More

    ಸೋತ ಬೇಸಾಯಗಾರರಿಗೆ ರವಿ ಕೃಷಿ ಮಾದರಿ!


    ಸಮಗ್ರ ಕೃಷಿ, ಬಹುಬೆಳೆ ಮಾಡಿ ಮಾಸಿಕ 3 ಲಕ್ಷ ರೂ. ಗಳಿಕೆ | ರೈತನಿಗೆ ಒಲಿದಿದೆ ರಾಜ್ಯ ಮಟ್ಟದ “ಕೃಷಿ ಪಂಡಿತ’ ಪ್ರಥಮ ಪ್ರಶಸ್ತಿ

    ಕೋಲಾರ: ವ್ಯವಸಾಯ ಮಾಡುವುದು ಬದುಕುವುದಕ್ಕಲ್ಲ, ಸಾಯುವುದಕ್ಕೆ…ಎನ್ನುವವರಿಗೇನೂ ಕಡಿಮೆಯಿಲ್ಲ. ಆದರೆ ಖುಷಿಯಿಂದ ಕೃಷಿ ಮಾಡಿ ಬದುಕು ಕಟ್ಟಿಕೊಂಡವರೂ ಕಡಿಮೆಯೇನಿಲ್ಲ. ಇದಕ್ಕೆ ಉತ್ತಮ ಉದಾಹರಣೆ 2022-& 2023ನೇ ಸಾಲಿನ ರಾಜ್ಯ ಮಟ್ಟದ “ಕೃಷಿ ಪಂಡಿತ’ ಪ್ರಶಸ್ತಿಗೆ ಆಯ್ಕೆಯಾಗಿರುವ ಕೋಲಾರ ತಾಲೂಕಿನ ಮದನಹಳ್ಳಿಯ ಎಂ.ಎನ್​.ರವಿಶಂಕರ್​.
    ರವಿಶಂಕರ್​ ತಂದೆ ನಾಗರಾಜರೆಡ್ಡಿ ಸಾಧಾರಣ ಕೃಷಿಕ. ಆದರೆ ದ್ವೀತಿಯ ಪಿಯುಸಿಗೆ ಶಿಕ್ಷಣ ಮೊಟಕುಗೊಳಿಸಿದ ರವಿಶಂಕರ್​ ಕೃಷಿಯಲ್ಲಿ ಸಾಧನೆ ಮಾಡಲು ನಿಶ್ಚಯಿಸಿ ಕೃಷಿ, ತೋಟಗಾರಿಕೆ ಇಲಾಖೆಗಳ ತರಬೇತಿ, ಅನುಭವಿ ರೈತರ ಸಲಹೆ ಪಡೆದು ಪಿತ್ರಾರ್ಜಿತ 16 ಎಕರೆ ಬರಡು ಭೂಮಿಯಲ್ಲಿ ಬಂಗಾರದಂಥ ಬೆಳೆ ತೆಗೆಯಬೇಕೆಂದು ಹೊರಡುತ್ತಾರೆ. ಇದಕ್ಕೆ ಪದವಿ ವ್ಯಾಸಂಗ ಮಾಡಿದ್ದ ಆತನ ಸಹೋದರ ವೆಂಕಟಸ್ವಾಮಿರೆಡ್ಡಿ ಬೆನ್ನಿಗೆ ನಿಲ್ಲುತ್ತಾರೆ. ತಾಯಿ ಜತೆ ಈ ಇಬ್ಬರೂ ಸಹೋದರರು, ಇವರ ಪತ್ನಿ, ಮಕ್ಕಳು ಒಟ್ಟಿಗೆ ವಾಸವಿದ್ದು ಎಲ್ಲರೂ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಪಾವಧಿ ಮತ್ತು ದೀರ್ಘಾವಧಿಯ ಕೃಷಿ, ತೋಟಗಾರಿಕೆ ಬೆಳೆಗಳ ಜತೆಗೆ 2 ಮಿಶ್ರತಳಿ ಹಸು, 2 ಮಲೆನಾಡು ಗಿಡ್ಡ ಹಸು, ಸ್ಟಾಲ್​ ಫೀಡಿಂಗ್​ನಲ್ಲಿ 30 ಕುರಿ ಸಾಕಾಣಿಕೆ, ಕೃಷಿ ಹೊಂಡದಲ್ಲಿ ಮೀನು ಸಾಕಣೆ, ರೇಷ್ಮೆ, ನಾಟಿಕೋಳಿ ಸಾಕಾಣಿಕೆ… ಹೀಗೆ ಒಂದೇ ಎರಡೇ, ಮಕ್ಕಳು ಸೇರಿದಂತೆ ಎಲ್ಲರೂ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿಸಿಕೊಂಡು ತಿಂಗಳಿಗೆ 2ರಿಂದ 3 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಇನ್ನು ಇವರಿಗೆ ವಾರ್ಷಿಕ 10&15 ಲೋಡ್​ ಕೊಟ್ಟಿಗೆ ಗೊಬ್ಬರ ಸಿಗುತ್ತದೆ. ಜತೆಗೆ ಇತರ ರೈತರಿಂದ 1 ಟ್ರಾ$್ಯಕ್ಟರ್​ ಲೋಡ್​ಗೆ 5 ಸಾವಿರ ರೂ.ನಂತೆ 70 ಲೋಡ್​ ಖರೀದಿಸಿ ಅದಕ್ಕೆ ಬೆಲ್ಲದ ನೀರಿನ ಜತೆ ವೇಸ್ಟ್​ ಡೀಕಂಪೋಸರ್​ ಬಳಸಿ ತಯಾರಿಸಿದ ದ್ರಾವಣ ಸಿಂಪಡಣೆ ಮಾಡಿ ನಂತರ ಭೂಮಿಗೆ ಸೇರಿಸುತ್ತಾರೆ. ಇದಿಷ್ಟೇ ಅಲ್ಲದೆ ಸನ್​ಹ್ಯಾಂಪ್​, ಡಯಾಂಚ, ಬ್ರುಕೋಲಿ ಬೆಳೆದು ಹಸಿರೆಲೆ ಗೊಬ್ಬರವಾಗಿ ಬಳಸುತ್ತಾರೆ.

