ಸ್ಯಾಂಡಲ್​ವುಡ್​ಗೆ ರವಿಚಂದ್ರನ್ ಪುತ್ರ ಎಂಟ್ರಿ

ಬೆಂಗಳೂರು: ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಪುತ್ರ ವಿಕ್ರಮ್ ಬಾಲನಟನಾಗಿ ಈ ಹಿಂದೆಯೇ ತೆರೆಮೇಲೆ ಕಾಣಿಸಿಕೊಂಡಿದ್ದರು. ಆದರೆ, ಅವರು ಹೀರೋ ಆಗಿ ಯಾವಾಗ ಲಾಂಚ್ ಆಗುತ್ತಾರೆ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಅವರ ಸಹೋದರ ಮನೋರಂಜನ್ ರವಿಚಂದ್ರನ್ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದುಕೊಂಡಂತೆಯೇ ಆಗಿದ್ದರೆ, ಕಳೆದ ವರ್ಷವೇ ಚಿತ್ರರಂಗಕ್ಕೆ ವಿಕ್ರಮ್ ಎಂಟ್ರಿ ಆಗಿರಬೇಕಿತ್ತು. ಅದು ಸಾಧ್ಯವಾಗಿರಲಿಲ್ಲ. ಆದರೀಗ ವಿಕ್ರಮ್ ಸಿನಿಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. ‘ರೋಸ್’, ‘ಮಾಸ್ ಲೀಡರ್’ ಖ್ಯಾತಿಯ ಸಹನಾ ಮೂರ್ತಿ ಹೊಸ ಸಿನಿಮಾವೊಂದಕ್ಕೆ ನಿರ್ದೇಶನ ಮಾಡುತ್ತಿದ್ದು, ಆ ಮೂಲಕ ವಿಕ್ರಮ್ ಚೊಚ್ಚಲ ಬಾರಿಗೆ ಹೀರೋ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಸಹನಾ ಮೂರ್ತಿ, ‘ಈ ಸಿನಿಮಾಗಾಗಿ ಕಳೆದ 2 ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದೇನೆೆ. ರವಿಚಂದ್ರನ್ ಅವರಂತಹ ಸ್ಟಾರ್ ನಟರ ಪುತ್ರನ ಚೊಚ್ಚಲ ಸಿನಿಮಾ ಎಂದಮೇಲೆ ಜವಾಬ್ದಾರಿ ಜಾಸ್ತಿಯೇ ಇರುತ್ತದೆ. ಯಾಕೆಂದರೆ, ಅಭಿಮಾನಿಗಳಲ್ಲೂ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಒಂದು ಡಿಫರೆಂಟ್ ಆದ ಲವ್ ಸ್ಟೋರಿ ಮಾಡಿಕೊಂಡಿದ್ದೇನೆ. ಪಕ್ಕದ ಮನೆ ಹುಡುಗನ ಥರದ ಪಾತ್ರದಲ್ಲಿ ವಿಕ್ರಮ್ ಕಾಣಿಸಿ ಕೊಳ್ಳಲಿದ್ದಾರೆ’ ಎನ್ನುತ್ತಾರೆ. ವಿಕ್ರಮ್ ಈಗಾಗಲೇ ಅಭಿನಯ ತರಂಗದಲ್ಲಿ ನಟನೆಯ ಪಾಠ ಕಲಿತಿದ್ದಾರೆ. ಜತೆಗೆ ರವಿವರ್ಮ ಗರಡಿಯಲ್ಲಿ ಆಕ್ಷನ್ ತರಬೇತಿ ಪಡೆದುಕೊಂಡಿದ್ದಾರಂತೆ. ಮುರಳಿ, ಕಲೈ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗೆ ಎಲ್ಲ ರೀತಿಯಲ್ಲಿ ಸಜ್ಜುಗೊಳಿಸಿಯೇ ಅವರನ್ನು ಸ್ಯಾಂಡಲ್​ವುಡ್​ಗೆ ಪರಿಚಯ ಮಾಡಲಾಗುತ್ತಿದೆ. ಸೋಮಣ್ಣ ಮತ್ತು ಸುರೇಶ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ವರಮಹಾಲಕ್ಷ್ಮೀ ಹಬ್ಬದಂದು ಮುಹೂರ್ತ ನೆರವೇರಲಿದೆ. ಆಗಸ್ಟ್ 10ರಂದು ನಡೆಯುವ ಅದ್ದೂರಿ ಕಾರ್ಯಕ್ರಮದ ಮೂಲಕ ವಿಕ್ರಮ್ ಅವರನ್ನು ಲಾಂಚ್ ಮಾಡುವ ಯೋಜನೆ ಚಿತ್ರತಂಡದ್ದು. ಇನ್ನು, ವಿಕ್ರಮ್ೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ? ‘ಸದ್ಯ ನಾಯಕಿಯ ಹುಡುಕಾಟ ಮುಂದುವರಿದಿದೆ. ಹೊಸ ಹುಡುಗಿಯೇ ಆಗಬೇಕು, ಅದರಲ್ಲೂ ಕನ್ನಡದ ಹುಡುಗಿಯೇ ಬೇಕು ಎಂಬುದು ಚಿತ್ರತಂಡದ ನಿರ್ಧಾರವಾಗಿದೆ. ಅಲ್ಲದೆ, ಆಡಿಷನ್​ಗೆ ಆಹ್ವಾನ ನೀಡಿದ್ದೇವೆ. ನಟನೆಯ ಆಸಕ್ತಿ ಇರುವ 18ರಿಂದ 23ರ ವಯೋಮಾನದ ಹುಡುಗಿಯರು ಭಾಗವಹಿಸಬಹುದು’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ಸಹನಾ ಮೂರ್ತಿ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಸಾಹಸ ಸಂಯೋಜನೆ ರವಿವರ್ಮ ಅವರದ್ದು.

ತುಂಬ ಅದ್ದೂರಿಯಾಗಿ ಈ ಸಿನಿಮಾವನ್ನು ಮಾಡುತ್ತಿದ್ದೇವೆ. ಬೆಂಗಳೂರು, ದಾಂಡೇಲಿ, ರಾಜಸ್ಥಾನ, ಬ್ಯಾಂಕಾಕ್​ನಲ್ಲಿ ಶೂಟಿಂಗ್ ಮಾಡಲಿದ್ದೇವೆ. ಎರಡು ಹಾಡಿಗೆ ಪ್ರಭುದೇವ ನೃತ್ಯ ನಿರ್ದೇಶನ ಮಾಡಲಿದ್ದಾರೆ.

| ಸಹನಾಮೂರ್ತಿ, ನಿರ್ದೇಶಕ

Leave a Reply

Your email address will not be published. Required fields are marked *