ಇಂದು ಆರ್​ಸಿಬಿ vs ಸಿಎಸ್​ಕೆ

ಚೆನ್ನೈ: ಲೋಕಸಭೆ ಮಹಾಸಮರದ ಬಿಸಿ ನಡುವೆಯೇ ಆರಂಭಗೊಳ್ಳಲಿರುವ ಐಪಿಎಲ್-12ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ತಂಡಗಳು ಎದುರಾಗಲಿವೆ. ಮರೀನಾ ಬೀಚ್ ಕಡಲ ತೀರದಲ್ಲಿರುವ ಚೆಪಾಕ್​ನ ಎಂಎ ಚಿದಂಬರಂ ಸ್ಟೇಡಿಯಂ, ಶನಿವಾರ ನಡೆಯಲಿರುವ ಹೈವೋಲ್ಟೆಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಬಹುತೇಕ ಯುವ ಆಟಗಾರರನ್ನು ಹೊಂದಿರುವ ವಿರಾಟ್ ಕೊಹ್ಲಿ ಬಳಗಕ್ಕೆ ಆತಿಥೇಯ ಹಿರಿಯರ ಪಡೆ ಸವಾಲೊಡ್ಡಲಿದೆ.

ಸಿಎಸ್​ಕೆ ಈ ಬಾರಿಯೂ ಡ್ಯಾಡ್ಸ್ ಆರ್ವಿು!: ‘ಡ್ಯಾಡ್ಸ್ ಆರ್ವಿು’ ಪಟ್ಟದ ನಡುವೆಯೂ ಕಳೆದ ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದ ಎಂಎಸ್ ಧೋನಿ ನಾಯಕತ್ವದ ಚೆನ್ನೈ ತಂಡ ಈ ಸಲವೂ ಫೇವರಿಟ್ ತಂಡವಾಗಿಯೇ ಕಣಕ್ಕಿಳಿಯಲಿದೆ. ಬಹುತೇಕ ಸ್ಟಾರ್ ಆಟಗಾರರು 30ರ ಗಡಿ ದಾಟಿರುವುದರಿಂದ ‘ಡ್ಯಾಡ್ಸ್ ಆರ್ವಿು’ ಎಂದೇ ಕರೆಸಿಕೊಳ್ಳುವ ಚೆನ್ನೈ ತಂಡ ಸ್ಥಳೀಯ ಕ್ರಿಕೆಟ್ ಪ್ರೇಮಿಗಳಿಂದ ಅಪಾರ ಪ್ರೀತಿ ಪಡೆಯುತ್ತಿದೆ. ಎರಡು ದಿನಗಳ ಹಿಂದಷ್ಟೇ ಆಟಗಾರರ ಅಭ್ಯಾಸ ಪಂದ್ಯ ನೋಡಲು ಸುಮಾರು 12 ಸಾವಿರ ಅಭಿಮಾನಿಗಳು ಮೈದಾನಕ್ಕೆ ಆಗಮಿಸಿದ್ದು ಇದಕ್ಕೆ ಸಾಕ್ಷಿ.

ಆತ್ಮವಿಶ್ವಾಸದಲ್ಲಿ ಆರ್​ಸಿಬಿ: ಕಳೆದ 2 ಆವೃತ್ತಿಗಳಲ್ಲಿ ಕನಿಷ್ಠ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿರುವ ಆರ್​ಸಿಬಿ, ಈ ಬಾರಿ ಕೆಲ ಯುವ ಆಟಗಾರರು ತಂಡ ಕೂಡಿಕೊಂಡ ಆತ್ಮವಿಶ್ವಾಸದಲ್ಲಿದೆ. ಸತತ 8ನೇ ಬಾರಿ ಆರ್​ಸಿಬಿ ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿ ಮುಂಬರುವ ಏಕದಿನ ವಿಶ್ವಕಪ್​ಗೆ ತೆರಳುವುದಕ್ಕೂ ಮುನ್ನ ಬಹುನಿರೀಕ್ಷಿತ ಟ್ರೋಫಿ ಎತ್ತಿಹಿಡಿಯುವ ಉತ್ಸಾಹದಲ್ಲಿದ್ದಾರೆ. ವಿರಾಟ್ ಕೊಹ್ಲಿ, ಸ್ಪೋಟಕ ಬ್ಯಾಟ್ಸ್​ಮನ್ ಎಬಿ ಡಿವಿಲಿಯರ್ಸ್, ವೆಸ್ಟ್ ಇಂಡೀಸ್​ನ ಶಿಮ್ರೊನ್ ಹೆಟ್ಮೆಯೆರ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠಗೊಂಡಿದ್ದರೂ, ಬೌಲಿಂಗ್ ವಿಭಾಗ ಸಿಎಸ್​ಕೆ ತಂಡ ವನ್ನು ಕಟ್ಟಿಹಾಕಬೇಕಿದೆ. ಯಜುವೇಂದ್ರ ಚಾಹಲ್-ಉಮೇಶ್ ಯಾದವ್ ಸಾರಥ್ಯದ ಬೌಲಿಂಗ್ ಪಡೆ ಕಳೆದ 5 ವರ್ಷಗಳಿಂದ ಹಳದಿ ತಂಡದೆದುರು ಕನಸಾ ಗಿರುವ ಜಯಕ್ಕಾಗಿ ಹೋರಾಡಲಿದೆ. –ಏಜೆನ್ಸೀಸ್

