ಸಾಲ ಹೊರೆ ಹಗುರ?

ಮುಂಬೈ: ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ರೆಪೋ ದರವನ್ನು ಇಳಿಸಿದೆ. ಗುರುವಾರ ಮುಂಬೈನಲ್ಲಿ ನಡೆದ ಆರ್​ಬಿಐ ಹಣಕಾಸು ಯೋಜನಾ ಸಮಿತಿ(ಎಂಪಿಸಿ)ಸಭೆಯಲ್ಲಿ ರೆಪೋ ದರದಲ್ಲಿ 25 ಮೂಲಾಂಶ ಇಳಿಕೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಇದರಿಂದ ಮುಂದಿನ ದಿನಗಳಲ್ಲಿ ಗೃಹ, ವಾಹನ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ನಿರೀಕ್ಷೆಯಿದೆ. ಆರ್ಥಿಕ ಪ್ರಗತಿ, ರೂಪಾಯಿ ಮೌಲ್ಯ ಏರಿಕೆಯಂತಹ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ರೆಪೋ ದರ ಇಳಿಕೆಗೆ ನಿರ್ಧರಿಸಲಾಗಿದೆ. 4:2 ಅನುಪಾತದಲ್ಲಿ ರೆಪೋ ದರ ಕಡಿತಕ್ಕೆ ಎಂಪಿಸಿ ಸದಸ್ಯರು ಬೆಂಬಲ ಸೂಚಿಸಿದರು. ಆ ಮೂಲಕ 2019ರಲ್ಲಿ ಎರಡನೇ ಬಾರಿ ರೆಪೋ ದರ ಇಳಿಕೆ ಮಾಡಿದಂತಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್​ಬಿಐ ರೆಪೋ ದರವನ್ನು ಶೇ.0.25 ಇಳಿಕೆ ಮಾಡಿತ್ತು. ಹೀಗಾಗಿ ಈಗ ರೆಪೋ ದರ ಶೇ.6ಕ್ಕೆ ಬಂದಿದೆ.

ಬ್ಯಾಂಕ್​ಗಳಿಗೆ ಬಿಟ್ಟಿದ್ದು: ರೆಪೋ ದರ ಇಳಿಕೆಯಿಂದಾಗಿ ಆರ್​ಬಿಐ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ತಗ್ಗಿಸಲಿದೆ. ಕಡಿತಗೊಂಡ ಬಡ್ಡಿದರವನ್ನು ಗ್ರಾಹಕರಿಗೆ ವರ್ಗಾಯಿಸುವ ಜವಾಬ್ದಾರಿ ವಾಣಿಜ್ಯ ಬ್ಯಾಂಕುಗಳ ಮೇಲಿರುತ್ತದೆ. ಆದರೆ ಇದು ಬ್ಯಾಂಕುಗಳ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿರುತ್ತದೆ. ಹಿಂದೆ ರೆಪೋ ದರ ಇಳಿಕೆ ಮಾಡಿದಾಗ ವಾಣಿಜ್ಯ ಬ್ಯಾಂಕುಗಳು ಅಷ್ಟು ಪ್ರಮಾಣದಲ್ಲಿ ಬಡ್ಡಿದರ ಇಳಿಕೆ ಮಾಡಿರಲಿಲ್ಲ.

ಆರ್​ಬಿಐ ರೆಪೋ ದರದಲ್ಲಿ ಶೇ.0.25 ಇಳಿಕೆ ಮಾಡಿದಾಗ ದೇಶದ ಪ್ರಮುಖ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು ಶೇ.0.05ರಿಂದ 0.10 ಮಾತ್ರವೇ ಇಳಿಸಿದ್ದವು. ಹೀಗಾಗಿ ಈ ಬಾರಿಯೂ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಆದರೆ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟಿದ್ದಲ್ಲಿ ಇದಕ್ಕೆ ನೀಡುವ ಬಡ್ಡಿದರದಲ್ಲಿ ಇಳಿಕೆಯಾಗಲಿದೆ. ಎಸ್​ಬಿಐ ಸಾಲದ ಮೇಲಿನ ಬಡ್ಡಿದರವನ್ನು ರೆಪೋ ದರದೊಂದಿಗೆ ಜೋಡಿಸಿರುವುದರಿಂದ ಮೇ 1ರಿಂದ ಇದರ ಅನುಕೂಲ ಗ್ರಾಹಕರಿಗೆ ವರ್ಗಾವಣೆಯಾಗಲಿದೆ.

ಜಿಡಿಪಿ ಅಭಿವೃದ್ಧಿ ದರ ಇಳಿಕೆ

ಆರ್​ಬಿಐ ಫೆಬ್ರವರಿಯಲ್ಲಿ ಜಿಡಿಬಿ ಅಭಿವೃದ್ಧಿ ಪ್ರಮಾಣ ಶೇ.7.4ರಷ್ಟಿರಲಿದೆ ಎಂದು ನಿರೀಕ್ಷಿಸಿತ್ತು. ಆದರೆ ಈ ಬಾರಿ ಇದನ್ನು ಶೇ. 7.2ಕ್ಕೆ ಇಳಿಕೆ ಮಾಡಿದೆ. 2019-20 ಆರ್ಥಿಕ ವರ್ಷದ ಮೊದಲ ತ್ರೖೆಮಾಸಿಕ ಅವಧಿಯಲ್ಲಿ ಜಿಡಿಪಿ ಅಭಿವೃದ್ಧಿ ಶೇ.6.8ರಿಂದ ಶೇ.7.1ರಷ್ಟಿದ್ದರೆ ವರ್ಷಾಂತ್ಯದ ಆರು ತಿಂಗಳಲ್ಲಿ ಜಿಡಿಪಿ ಶೇ. 7.3-7.4ರಷ್ಟು ಅಭಿವೃದ್ಧಿ ಸಾಧಿಸಲಿದೆ ಎಂದು ಹೇಳಿದೆ. ಸ್ಥಳೀಯ ಹೂಡಿಕೆ ಚಟುವಟಿಕೆಯಲ್ಲಿ ಇಳಿಮುಖ ಕಂಡುಬಂದಿದೆ. ಉತ್ಪಾದನೆ ಮತ್ತು ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿರುವುದು ಜಿಡಿಪಿ ಅಭಿವೃದ್ಧಿ ಮೇಲೆ ಪ್ರಭಾವ ಬೀರಲಿದೆ ಎನ್ನಲಾಗಿದೆ.ಇನ್ನು ಗ್ರಾಹಕ ಹಣದುಬ್ಬರ ಪ್ರಮಾಣದಲ್ಲೂ ಇಳಿಕೆ ನಿರೀಕ್ಷಿಸಲಾಗಿದೆ.