ರವಿ ಪೂಜಾರಿ ಮಲ್ಪೆ ನಿವಾಸಿ

ಮನೆ ಮಾರಾಟ

ದೆಹಲಿಯಲ್ಲಿ ಮಗಳೊಂದಿಗೆ ತಾಯಿ ವಾಸ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ

ಭೂಗತ ಪಾತಕಿ ರವಿ ಪೂಜಾರಿ ಯಾನೆ ರವಿಪ್ರಕಾಶ್ ಪೂಜಾರಿ(48) ಮೂಲತಃ ಉಡುಪಿ ಜಿಲ್ಲೆಯ ಮಲ್ಪೆ ನೆರ್ಗಿ ಸರಸ್ವತಿ ಮಂದಿರ ಬಳಿಯ ಓಂ ನಮಃ ಶಿವಾಯ ನಿಲಯ ನಿವಾಸಿ.

ಈಗ ಮನೆಯನ್ನು ಮಾರಾಟ ಮಾಡಲಾಗಿದೆ. ರವಿ ಪೂಜಾರಿ ತಂದೆ ಸೂರ‌್ಯಪೂಜಾರಿ ಐದು ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಸುಶೀಲಾ ಪೂಜಾರಿ ದೆಹಲಿಯಲ್ಲಿ ಮಗಳೊಂದಿಗೆ ವಾಸವಾಗಿದ್ದಾರೆ.

ಸೂರ‌್ಯದಂಪತಿಗೆ ರವಿ ಪೂಜಾರಿ ಸಹಿತ ಐವರು ಮಕ್ಕಳು. ಈ ಪೈಕಿ ಓರ್ವ ಮೃತಪಟ್ಟಿದ್ದು, ಇಬ್ಬರು ಹೆಣ್ಣುಮಕ್ಕಳು ದೆಹಲಿಯಲ್ಲಿದ್ದಾರೆ. ರವಿ ಪೂಜಾರಿ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಪದೇ ಪದೇ ವಿಚಾರಣೆಗೆ ಒಳಪಡಬೇಕಾಗಿ ಬಂದಿದ್ದರಿಂದ 12 ವರ್ಷಗಳ ಹಿಂದೆ ಸುಶೀಲಾ ಪೂಜಾರಿ ಮಲ್ಪೆ ಮನೆ ಮಾರಾಟ ಮಾಡಿ ದೆಹಲಿಗೆ ತೆರಳಿದ್ದರು.

ಶಾಲಾ ಶಿಕ್ಷಣವನ್ನು ಅರ್ಧದಲ್ಲಿ ಮೊಕಟುಗೊಳಿಸಿ ಮುಂಬೈಗೆ ತೆರಳಿ ಅಪರಾಧ ಚಟುವಟಿಕೆ ಆರಂಭಿಸಿದ್ದ. ಛೋಟಾ ರಾಜನ್ ಗ್ಯಾಂಗ್ ಸೇರಿದ ರವಿ ಪೂಜಾರಿ ಕೆಲವೇ ಸಮಯದಲ್ಲಿ ರಾಜನ್ ಪ್ರೀತಿಪಾತ್ರನಾಗಿದ್ದ. 1990ರಲ್ಲಿ ದುಬೈಗೆ ಸ್ಥಳಾಂತರಗೊಂಡು ಅಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಕೆಯೊಡ್ಡಿ ಹಫ್ತಾ ವಸೂಲಿಗೆ ತೊಡಗಿದ್ದ. ಬಳಿಕ ದಾವೂದ್ ಇಬ್ರಾಹಿಂ ಜತೆ ಸೇರಿ 2000ರಲ್ಲಿ ಬ್ಯಾಂಕಾಂಕ್‌ನಲ್ಲಿ ಬನ್ನಂಜೆ ರಾಜಾನ ಕೊಲೆಗೆ ಯತ್ನಿಸಿದ್ದ. 2009ರಿಂದ ಬಾಲಿವುಡ್ ನಟರಾದ ಸಲ್ಮಾನ್‌ಖಾನ್, ಅಕ್ಷಯ ಕುಮಾರ್, ರಾಕೇಶ್ ರೋಶನ್, ಕರಣ್ ಜೋಹರ್, ಶಾರುಖ್‌ಖಾನ್ ಮೊದಲಾದವರಿಗೆ ಜೀವ ಬೆದರಿಕೆ ಒಡ್ಡಿದ್ದ ಆರೋಪವಿದೆ.

