More

    ನಾವು ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ…

    ವಿಶಿಷ್ಟ ಬರವಣಿಗೆ ಶೈಲಿ ಹಾಗೂ ವಿಷಯ ವೈವಿಧ್ಯದ ಕಾರಣದಿಂದಾಗಿ ಅಪಾರ ಓದುಗರನ್ನು ಸಂಪಾದಿಸಿಕೊಂಡಿದ್ದರು ರವಿ ಬೆಳಗೆರೆ. ಸಣ್ಣ ವಿಷಯ ಎಂಬಂತೆ ಕಾಣುವುದನ್ನೂ ವಿಭಿನ್ನ, ಆತ್ಮೀಯ ಶೈಲಿಯಿಂದ ಮನಮುಟ್ಟುವಂತೆ ಬರೆಯುವ ಕಲೆ ಅವರಿಗೆ ಸಿದ್ಧಿಸಿತ್ತು. ಅನಿರೀಕ್ಷಿತ ಅಗಲಿಕೆಯಿಂದಾಗಿ ಅವರ ಅಕ್ಷರಯಾನ ಮೌನತಾಳಿದೆ.

    ನಾವು ಕೊಡಬಹುದಾದ ಅತ್ಯುತ್ತಮ ಉಡುಗೊರೆಯೆಂದರೆ...ನಾನು ಕೊಡಲ್ಲ.
    ನಿಮಗದು ತಮಾಷೆ ಅನ್ನಿಸಬಹುದು. ನಾನು ಗಿಫ್ಟು ಕೊಡುವ ಪರಿಪಾಠ ಇಟ್ಟುಕೊಂಡಿಲ್ಲ. ಸಾಮಾನ್ಯವಾಗಿ ಮದುವೆಯಂತಹ ಸಮಾರಂಭಗಳಿಗೆ ಹೋಗುವುದೇ ಇಲ್ಲವಾದ್ದರಿಂದ ಗಿಫ್ಟು ಖರೀದಿಸುವುದಿಲ್ಲ. ನನಗೆ ತುಂಬ ಇಷ್ಟವಾದ ಪುಸ್ತಕ ಕಣ್ಣಿಗೆ ಬಿದ್ದರೆ, ಇಷ್ಟವಾದ ವಸ್ತು ಸಿಕ್ಕರೆ, ತುಂಬ ಇಷ್ಟವಾದ ವ್ಯಕ್ತಿಗಳಿಗೆ ಅದನ್ನು ಒಯ್ದು ಕೊಡುತ್ತೇನೆ. ಅದಕ್ಕೆ ಸಮಾರಂಭದ ನೆಪ ಬೇಕು ಅಂತ ಕಾಯುವುದಿಲ್ಲ. ತೀರ ಮೊನ್ನೆ ನನ್ನ ಮಗನ ಬರ್ತ್​ಡೇ ದಿನದಂದೇ, ಅವನಿಗೆ ಏನು ಗಿಫ್ಟು ಕೊಡಬೇಕು ಎಂಬ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರಲಾಗದೆ ಫಜೀತಿಯಾಗಿತ್ತು. ಏಕೆಂದರೆ, ಅವನ ವಯಸ್ಸಿಗೆ, ಯೋಗ್ಯತೆಗೆ ಬೇಕಾದಂಥ ಎಲ್ಲವೂ ಅವನಲ್ಲಿವೆ. ನನ್ನ ಮಗ ಎಂಬ ಕಾರಣಕ್ಕೆ, ಅವನಿಗೆ ಕಾರು ಕೊಡಿಸಲು ನಾನು ಸಿದ್ಧನಿಲ್ಲ. ಕಾರು ಕೊಂಡುಕೊಳ್ಳುವಷ್ಟು ಯೋಗ್ಯತೆ ಅವನಿಗಿದೆ. ನಾನು ಯಾಕೆ ಗಿಫ್ಟು ಕೊಡಬೇಕು?