ಕೊನೇ ಪಂದ್ಯದಲ್ಲಿ ಆರ್​ಸಿಬಿಗೆ ಸೋಲು

ಕಳೆದ ಆವೃತ್ತಿಯಲ್ಲಿ ಸಿಎಸ್​ಕೆ ಬದಲಿ ತಾಣ ಪುಣೆಯಲ್ಲಿ ನಡೆದ ಉಭಯ ತಂಡಗಳ ಕಡೇ ಮುಖಾಮುಖಿಯಲ್ಲಿ ಆರ್​ಸಿಬಿ 6 ವಿಕೆಟ್​ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಜಡೇಜಾ ಮೊದಲ ಎಸೆತದಲ್ಲಿ ಕೊಹ್ಲಿ ವಿಕೆಟ್ ಪಡೆದರೆ, ಹರ್ಭಜನ್ ಸಿಂಗ್ ಮೊದಲ ಎಸೆತದಲ್ಲೇ ಡಿವಿಲಿಯರ್ಸ್​ರನ್ನು ಔಟ್ ಮಾಡಿದ್ದರು

ರೈನಾ-ಕೊಹ್ಲಿ ಪೈಪೋಟಿ

ಆರ್​ಸಿಬಿ ತಂಡದ ವಿರಾಟ್ ಕೊಹ್ಲಿ ಹಾಗೂ ಸಿಎಸ್​ಕೆ ತಂಡದ ಸುರೇಶ್ ರೈನಾ ಐಪಿಎಲ್​ನಲ್ಲಿ 5 ಸಾವಿರ ರನ್ ಗಡಿ ದಾಟುವ ಅವಕಾಶ ಹೊಂದಿದ್ದಾರೆ. ಕೊಹ್ಲಿ ಆಡಿರುವ 163 ಪಂದ್ಯಗಳಿಂದ 4,948 ರನ್​ಗಳಿಸಿದ್ದರೆ, ಸುರೇಶ್ ರೈನಾ 176 ಪಂದ್ಯಗಳಿಂದ 4,985 ರನ್ ಬಾರಿಸಿದ್ದಾರೆ. ಇವರಿಬ್ಬರಲ್ಲಿ ಯಾರು ಮೊದಲಿಗೆ 5 ಸಾವಿರ ರನ್ ಪೂರೈಸುವರು ಎಂಬ ಕುತೂಹಲವಿದೆ.

732

ವಿರಾಟ್ ಕೊಹ್ಲಿ 732 ರನ್ ಬಾರಿಸಿದ್ದು, ಸಿಎಸ್​ಕೆ ವಿರುದ್ಧ ಯಾವುದೇ ಬ್ಯಾಟ್ಸ್​ಮನ್ ಗಳಿಸಿರುವ ಅತ್ಯಧಿಕ ರನ್​ಗಳಾಗಿವೆ. ಅತ್ತ ಎಂಎಸ್ ಧೋನಿ ಆರ್​ಸಿಬಿ ವಿರುದ್ಧ 710 ರನ್​ಗಳಿಸಿದ್ದಾರೆ.