ಸಾಲ ಕೊಂಚ ಅಗ್ಗ?

ನವದೆಹಲಿ: ಕೇಂದ್ರ ಸರ್ಕಾರ ತನ್ನ ಮಧ್ಯಂತರ ಬಜೆಟ್​ನಲ್ಲಿ ಸಾಮಾನ್ಯ ಹಾಗೂ ಮಧ್ಯಂತರ ವರ್ಗಕ್ಕೆ ಜನಪ್ರಿಯ ಉಡುಗೊರೆಗಳನ್ನು ನೀಡಿದ ಬೆನ್ನಲ್ಲೇ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ 25 ಮೂಲಾಂಶ ರೆಪೋ ದರ ಕಡಿತಗೊಳಿಸುವ ಮೂಲಕ ಸಾಲದ ಹೊರೆಯನ್ನು ಕೊಂಚ ಇಳಿಸಲು ದಾರಿ ಮಾಡಿಕೊಟ್ಟಿದೆ. ಬರೋಬ್ಬರಿ ಒಂದೂವರೆ ವರ್ಷಗಳ ಬಳಿಕ ಮೊದಲ ಬಾರಿ ರೆಪೋ ದರದಲ್ಲಿ ಇಳಿಕೆಯಾಗಿದೆ. ಇದರೊಂದಿಗೆ ಹಾಲಿ ರೆಪೋ ದರ ಶೇ.6 ಹಾಗೂ ರಿವರ್ಸ್ ರೆಪೋ ದರ ಶೇ.5.75ರಷ್ಟು ಕಡಿತಗೊಂಡಂತಾಗಿದೆ. ಇದರಿಂದ ಚುನಾವಣೆಗೂ ಮುನ್ನ ಗೃಹ ಸಾಲ ಸೇರಿ ಇತರ ಬ್ಯಾಂಕಿಂಗ್ ಸಾಲಗಳ ಮೇಲಿನ ಬಡ್ಡಿ ದರದಲ್ಲಿಯೂ ಇಳಿಕೆಯಾಗುವ ಸಾಧ್ಯತೆಯಿದೆ. ಆರ್​ಬಿಐ ನೂತನ ನಿಯಮಗಳ ಪ್ರಕಾರ ರೆಪೋ ಇಳಿಕೆ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ. ಬ್ಯಾಂಕ್​ಗಳು ಈ ಬದಲಾವಣೆಯನ್ನು ತಮ್ಮ ಗ್ರಾಹಕರಿಗೆ ನೀಡಬೇಕಾಗುತ್ತದೆ.

ಆರ್​ಬಿಐನ ತ್ರೖೆಮಾಸಿಕ ಸಭೆಯಲ್ಲಿ ಈ ನಿರ್ಧಾರ ಹೊರಬಂದಿದ್ದು, ಆಡಳಿತ ಮಂಡಳಿಯ ಇಬ್ಬರು ಸದಸ್ಯರ ವಿರೋಧದ ನಡುವೆಯೂ ರೆಪೋ ದರ ಕಡಿತವಾಗಿದೆ. ಈ ಹಿಂದೆ 2017ರ ಆಗಸ್ಟ್​ನಲ್ಲಿ 25 ಮೂಲಾಂಶ ಕಡಿಮೆಯಾಗಿತ್ತು. ಆ ಬಳಿಕ ಯಥಾಸ್ಥಿತಿ ಅಥವಾ ಏರಿಕೆ ಮಾಡಿಕೊಂಡು ಬರಲಾಗಿತ್ತು. ಹಾಲಿ ಬದಲಾವಣೆಯಿಂದ ದರ ಏರಿಕೆ ಮೇಲೆ ಇನ್ನಷ್ಟು ನಿಯಂತ್ರಣ ಬೀಳಲಿದ್ದು, ಹಣದುಬ್ಬರ ಕಡಿಮೆಯಾಗಲಿದೆ ಎಂದು ಆರ್​ಬಿಐ ಅಭಿಪ್ರಾಯಪಟ್ಟಿದೆ.