    ಯಾಂತ್ರಿಕ ಕೃಷಿಗೆ ಒತ್ತು: 2013ರಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ನೀರು, ಗೊಬ್ಬರ ಉಳಿತಾಯ ಹಾಗೂ ಕಳೆ ನಿಯಂತ್ರಣಕ್ಕೆ ನೆರವಾಗುವ ಮಲ್ಚಿಂಗ್​ ಪೇಪರ್​ ಬಳಸಿ ಟೊಮ್ಯಾಟೊ ಬೆಳೆದಿದ್ದು ಇವರ ವಿಶೇಷ. ಉಳುಮೆಗೆ ಟ್ರಾ$್ಯಕ್ಟರ್​, ಪವರ್​ವೀಡರ್​, ಟೊಮ್ಯಾಟೊ ಗ್ರೇಡಿಂಗ್​ಗೆ ಯಂತ್ರ, ಕೀಟಗಳ ಹತೋಟಿಗೆ ಸೋಲಾರ್​ ಟ್ರಾ$್ಯಪಿಂಗ್​ ಯಂತ್ರ ಬಳಕೆ ಸೇರಿದಂತೆ ಯಾಂತ್ರಿಕ ಕೃಷಿಗೆ ಆದ್ಯತೆ ನೀಡಿದ್ದಾರೆ.