ಜಿಲ್ಲೆಯಲ್ಲಿ ರವಿ ಪೂಜಾರಿ ಮೇಲೆ ಹಫ್ತಾ ವಸೂಲಿ, ಬೆದರಿಕೆ ಸಂಬಂಧಿಸಿ 10 ಕೇಸುಗಳು ದಾಖಲಾಗಿವೆ. ಉದ್ಯಮಿಯೊಬ್ಬರಿಗೆ ಹಫ್ತಾ ವಸೂಲಿ ಸಂಬಂಧಿಸಿ 2006ರಲ್ಲಿ ಮೊದಲ ಪ್ರಕರಣ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾರ್ಕಳ, ಉಡುಪಿ, ಬ್ರಹ್ಮಾವರ ಪೊಲೀಸ್ ಠಾಣೆಗಳಲ್ಲಿ 10 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ನಗರದಲ್ಲೇ 30ಕ್ಕೂ ಅಧಿಕ ಪ್ರಕರಣ: ರವಿ ಪೂಜಾರಿ ಪಶ್ಚಿಮ ಆಫಿಕಾದ ಸೆನ್‌ಗಲ್‌ನಲ್ಲಿ ಇಂಟರ್‌ಪೋಲ್ ಪೊಲೀಸರು ಬಂಧಿಸಿರುವ ವಿಚಾರ ಮಾಧ್ಯಮದ ಮೂಲಕ ತಿಳಿದು ಬಂದಿದ್ದು, ಆತನ ವಿರುದ್ಧ ಮಂಗಳೂರು ನಗರದಲ್ಲೇ 30ಕ್ಕೂ ಅಧಿಕ ಪ್ರಕರಣ ದಾಖಲಾಗಿವೆ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು. ಪತ್ತೆಗೆ ಮಂಗಳೂರು, ಉಡುಪಿ ಪೊಲೀಸರು ಹಲವು ವರ್ಷಗಳಿಂದ ಪ್ರಯತ್ನ ಮುಂದುವರಿಸಿದ್ದರು ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ದೇಶಾದ್ಯಂತ ಓಡಾಡಿಕೊಂಡಿದ್ದ ರವಿ ಪೂಜಾರಿ, ತನ್ನ ಸಹಚರರೊಂದಿಗೆ ಖ್ಯಾತ ಉದ್ಯಮಿಗಳು, ಚಿತ್ರನಟರಿಗೆ ಬೆದರಿಕೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ. ಇತ್ತೀಚೆಗಷ್ಟೇ ಮಾಜಿ ಶಾಸಕ ಅನಿಲ್ ಲಾಡ್ ಸೇರಿದಂತೆ ಹಲವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಆ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದ ರಾಜ್ಯದ ಪೊಲೀಸರು, ಆತನಿಗಾಗಿ ಹುಡುಕಾಟ ಚುರುಕುಗೊಳಿಸಿದ್ದರು. ಆತನ ಬಂಧನವನ್ನು ಖಚಿತ ಮಾಡಿಕೊಳ್ಳಲು ರಾಜ್ಯದ ಪೊಲೀಸರು ಪ್ರಯತ್ನಿಸಿದ್ದು, ಇನ್ನೂ ಅಧಿಕೃತ ಖಚಿತ ಮಾಹಿತಿ ಲಭಿಸಿಲ್ಲ.

