಚಾಗಿ, ವೇಗದ ಬೌಲರ್​ಗಳ ಲಯವಿಲ್ಲದ ಬೌಲಿಂಗ್ ಹಾಗೂ 4 ಕ್ಯಾಚ್​ಗಳನ್ನು ಫೀಲ್ಡರ್​ಗಳು ಕೈಚೆಲ್ಲಿದ್ದು ಆರ್​ಸಿಬಿ ಪಾಲಿಗೆ ದುಬಾರಿ ಎನಿಸಿತ್ತು.

ದೊಡ್ಡ ಮೊತ್ತದ ಚೇಸಿಂಗ್​ಗೆ ಅಗತ್ಯವಾಗಿದ್ದ ಆರಂಭವನ್ನು ಕೆಕೆಆರ್ ಪಡೆದುಕೊಂಡಿತು. ಟಿಮ್ ಸೌಥಿ ಎಸೆದ ಮೊದಲ ಓವರ್​ನಲ್ಲಿ 17 ರನ್ ಸಿಡಿಸಿದ ಕೆಕೆಆರ್ ಮರು ಓವರ್​ನಲ್ಲಿ ವಿಕೆಟ್ ಕಳೆದುಕೊಂಡಿತು. ನವದೀಪ್ ಸೈನಿ ಓವರ್​ನಲ್ಲಿ ಸತತ 2 ಬೌಂಡರಿ ಬಾರಿಸಿದ ಸುನೀಲ್ ನಾರಾಯಣ್, ಮತ್ತೊಂದು ದೊಡ್ಡ ಶಾಟ್ ಬಾರಿಸಲು ಹೋಗಿ ಪವನ್ ನೇಗಿಗೆ ಬೌಂಡರಿ ಲೈನ್​ನಲ್ಲಿ ಕ್ಯಾಚಿತ್ತರು. ಅದಾಗಲೇ 1 ರನ್ ಪೇರಿಸಿದ ವೇಳೆ ಜೀವದಾನ ಪಡೆದುಕೊಂಡಿದ್ದ ಕ್ರಿಸ್ ಲ್ಯಾನ್​ಗೆ (43) ಜತೆಯಾದ ರಾಬಿನ್ ಉತ್ತಪ್ಪ (33) ತಾವು 10ನೇ ಓವರ್​ನಲ್ಲಿ ಔಟಾಗುವವರೆಗೂ ತಂಡ ಓವರ್​ಗೆ 10 ರನ್ ಪೇರಿಸುತ್ತಿತ್ತು. ಎಡಗೈ ಸ್ಪಿನ್ನರ್ ಪವನ್ ನೇಗಿ ಬೌಲಿಂಗ್​ಗೆ ಇಳಿದ ಬಳಿಕ, ಆರ್​ಸಿಬಿ ರನ್​ಗತಿ ಮೇಲೆ ನಿಯಂತ್ರಣ ಹೇರಲು ಯಶಸ್ವಿಯಾಯಿತು. ಆರ್​ಸಿಬಿ 18ನೇ ಓವರ್ ವೇಳೆಗಾಗಲೇ ಜಯದ ವಿಶ್ವಾಸದಲ್ಲಿತ್ತು. ಆದರೆ, ಮೊಹಮದ್ ಸಿರಾಜ್ ಎಸೆದ 18ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ರಸೆಲ್ ರನ್ ಬಾರಿಸಲು ವಿಫಲರಾದರೆ, ಬೀಮರ್ ಆದ 3ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದರು. 2ನೇ ಬೀಮರ್ ಎಸೆದ ಕಾರಣಕ್ಕೆ ಸಿರಾಜ್​ಗೆ ಓವರ್ ಮುಂದುವರಿಸಲು ಅವಕಾಶ ಸಿಗಲಿಲ್ಲ.