    16 ಎಕರೆ ಮಾವು ಬೆಳೆ
    16 ಎಕರೆಯಲ್ಲಿ ಬೆಳೆದಿರುವ ಮಾವು ಮಾರಾಟದಿಂದ ವಾರ್ಷಿಕ 8 ಲಕ್ಷ ರೂ. ಆದಾಯ ಬರುತ್ತಿದೆ. ಮಾವಿನ ಮರಗಳ ನಡುವೆ ಮಿಶ್ರಬೆಳೆಗಳಾಗಿ ಟೊಮ್ಯಾಟೊ, ಕೋಸು, ಹೂಕೋಸು, ಚೆಂಡು, ಸೇವಂತಿಗೆ ಹೂವು, ನೆಲಗಡಲೆ, ರಾಗಿ ಸೇರಿ ನಾನಾ ರೀತಿಯ ಬೆಳೆಗಳನ್ನು ಮಾಡುವ ಮೂಲಕ ಬಹುಬೆಳೆ ಪದ್ಧತಿ ಅನುಸರಿಸುತ್ತಿದ್ದಾರೆ. ಹೀಗಾಗಿ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಕೈಹಿಡಿಯುತ್ತಿದೆ. ಬೆಳೆ ಬದಲಾವಣೆ ಮತ್ತು ಅದಕ್ಕೆ ಕೊಡುವ ಕೊಟ್ಟಿಗೆ ಗೊಬ್ಬರ ಮತ್ತು ನೀರು ಮಾವಿನ ಮಾವು ಇಳುವರಿ ಮತ್ತು ಗುಣಮಟ್ಟ ಹೆಚ್ಚಳಕ್ಕೆ ಕಾರಣವಾಗಿದೆ.

    1 ಎಕರೆ ಪಾಲಿಹೌಸ್​: ಕಳೆದ ವರ್ಷ 1 ಎಕರೆಯಲ್ಲಿ ಪಾಲಿಹೌಸ್​ ನಿರ್ಮಿಸಿದ್ದು, ಪ್ರಸ್ತುತ ಅದರಲ್ಲಿ ಕಲರ್​ ಕ್ಯಾಪ್ಸಿಕಂ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ 1 ಕೆಜಿ ಉತ್ಪನ್ನಕ್ಕೆ 150 ರೂ. ಸಿಗುತ್ತಿದ್ದು, 10 ರಿಂದ 15 ಲಕ್ಷ ರೂ. ಸಿಗಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.

    ಜೇನು ಸಾಕಾಣಿಕೆ: ಯಶಸ್ವಿಯಾಗಿ ಜೇನು ಕೃಷಿ ಮಾಡುತ್ತಿರುವ ಇವರು ನೆಟ್​ ಹೌಸ್​ಗಳಲ್ಲಿ ಬೆಳೆಯುವ ಸೌತೆಕಾಯಿ ಹಾಗೂ ದಾಳಿಂಬೆ, ಸೀಬೆ ಮತ್ತಿತರ ಬೆಳೆಗಳಿಗೆ ಪರಾಗಸ್ಪರ್ಶ ಮಾಡಲು ರೈತರಿಗೆ ಜೇನುಪೆಟ್ಟಿಗೆಗಳನ್ನು ಪ್ರತಿ ಬಾಕ್ಸ್​ಗೆ 500 ರೂ. ಬಾಡಿಗೆ ಪಡೆದುಕೊಡುತ್ತಾರೆ. ಜೇನು ಕುಟುಂಬ ಮತ್ತು ಪೆಟ್ಟಿಗೆಯನ್ನು 4 ಸಾವಿರ ರೂ.ನಂತೆ ಆಸಕ್ತರಿಗೆ ಮಾರಾಟವನ್ನೂ ಮಾಡುತ್ತಾರೆ.