    ಯಾರಾದರೂ ಯಾಕೆ, ಯಾರಿಗಾದರೂ, ಏನನ್ನಾದರೂ ಉಡುಗೊರೆಯಾಗಿ ಕೊಡಬೇಕು? ನನ್ನ ಮೊದಲ ಪ್ರಶ್ನೆ ಅದು. ‘ನೆನಪಿಗಾಗಿ ಕೊಡಬೇಕು’ ಅಂತೀರೇನೋ? ಉಡುಗೊರೆ ಮಾತ್ರ ನಿಮ್ಮನ್ನು ಅವರಿಗೆ ನೆನಪು ಮಾಡಿಕೊಡುತ್ತದೆ ಅನ್ನೋದಾದರೆ ಅಂಥವರಿಗೆ ನೀವು ಯಾಕೆ ನೆನಪಿರಬೇಕು?

    ಒಂದು ಪುಟ್ಟ ಸಂಸಾರ ಪೈಸೆಗೆ ಪೈಸೆ ಲೆಕ್ಕ ಹಾಕಿ, ದುಡ್ಡು ಉಳಿಸಿ, planned ಆಗಿ ಬದುಕುತ್ತಿರುತ್ತದೆ. ಇದ್ದಕ್ಕಿದ್ದಂತೆ ನೆಂಟರೊಬ್ಬರ ಮಗನ ಮದುವೆ ಫಿಕ್ಸ್ ಆಗುತ್ತದೆ. ಮದುವೆಗೆ ಹೋಗಲೇಬೇಕು. ಹೋಗಿ ಬರುವ ಖರ್ಚು, ಹೋದ ಮೇಲೆ, ಬರಿಗೈಲಿ ಹೋಗೋದಾ? ಏನಾದರೂ ‘ಓದಿಸ’ಬೇಕು ಹುಡುಗನಿಗೆ. ಎಷ್ಟು ರೂಪಾಯಿಯ ಗಿಫ್ಟು ಒಯ್ಯಬೇಕು ಎಂಬುದನ್ನು, ಅವರೊಂದಿಗಿರುವ ನಮ್ಮ ಸಂಬಂಧ ತೀರ್ವನಿಸುವುದಿಲ್ಲ. ಅವರಿಗೆ ಸಮಾಜದಲ್ಲಿರುವ ಸ್ಥಾನಮಾನ ಅದನ್ನು ತೀರ್ವನಿಸುತ್ತದೆ. ಬ್ಯಾಂಕಿನಲ್ಲಿ ಕೆಲಸ ಮಾಡೋ ಮದುವೆ ಗಂಡಿಗೆ ಪಟ್ಟಾಪಟ್ಟಿ ಚೆಡ್ಡಿ ಕೊಡಲಿಕ್ಕಾಗುತ್ತದಾ? ಕನಿಷ್ಠಪಕ್ಷ ಬೆಳ್ಳಿ ಬಟ್ಟಲು ಕೊಡಬೇಕು. ಅಲ್ಲಿಗೆ ಮುಗಿಯಿತಲ್ಲ ಆ ತಿಂಗಳ ಉಳಿತಾಯದ ಮಾತು? ಹೋಗಿ ಬರುವ ಖರ್ಚು, ‘ಓದಿಸಿ’ದ ಉಡುಗೊರೆ ಖರ್ಚು, ಎರಡು ದಿನದ ರಜಾ ಖರ್ಚು-ಎಲ್ಲ ಸೇರಿ ಪುಟ್ಟ ಕುಟುಂಬದ ಬೊಕ್ಕಸಕ್ಕೆ ಒಂದು ದೊಡ್ಡ ಗುನ್ನ ಹೊಡೆದಿರುತ್ತದೆ. ಇಂಥ

    ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ-ಅಂತ ನಾಲ್ಕು ಸಮಾರಂಭಗಳಾಗಿಬಿಟ್ಟರೆ ಒಂದು ವರ್ಷದಲ್ಲಿ ಚಿಕ್ಕ ಕುಟುಂಬ ಅದೆಷ್ಟು ಆರ್ಥಿಕವಾದ ಹೊಡೆತಕ್ಕೀಡಾಗುತ್ತದೋ ನೀವೇ ಯೋಚಿಸಿ.