ರಸೆಲ್ ಸಿಕ್ಸರ್​ಗಳ ಸುರಿಮಳೆ

ಸಿರಾಜ್​ರ ಓವರ್ ಅಕಾಲಿಕವಾಗಿ ಮುಕ್ತಾಯವಾಗಿದ್ದು ಆರ್​ಸಿಬಿಯ ಅದೃಷ್ಟವನ್ನೂ ಕಸಿದುಕೊಂಡಿತು. ಸ್ಟೋಯಿನಿಸ್ ಮುಂದುವರಿಸಿದ ನಂತರದ 4 ಎಸೆತಗಳಲ್ಲಿ ರಸೆಲ್ ಸತತ 2 ಸಿಕ್ಸರ್ ಸಿಡಿಸಿದರೆ, ಒಟ್ಟಾರೆ ಈ ಓವರ್​ನಲ್ಲಿ 23 ರನ್ ಬಂದವು. ಸೌಥಿ ಎಸೆದ ಪ್ರಮುಖವಾಗಿದ್ದ 19ನೇ ಓವರ್​ನಲ್ಲಿ ಬಿರುಗಾಳಿಯೆಬ್ಬಿಸಿದ ರಸೆಲ್ 4 ಆಕರ್ಷಕ ಸಿಕ್ಸರ್​ನೊಂದಿಗೆ 29 ರನ್ ಚಚ್ಚಿದರು. 19ನೇ ಓವರ್​ನ ಕೊನೇ ಎಸೆತದಲ್ಲಿ ಲಾಂಗ್ ಆಫ್​ನಲ್ಲಿ ಸಿಕ್ಸರ್ ಚಚ್ಚಿದ ಬೆನ್ನಲ್ಲಿಯೇ ಮೊತ್ತ ಸಮಬಲ ಕಂಡಿತು. ಕೊನೇ ಓವರ್​ನ ಮೊದಲ ಎಸೆತದಲ್ಲಿ ಶುಭಮಾನ್ ಗಿಲ್ 1 ರನ್ ಗಳಿಸಿ ಜಯ ಪೂರ್ತಿಗೊಳಿಸಿದರು. 6ನೇ ವಿಕೆಟ್​ಗೆ ಕೇವಲ 14 ಎಸೆತಗಳಲ್ಲಿ 53 ರನ್ ಜತೆಯಾಟವಾಡಿದ ಈ ಜೋಡಿ ಇನ್ನೂ 5 ಎಸೆತಗಳಿರುವಂತೆ ಕೆಕೆಆರ್​ಗೆ ಗೆಲುವು ನೀಡಿತು.

ಕೊನೇ 4 ಓವರ್ ಬೌಲಿಂಗ್ ರೀತಿ ನೋಡಿದರೆ ನಾವು ಸೋಲಿಗೆ ಅರ್ಹ ರಾಗಿದ್ದೆವು. ರಸೆಲ್​ರಂಥ ಪವರ್ ಹಿಟ್ಟರ್​ಗಳೆದುರು ಸಮರ್ಥ ಬೌಲಿಂಗ್ ಮಾಡದಿದ್ದರೆ ದಂಡನೆ ಎದುರಿಸಬೇಕಾಗುತ್ತದೆ. ಒತ್ತಡದಲ್ಲಿ ಕುಸಿದೆವು.

| ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕ

ಕೆಕೆಆರ್ ಬೆಂಡೆತ್ತಿದ ಕೊಹ್ಲಿ-ಎಬಿಡಿ

ಹಿಂದಿನ ನಾಲ್ಕು ಪಂದ್ಯಗಳಲ್ಲಿ ಮೊದಲ ಎಸೆತದಿಂದಲೇ ಎಡವಟ್ಟು ಮಾಡಿಕೊಳ್ಳುತ್ತಿದ್ದ ಆರ್​ಸಿಬಿ ಈ ಬಾರಿ ಬಹಳ ಎಚ್ಚರಿಕೆಯಲ್ಲಿ ಬ್ಯಾಟಿಂಗ್ ಮಾಡಿತು. ಪಾರ್ಥಿವ್ ಪಟೇಲ್ (25ರನ್, 24 ಎಸೆತ, 3 ಬೌಂಡರಿ) ಹಾಗೂ ಕೊಹ್ಲಿ ಮೊದಲ ವಿಕೆಟ್​ಗೆ 7.5 ಓವರ್​ಗಳಲ್ಲಿ 65 ರನ್ ಸೇರಿಸಿ ಬೇರ್ಪಟ್ಟಿತು. ಆರ್​ಸಿಬಿ ಆರು ಪಂದ್ಯಗಳ ಬಳಿಕ ಮೊದಲ ವಿಕೆಟ್​ಗೆ ಅರ್ಧಶತಕದ ಜತೆಯಾಟ ಕಂಡಿತು. ಪವರ್ ಪ್ಲೇ ಮುಗಿದ 2 ಓವರ್​ಗಳ ಬಳಿಕ ಜತೆಯಾದ ಸ್ಟೈಲಿಷ್ ಬ್ಯಾಟಿಂಗ್ ಜೋಡಿ ಕೊಹ್ಲಿ-ಡಿವಿಲಿಯರ್ಸ್, ಸಿಕ್ಸರ್ ಬೌಂಡರಿಗಳ ಮಳೆಗರೆದು ಪ್ರೇಕ್ಷಕರನ್ನು ರಂಜಿಸಿದಲ್ಲದೆ, ಮೊತ್ತವನ್ನು ಭರ್ಜರಿಯಾಗಿ ಏರಿಸಿದರು. ರಸೆಲ್ ಎಸೆದ 14ನೇ ಓವರ್​ನಲ್ಲಿ ವಿಲಿಯರ್ಸ್ 2 ಸಿಕ್ಸರ್ ಸಿಡಿಸಿ ದೊಡ್ಡ ಮೊತ್ತದ ಸೂಚನೆಯನ್ನು ರವಾನಿಸಿದರು. 17 ಓವರ್​ನ ಮೊದಲ ಎಸೆತದಲ್ಲಿ ಕೊಹ್ಲಿ, ಕುಲದೀಪ್​ಗೆ ರಿಟರ್ನ್ ಕ್ಯಾಚ್ ಕೊಟ್ಟು ಔಟಾಗುವವರೆಗೂ ಚೆಂಡು ಹೆಚ್ಚಾಗಿ ಬೌಂಡರಿ ಗೆರೆಯನ್ನೇ ದಾಟುತ್ತಿದ್ದವು. ಕೊಹ್ಲಿಗಿಂತ ಬಿರುಸಾಗಿ ರನ್ ಕಲೆಹಾಕುತ್ತಿದ್ದ ವಿಲಿಯರ್ಸ್, ಪ್ರಸಿದ್ಧ ಕೃಷ್ಣ ಓವರ್​ನಲ್ಲಿ ಬೌಂಡರಿ ಸಿಡಿಸಿ 29 ಎಸೆತಗಳಲ್ಲಿ ಐಪಿಎಲ್​ನ 30ನೇ ಅರ್ಧಶತಕ ಪೂರೈಸಿಕೊಂಡರು. ಈ ಜೋಡಿ ಆರ್​ಸಿಬಿಗೆ ಸಲೀಸಾಗಿ 200ಕ್ಕೂ ಅಧಿಕ ರನ್ ಪೇರಿಸುವ ಅವಕಾಶ ಸೃಷ್ಟಿಸಿದ್ದವು. ಆದರೆ, 9 ಎಸೆತಗಳ ಅಂತರದಲ್ಲಿ ಕೊಹ್ಲಿ ಹಾಗೂ ವಿಲಿಯರ್ಸ್ ಇಬ್ಬರೂ ಡಗ್​ಔಟ್​ಗೆ ಸೇರಿದಾಗ ಈ ಮೊತ್ತದ ಬಗ್ಗೆ ಅನುಮಾನ ಮೂಡಿತ್ತು.