ಭದ್ರತಾ ರಹಿತ ಸಾಲ ಮಿತಿ ಏರಿಕೆ
ರೈತರಿಗೆ ಬಜೆಟ್​ನಲ್ಲಿ ಪ್ರೋತ್ಸಾಹ ಧನ ನೀಡಿಕೆ ಹಾಗೂ ಒಟ್ಟಾರೆ ಸಾಲದ ಪ್ರಮಾಣದ ಏರಿಕೆಗೆ ಕೇಂದ್ರ ನಿರ್ಧರಿಸಿತ್ತು. ಈಗ ಭದ್ರತೆ ರಹಿತವಾಗಿ 1.5 ಲಕ್ಷ ರೂ.ವರೆಗೆ ಕೃಷಿ ಸಾಲ ನೀಡಲು ಆರ್​ಬಿಐ ಅವಕಾಶ ನೀಡಿದೆ. ಈ ಹಿಂದೆ 1 ಲಕ್ಷ ರೂ.ವರೆಗೆ ಭದ್ರತೆ ರಹಿತವಾಗಿ ಸಾಲ ನೀಡಬಹುದಿತ್ತು.

ಇಎಂಐ ಇಳಿಕೆ ಲೆಕ್ಕಾಚಾರ
ಸಾಲದ ಮೊತ್ತ: 30,00,000

ಸಾಲದ ಅವಧಿ: 20 ವರ್ಷ

ಹಾಲಿ ಬಡ್ಡಿದರ: ಶೇ.8.8

ಇಎಂಐ: 26,607.10

ನೂತನ ಬಡ್ಡಿದರ: ಶೇ.8.55

ನೂತನ ಇಎಂಐ: 26,129.71

ಇಎಂಐ ಇಳಿಕೆ: 477.39

ಜಿಡಿಪಿ ಏರಿಕೆ ಭವಿಷ್ಯ
2019-20ನೇ ಆರ್ಥಿಕ ಸಾಲಿನಲ್ಲಿ ಭಾರತದ ಜಿಡಿಪಿ ಶೇ.7.4 ಇರಲಿದೆ. ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ.7.2-7.4 ಇರಲಿದೆ ಎಂದು ಆರ್​ಬಿಐ ಹೇಳಿದೆ. ಹೀಗಾಗಿ ಚೀನಾಕ್ಕಿಂತಲೂ ವೇಗವಾಗಿ ಭಾರತದ ಜಿಡಿಪಿ ಬೆಳೆಯುತ್ತಿದೆ ಎನ್ನುವ ವಿಶ್ವಬ್ಯಾಂಕ್ ಹಾಗೂ ಐಎಂಎಫ್ ವರದಿಗೆ ಆರ್​ಬಿಐ ಮುನ್ನೋಟ ಕೂಡ ಧ್ವನಿಗೂಡಿಸಿದೆ.

ಆರ್​ಬಿಐ ಮುನ್ನೋಟ

# ಚಿಲ್ಲರೆ ಹಣದುಬ್ಬರ: ಶೇ.2.8, ಗ್ರಾಹಕರ ಹಣದುಬ್ಬರ: ಶೇ.3.2

# ಸಾಲಮಿತಿ ಏರಿಕೆಯಿಂದ ಕೃಷಿ ವಲಯದ ಮೇಲೆ ಧನಾತ್ಮಕ ಪರಿಣಾಮ

# ಖಾಸಗಿ ಹೂಡಿಕೆ ಹಾಗೂ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು

# ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು

# ಫೆಬ್ರವರಿ ಅಂತ್ಯದೊಳಗೆ ಎನ್​ಬಿಎಫ್​ಸಿ ಕುರಿತು 1ಮಾರ್ಗಸೂಚಿ

# ಎನ್​ಬಿಎಫ್​ಸಿಗಳ ಸಾಲ ನೀಡಿಕೆ ವ್ಯವಸ್ಥೆ ಸರಳೀಕರಣ

# ಆಮದು ಪ್ರಮಾಣ ಇಳಿಕೆ ಹಾಗೂ ರಫ್ತು ಪ್ರಮಾಣ ಸಮಾನವಾಗಿರುವುದು ಆಶಾದಾಯಕ