    ಈ ಪೈಕಿ ಗೃಹಪ್ರವೇಶದ ಗಿಫ್ಟುಗಳಿವೆಯಲ್ಲ? ಅವಕ್ಕಿಂತ ನಗೆಪಾಟಲಿನವು, ವ್ಯರ್ಥವಾದಂಥವು ಬೇರೆ ಯಾವ ಸಮಾರಂಭದಲ್ಲೂ ಸಿಗಲಾರವು. ಅತಿಥಿಗಳೆಲ್ಲ ಹೋದ ಮೇಲೆ ಗಿಫ್ಟ್ ಪ್ಯಾಕೆಟ್ ಬಿಚ್ಚಿ ನೋಡಿದರೆ-ಹತ್ತು ವಾಲ್​ಕ್ಲಾಕು, ಇಪ್ಪತ್ತು ಗಣೇಶ, ಹದಿಮೂರು sweet home ಫಲಕಗಳು! ಕಟ್ಟಿರೋ ತಟುಗು ಮನೆಯಲ್ಲಿ ಅವನು ಅವುಗಳನ್ನು ಎಲ್ಲಿ ತೂಗುಹಾಕಬೇಕು? ಯಾವ ಗಡಿಯಾರ ಯಾರು ಕೊಟ್ಟರು ಅಂತ ನೆನಪಿಟ್ಟುಕೊಳ್ಳುವುದು ಹೇಗೆ? ಅದರ ಮೇಲಿನ ಗಿಫ್ಟ್ ರ್ಯಾಪರ್ ಹರಿದು ಬಿಸಾಡಿಯಾಗಿದೆ. ಇದು ಗಿಫ್ಟು ಪಡೆದವನ ಸಮಸ್ಯೆಯಾದರೆ, ಕೊಟ್ಟವನದು ಇನ್ನೊಂದು ಥರದ ಸಮಸ್ಯೆ. ಅಷ್ಟೆಲ್ಲ ಕಷ್ಟಪಟ್ಟು, ಖರ್ಚಿಟ್ಟುಕೊಂಡು ಗೃಹಪ್ರವೇಶಕ್ಕೆ ಹೋಗಿ, ಗಿಫ್ಟು ಕೊಟ್ಟು ಬಂದರೆ-ಅವನು ಅದನ್ನು ಉಪಯೋಗಿಸುತ್ತಾನಾ? ಸಾವಿರಾರು ಜನ ಬಂದಿದ್ದರು. ನಾನೇ ಕೊಟ್ಟದ್ದು ಅಂತ ಅವನಿಗೆ ನೆನಪಿರುತ್ತದಾ? ಈ ಸಲ ಮನೆಗೆ ಹೋದಾಗ ನಾನು ಕೊಟ್ಟ ಗಣೇಶ ಎಲ್ಲಿಟ್ಟಿದ್ದಾನೋ ನೋಡಬೇಕು ಅಂದುಕೊಳ್ಳುತ್ತಾನೆ. ಹೋಗಿ ನೋಡಿದರೆ, show case ನಲ್ಲಿ ಅಂಥವೇ ಮೂರು ಗಣೇಶ! ಅದರಲ್ಲಿ ನಾನು ಕೊಟ್ಟದ್ದು ಯಾವುದೋ? ‘ಗೃಹಪ್ರವೇಶಕ್ಕೆ ನೀನು ಬಂದಿದ್ಯೇನೋ? ಆ ಗಲಾಟೇಲಿ ಗೊತ್ತೇ ಆಗಲಿಲ್ಲ. ಊಟ ಮಾಡಿದ್ಯೋ, ಇಲ್ವೋ… ಅಂತೂ ಫಂಕ್ಷನ್ ಚೆನ್ನಾಗಿ ಆಯ್ತಪ್ಪ…’ ಅಂದುಬಿಡುತ್ತಾನೆ. ಗಣೇಶ ಸೊಂಡಿಲಿನಡಿಯಲ್ಲೇ ಖಿಸಕ್!