ಉನ್ನತ ಹುದ್ದೆಯಲ್ಲಿದ್ದ ತಂದೆ: ರವಿ ಪೂಜಾರಿ ತಂದೆ ಸೂರ‌್ಯ ಡಿ ಪೂಜಾರಿ ಮುಂಬೈಯಲ್ಲಿ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಸೂರ‌್ಯ ಪೂಜಾರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು. ರವಿ ಪೂಜಾರಿ ಬಾಲ್ಯವನ್ನು ಮಲ್ಪೆಯಲ್ಲೇ ಕಳೆದಿದ್ದ. ಎಸ್ಸೆಸ್ಸೆಲ್ಸಿ ಆಂಗ್ಲಮಾಧ್ಯಮದಲ್ಲಿ ತೇರ್ಗಡೆಯಾಗಿದ್ದ. ಬಾಲ್ಯದಲ್ಲಿ ಆತ ಒಳ್ಳೆಯ ನಡತೆ ಹೊಂದಿದ್ದ. ಮುಂಬೈಯಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಜೈಲು ಸೇರಿದ ಬಳಿಕ ಆತನ ಜೀವನಮಾರ್ಗ ಬದಲಾಯಿತು. ನಂತರ ಆತ ಮಲ್ಪೆ ನಂಟನ್ನು ತೊರೆದಿದ್ದ. ಕುಟುಂಬದ ಜತೆ ಉತ್ತಮ ಬಾಂಧವ್ಯ ಹೊಂದಿದ್ದ. ಬಡವರಿಗೆ ಎಂದಿಗೂ ಆತ ತೊಂದರೆ ಕೊಟ್ಟಿರಲಿಲ್ಲ.

4 ರಾಜ್ಯಕ್ಕೆ ಉಪಟಳ: ಭೂಗತ ಪಾತಕಿ ರವಿ ಪೂಜಾರಿ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗುಜರಾತ್‌ಗಳಲ್ಲಿ 2001ರಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ವೈದ್ಯರು, ರಿಯಲ್ ಎಸ್ಟೇಟ್, ಆಭರಣ ಮಳಿಗೆ ಮಾಲೀಕರು, ಬಾಲಿವುಡ್, ಸ್ಯಾಂಡಲ್‌ವುಡ್ ಚಿತ್ರ ನಟರು, ರಾಜಕೀಯ ಮುಖಂಡರು, ಗಣಿ ಉದ್ಯಮಿಗಳು ಹಾಗು ಖ್ಯಾತ ವ್ಯಾಪಾರಿಗಳನ್ನು ಗುರುತಿಸಿ ಅವರ ಮೊಬೈಲ್ ನಂಬರ್ ಸಂಗ್ರಹಿಸಿ ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುತ್ತಿದ್ದ. ಜೀವ ಭಯದಿಂದ ರವಿ ಪೂಜಾರಿ ಹೇಳಿದ ಜಾಗಕ್ಕೆ ಕೇಳಿದಷ್ಟು ಹಣವನ್ನು ತಲುಪಿಸುತ್ತಿದ್ದರು. ಬೆಂಗಳೂರು, ಮಂಗಳೂರು, ಉಡುಪಿ ಮುಗ್ಧ ಜನರನ್ನು ಕೊಲೆ ಮಾಡಿರುವುದು ಹಲವು ಪ್ರಕರಣಗಳು ದಾಖಲಾಗಿದ್ದವು.

2009ರಲ್ಲಿ ಮಂಗಳೂರಿನಲ್ಲಿ ನಡೆದ ನೌಶಾದ್ ಹತ್ಯೆ ಪ್ರಕರಣದಲ್ಲಿ ರವಿ ಪ್ರಮುಖ ಆರೋಪಿ. ಕೆಲ ಪ್ರಕರಣಗಳು ತನಿಖೆಯಲ್ಲಿದ್ದು, ಮತ್ತೆ ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಆತನ ವಿರುದ್ಧ 2012ರಲ್ಲಿ ರೆಡ್‌ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಈ ನೋಟಿಸ್ ಐದು ವರ್ಷಗಳಿಗೊಮ್ಮೆ ನವೀಕರಣಗೊಳ್ಳುತ್ತಿತ್ತು. 2017ರಲ್ಲಿ ಮತ್ತೆ ನವೀಕರಣಗೊಂಡಿತ್ತು.
ಟಿ.ಆರ್.ಸುರೇಶ್, ಪೊಲೀಸ್ ಕಮಿಷನರ್