ಕಾಣೆಯಾದ ರಘು, ರವಿಶಂಕರ್, ನಾಣಿ!

ಬೆಂಗಳೂರು: ‘ರ‍್ಯಾಂಬೋ 2’ ಯಶಸ್ಸಿನ ನಂತರ ನಿರ್ದೇಶಕ ಅನಿಲ್​ಕುಮಾರ್ ‘ದಾರಿ ತಪ್ಪಿದ ಮಗ’ ಚಿತ್ರದಲ್ಲಿ ತೊಡಗಿಕೊಂಡಿದ್ದರು. ಇದೀಗ ಅವರ ಗಮನ ‘ಕಾಣೆಯಾದವರ’ ಮೇಲಿದೆ! ಅರ್ಥಾತ್, ಅವರ ಮುಂದಿನ ಸಿನಿಮಾಕ್ಕೆ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷವೆಂದರೆ, ಇಲ್ಲಿ ಹೀರೋ-ಹೀರೋಯಿನ್ ಅಂತ ಯಾರೂ ಇಲ್ಲ. ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಅಜಯ್ ರಾವ್, ಶರಣ್, ಮಾಲಾಶ್ರೀ ನಟನೆಯ ಕಮರ್ಷಿಯಲ್ ಸಿನಿಮಾಗಳಿಗೆ ಆಕ್ಷನ್-ಕಟ್ ಹೇಳಿದ್ದ ಅನಿಲ್, ಈ ಬಾರಿ ವಿಭಿನ್ನ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಶೀರ್ಷಿಕೆ ಮತ್ತು ಪಾತ್ರವರ್ಗದಿಂದ ಕುತೂಹಲ ಹುಟ್ಟಿಸಿರುವ ಈ ಸಿನಿಮಾಗೆ ಹೊಸ ನಿರ್ವಪಕ ನವೀನ್ ಬಂಡವಾಳ ಹೂಡುತ್ತಿದ್ದಾರೆ. ವಯೋವೃದ್ಧರ ಪಾತ್ರಗಳಲ್ಲಿ ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ ನಟಿಸುತ್ತಿದ್ದು, ಅವರಿಗೆ ನಾಯಕಿಯರು ಇರುವುದಿಲ್ಲವಂತೆ. ಅಲ್ಲದೆ, ಇದು ಕಮರ್ಷಿಯಲ್ ಪ್ರಕಾರದ ಸಿನಿಮಾವಲ್ಲ ಎಂದು ಹೇಳುವ ನಿರ್ದೇಶಕರು, ‘ಕಾಣೆಯಾದವರ..’ ಚಿತ್ರವನ್ನು ಹಾಫ್​ಬೀಟ್ ಪ್ರಕಾರಕ್ಕೆ ಸೇರಿಸುತ್ತಾರೆ. ಸಸ್ಪೆನ್ಸ್ ಮಾದರಿಯಲ್ಲೂ ಈ ಸಿನಿಮಾದ ಕಥೆ ಸಾಗಲಿದೆಯಂತೆ. 1950ರಿಂದ 2019ರವರೆಗೆ ನಡೆಯುವ ವಿಷಯಗಳು ಇಲ್ಲಿರಲಿದ್ದು, ಇಡೀ ಚಿತ್ರ ಹೊಸತನದೊಂದಿಗೆ ಸಾಗಲಿದೆ ಎನ್ನುವುದು ನಿರ್ದೇಶಕರ ಅಭಿಪ್ರಾಯ.

ಆ.6ರಂದು ಚಿತಿ್ರೕಕರಣ ಚಾಲನೆ ಸಿಗಲಿದೆ. ಬ್ಯಾಂಕಾಕ್​ನಲ್ಲಿ 20 ದಿನ ಚಿತ್ರೀಕರಣ ಮಾಡುವ ಪ್ಲಾ್ಯನ್ ಹಾಕಿಕೊಳ್ಳಲಾಗಿದೆ. ಚಿಕ್ಕಣ್ಣ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಅಲ್ಲದೆ, ಅವರ ಜತೆಗೆ ಇನ್ನೂ ಎರಡು ಪ್ರಮುಖ ಪಾತ್ರಗಳಿದ್ದು, ಅದನ್ನು ನಿಭಾಯಿಸುವ ಕಲಾವಿದರು ಯಾರು ಎಂಬುದು ಅಂತಿಮಗೊಂಡಿಲ್ಲ. ಶಿವಕುಮಾರ್ ಛಾಯಾಗ್ರಹಣ ಮಾಡುತ್ತಿದ್ದು, ನಾಲ್ಕು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸಾಹಸ ನಿರ್ದೇಶನವನ್ನು ಡಾ. ರವಿವರ್ಮ ಮಾಡುತ್ತಿದ್ದಾರೆ.

ಇನ್ನುಳಿದಂತೆ, ಧೀರೇನ್ ರಾಜ್​ಕುಮಾರ್ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ‘ದಾರಿ ತಪ್ಪಿದ ಮಗ’ ಚಿತ್ರದ ಬಹುತೇಕ ಕೆಲಸಗಳನ್ನು ಅನಿಲ್ ಮುಗಿಸಿದ್ದಾರೆ. ಜಯಣ್ಣ ಕಂಬೈನ್ಸ್ ಬ್ಯಾನರ್​ನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾಕ್ಕೆ ಒಂದು ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಧೀರೇನ್​ಗೆ ನಾಯಕಿಯಾಗಿ ಮಾನ್ವಿತಾ ಹರೀಶ್ ನಟಿಸಿದ್ದಾರೆ.

Leave a Reply

Your email address will not be published. Required fields are marked *