    ಹೈನುಗಾರಿಕೆಯಲ್ಲೂ ಹೆಚ್ಚಿನ ಲಾಭ: ಹಸುಗಳಿಗೆ ದುಬಾರಿಯಾಗಿರುವ ಹಿಂಡಿ, ಬೂಸ ಕಡಿಮೆ ಕೊಟ್ಟು ಪೌಷ್ಟಿಕಾಂಶ ಹೊಂದಿರುವ ತಮ್ಮದೇ ತೊಟ್ಟಿಯಲ್ಲಿ ಬೆಳೆಸಿರುವ ಅಜೋಲಾವನ್ನು ಮೇವು ರೂಪದಲ್ಲಿ ಒದಗಿಸುತ್ತಾರೆ. ಒಣ ಮೇವು ಸಿಕ್ಕಾಗ ಸೈಲೇಜ್​ ಮಾಡಿಟ್ಟುಕೊಂಡು ವರ್ಷವಿಡೀ ಒದಗಿಸುತ್ತಾರೆ. ಇದರಿಂದ ಹಾಲು ಉತ್ಪಾದನೆಗೆ ಖರ್ಚು ಕಡಿಮೆಯಾಗಿ ಲಾಭ ಹೆಚ್ಚಿಗೆ ಸಿಗುತ್ತಿದೆ. ವಾರ್ಷಿಕ ಹಾಲು ಮಾರಾಟದಿಂದ 3 ಲಕ್ಷ ರೂ. ಗಳಿಸುತ್ತಿರುವುದು ವಿಶೇಷವಾಗಿದೆ.

    ಹೊಂಡದಿಂದ ಬದುಕು ಸಮೃದ್ಧಿ: ಈ ಹಿಂದೆ ಕೊಳವೆ ಬಾವಿಗಳಲ್ಲಿ ಇವರ ಭೂಮಿಗೆ ಸಾಕಾಗುವಷ್ಟು ನೀರಿರಲಿಲ್ಲ. ಆಗ ಬೆಟ್ಟದಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ನೀರನ್ನು ತಡೆದು ಕೃಷಿಹೊಂಡ ನಿರ್ಮಿಸಿ 8 ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆರಂಭಿಸಿ ಲಕ್ಷಾಂತರ ರೂಪಾಯಿ ಸಂಪಾದಿಸಿದರು. ಇದೇ ಜಮೀನಿನಲ್ಲಿ ಅಡಕೆ ಬೆಳೆ ಮಾಡಲು ಮುಂದಾಗಿದ್ದಾರೆ.

    ಪ್ರಶಸ್ತಿಗಳು: ರವಿಶಂಕರ್​ಗೆ 2014ರಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, 2015ರಲ್ಲಿ ದೆಹಲಿಯ ಐಸಿಎಆರ್​ನ ಇನ್ನೋವೇಟಿವ್​ ಫಾರ್ಮರ್​ ಅವಾರ್ಡ್​, 2018ರಲ್ಲಿ ಕೆನರಾ ಬ್ಯಾಂಕ್​ನ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, ಸಿ.ಬೈರೇಗೌಡ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಥಮ ಪ್ರಶಸ್ತಿ ಒಲಿದು ಬಂದಿದೆ.

    ನಮ್ಮ ರೈತರು ಒಂದೇ ಬೆಳೆ ಮಾಡುವುದನ್ನು ಮೊದಲು ಬಿಡಬೇಕು. ಇರುವ ಜಮೀನಿನಲ್ಲೆ ತಾಕುಗಳನ್ನು ಮಾಡಿಕೊಂಡು ನಾಲ್ಕೆದು ಬೆಳೆ ಮಾಡಬೇಕು. ರಸಗೊಬ್ಬರ ಮತ್ತು ಕೀಟನಾಷಕ ಕಡಿಮೆ ಮಾಡಿ ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕಿದೆ. | ಎಂ.ಎನ್​.ರವಿಶಂಕರ್

    ಮೊ.ಸಂ. 9900403354
    ಸಂಪರ್ಕಿಸುವ ಸಮಯ
    ಬೆಳಗ್ಗೆ 8 ರಿಂದ ರಾತ್ರಿ 8

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts