ಟೆಸ್ಟ್​ ಸರಣಿ ಗೆಲುವು ವಿಶ್ವಕಪ್​ಗಿಂತಲೂ ಶ್ರೇಷ್ಠ ಎಂದ ಕೋಚ್​ ಶಾಸ್ತ್ರಿಗೆ ನೆಟ್ಟಿಗರ ಟ್ರೋಲ್​ ಪೆಟ್ಟು!

ಸಿಡ್ನಿ: ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾದ ಐತಿಹಾಸಿಕ ಗೆಲುವನ್ನು ಇಡೀ ಭಾರತ ಅತ್ಯಂತ ಸಂಭ್ರಮದಿಂದ ಆಚರಿಸಿದೆ. ಆದರೆ, ತಂಡದ ಕೋಚ್​ ಸಂಭ್ರಮವನ್ನು ಹೊಗಳುವ ಭರದಲ್ಲಿ ಎಡವಟ್ಟು ಮಾಡಿಕೊಂಡು ಅಭಿಮಾನಿಗಳ ಟೀಕೆಗೆ ಒಳಗಾಗಿದ್ದಾರೆ.

ಟೀಂ ಇಂಡಿಯಾದ ಕೋಚ್​​ ರವಿಶಾಸ್ತ್ರಿ ಅವರು ಒಂದಲ್ಲಾ ಒಂದು ಹೇಳಿಕೆಗಳಿಂದ ಟ್ವಿಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಭಾರತ ತಂಡ 71 ವರ್ಷಗಳ ಹೋರಾಟದ ನಂತರ ಆಸ್ಟ್ರೇಲಿಯಾ ನೆಲದಲ್ಲಿ ದಾಖಲಿಸಿರುವ ಐತಿಹಾಸಿಕ ಗೆಲುವನ್ನು ಹಿಂದಿನ ವಿಶ್ವಕಪ್​ ಪಂದ್ಯಗಳಿಗೆ ಹೋಲಿಸಿ ಪೇಚಿಗೆ ಸಿಲುಕಿದ್ದಾರೆ.

1983ರ ವಿಶ್ವಕಪ್​ ಹಾಗೂ 1985ರ ವಿಶ್ವ ಚಾಂಪಿಯನ್​ಶಿಪ್​​​​ ಗೆಲುವು ಶ್ರೇಷ್ಠ ವಾಗಿದೆ. ಆದರೆ, 2019ರ ಈ ಸರಣಿ ಗೆಲುವು ಇವೆರಡಕ್ಕಿಂತ ಶ್ರೇಷ್ಠ ಎಂದು ಶಾಸ್ತ್ರಿ ಬಣ್ಣಿಸಿದ್ದಾರೆ. ಕ್ರಿಕೆಟ್​ನ ಅತಿ ತ್ರಾಸದಾಯಕ​ ಟೆಸ್ಟ್​ ಫಾರ್ಮ್ಯಾಟ್​​​ನಲ್ಲಿ ಭಾರತ, ಆಸೀಸ್​ ವಿರುದ್ಧ ದಿಗ್ವಿಜಯ ಸಾಧಿಸಿರುವುದು ಐತಿಹಾಸಿಕವೇ ಸರಿ ಎಂದು ಶಾಸ್ತ್ರಿ ವಿಶ್ವಕಪ್​ ಗೆಲುವನ್ನು ಸರಣಿ ಗೆಲುವಿನ ಜತೆ ಹೋಲಿಕೆ ಮಾಡಿದ್ದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ರವಿಶಾಸ್ತ್ರಿಯ ಹೇಳಿಕೆಯನ್ನು ಖಂಡಿಸಿ ಕ್ರೀಡಾಭಿಮಾನಿಗಳು ಟ್ವಿಟರ್​​ನಲ್ಲಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಾಸ್ತ್ರಿಯನ್ನು ಯಾರು ಟೀಂ ಇಂಡಿಯಾದ ಕೋಚ್​​ ಆಗಿ ಆಯ್ಕೆ ಮಾಡಿದರು ಎಂದು ಗೊತ್ತಿಲ್ಲ. ಅವರಿಗೆ ವಿಶ್ವಕಪ್​ ಗೆಲುವಿನ ಮಹತ್ವ ಇನ್ನೂ ತಿಳಿದಿಲ್ಲ. ಒಂದು ವೇಳೆ 2019 ವಿಶ್ವಕಪ್​ ಗೆದ್ದರೂ ಶಾಸ್ತ್ರಿ ಮಾತ್ರ ಆಸ್ಟ್ರೇಲಿಯಾ ವಿರುದ್ಧದ ಗೆಲುವೇ ಬೆಸ್ಟ್ ಎಂದು ಹೇಳಬಹುದು. ಶಾಸ್ತ್ರಿ ಒಬ್ಬ ಕೆಟ್ಟ ವ್ಯಕ್ತಿ ಎಂದು ನೆಟ್ಟಿಗನೊಬ್ಬ ಕಿಡಿಕಾರಿದ್ದಾನೆ.

ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದು ಎರಡು ತಂಡಗಳ ನಡುವಿನ ದ್ವಿಪಕ್ಷೀಯ ಸರಣಿ. ಇದನ್ನು ವಿಶ್ವಕಪ್​​ ಜೊತೆ ಹೋಲಿಕೆ ಮಾಡೋದು ಸರಿಯಲ್ಲ. ಯಾಕಂದರೆ ವಿಶ್ವಕಪ್​​ ಪ್ರತಿ ನಾಲ್ಕು ವರ್ಷಕ್ಕೆ ಒಂದು ಬಾರಿ ಬರುತ್ತೆ. ಶಾಸ್ತ್ರಿ ಹೀಗೆ ಮಕ್ಕಳ ರೀತಿ ಕಾಮೆಂಟ್ ಮಾಡಬಾರದು ಎಂದು ಮತ್ತೊಬ್ಬ ನೆಟ್ಟಿಗ ಟೀಕಿಸಿದ್ದಾನೆ. ಹೀಗೆ ಇನ್ನು ಮುಂತಾದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಶಾಸ್ತ್ರಿ ವಿರುದ್ಧ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)