200ರ ಗಡಿ ದಾಟಿಸಿದ ಸ್ಟೋಯಿನಿಸ್

ಕೆಕೆಆರ್ ತಂಡದ ಅಗ್ರಸ್ಪಿನ್ನರ್ ಸುನೀಲ್ ನಾರಾಯಣ್ ಪಂದ್ಯದ 19ನೇ ಓವರ್​ನಲ್ಲಿ ಕೇವಲ 6 ರನ್ ನೀಡಿ ವಿಲಿಯರ್ಸ್ ವಿಕೆಟ್ ಉರುಳಿಸಿದ್ದರು. ಇನಿಂಗ್ಸ್ ಮುಗಿಯಲು ಇನ್ನೊಂದು ಓವರ್ ಬಾಕಿಯದ್ದರೂ, ಆರ್​ಸಿಬಿ 200ರ ಗಡಿ ದಾಟುವ ಬಗ್ಗೆ ಅನುಮಾನಗಳಿದ್ದವು. ಪ್ರಸಿದ್ಧ ಕೃಷ್ಣ ಎಸೆದ ಕೊನೇ ಓವರ್​ನಲ್ಲಿ ಮಾರ್ಕಸ್ ಸ್ಟೋಯಿನಿಸ್ (28* ರನ್, 13 ಎಸೆತ, 3 ಬೌಂಡರಿ, 1 ಸಿಕ್ಸರ್) 2 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ಆರ್​ಸಿಬಿ 16ನೇ ಬಾರಿಗೆ ಐಪಿಎಲ್​ನಲ್ಲಿ 200ಕ್ಕೂ ಅಧಿಕ ಮೊತ್ತ ದಾಖಲಿಸುವಲ್ಲಿ ನೆರವಾದರು. ಬೆಂಗಳೂರಿನಲ್ಲಿ 12ನೇ ಬಾರಿ 200ರನ್ ಪೇರಿಸಿತು.

01

ಕೊಹ್ಲಿ 84 ರನ್ ಬಾರಿಸಿದ ಹಾದಿಯಲ್ಲಿ ಐಪಿಎಲ್​ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿಕೊಂಡರು. 5,110 ರನ್ ಬಾರಿಸಿ ಚೆನ್ನೈ ಸೂಪರ್ ಕಿಂಗ್ಸ್​ನ ಸುರೇಶ್ ರೈನಾರನ್ನು 2ನೇ ಸ್ಥಾನಕ್ಕೆ ತಳ್ಳಿದರು. 5,086 ರನ್ ಬಾರಿಸಿರುವ ರೈನಾಗೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮತ್ತೆ ಕೊಹ್ಲಿಯನ್ನು ಹಿಂದಿಕ್ಕುವ ಅವಕಾಶವಿದೆ.