    ಈ ಸಂಭ್ರಮಕ್ಕೆ ಯಾಕೆ ಗಿಫ್ಟು ಒಯ್ಯುತ್ತೀರಿ? ಕೆಲವರಂತೂ ಏನು ಕೊಡಬೇಕು ಅಂತ ತೋಚದೆ ಬಿಳೀ ಕವರಿನಲ್ಲಿ ಐವತ್ತು ರೂಪಾಯಿ ಇಟ್ಟು ಕೊಟ್ಟು ಬಂದುಬಿಡುತ್ತಾರೆ. ಅದಕ್ಕೇನಾದರೂ ಅರ್ಥವಿದೆಯಾ? ಕೊಡಲೇಬೇಕು ಅನ್ನಿಸಿದರೆ, ಸಮಾರಂಭದ ಹಿಂದಿನ ದಿನ ಒಬ್ಬರೇ ಹೋಗಿ ‘ನಿನ್ನ ಬದುಕಿಗಿದು ನೆರವಾಗಲಿ’ ಅಂತ ಕೊಡಬೇಕೆನ್ನಿಸಿದ್ದನ್ನು ಕೊಟ್ಟು ಬಂದುಬಿಡಬೇಕು. ಆಮೇಲೆ ಸಮಾರಂಭಕ್ಕೆ ಹೋಗದಿದ್ದರೂ ಅಡ್ಡಿಯಿಲ್ಲ. ಮದುವೆ ಮುಗಿದು ಸಂಸಾರ ಹೂಡಿದ ಮೇಲೆ ಅವರ ಮನೆಗೆ ಹೋಗಿ ಅವರಿನ್ನೂ ಏನನ್ನು ಕೊಂಡುಕೊಂಡಿಲ್ಲ ಅಂತ ಗಮನಿಸಿ, ಅವರಿಗೆ ಬೇಕಾದ ಕುಕ್ಕರು, ಪಾತ್ರೆ, ಫ್ಯಾನು-ಇಂಥವೇನನ್ನಾದರೂ ಕೊಟ್ಟು ಬರುವುದು ನಿಜವಾದ ಕಳಕಳಿಯ ಸಂಕೇತ. ನೀವು ಬರುತ್ತೀರಿ, ಗಿಫ್ಟು ತರುತ್ತೀರಿ ಅಂತ ಕಾಯುವ ವರ್ಗವೊಂದಿರುತ್ತದೆ. ತಪ್ಪದೆ ಅಂಥವರ ಮದುವೆಗೆ ಹೋಗಿ. ಯಾರಿಗೂ ಕಾಣದಂತೆ ಒಂದಷ್ಟು ಹಣ ಕೊಟ್ಟು ‘ಏನಕ್ಕಾದರೂ ಬಳಸಿಕೋ’ ಅಂತ ಹೇಳಿ ಬನ್ನಿ. ಬರ್ತ್​ಡೇ ತರಹದ ಸಮಾರಂಭಗಳಿಗೆ ‘ಬೊಕೆ ಕೊಡುವುದಿದೆಯಲ್ಲ’ ಶುದ್ಧ ಮೂರ್ಖತನ ಅದು. ಮನೆಯ ತುಂಬ ಹೂಗಳೇ. ಮಾರನೆಯ ದಿನ ಕೆಲಸದವಳು ಗುಡಿಸಿ ಹಾಕುತ್ತಿರುತ್ತಾಳೆ.

    ತೀರಾ ಆತ್ಮೀಯರಿಗೆ ಗಿಫ್ಟ್ ಕೊಡಬಾರದು ಎಂಬುದು ನನ್ನ ಸಿದ್ಧಾಂತ. ಅವರನ್ನೇ ಅಂಗಡಿಗೆ ಕರೆದೊಯ್ದು ‘ನಿಂಗೇನು ಬೇಕೋ, ತಗೋ’ ಅನ್ನುವುದು ಜಾಣತನ. ಅವರಿಗೆ surprise ಕೊಡುವುದೇ ನಿಮ್ಮ ಉದ್ದೇಶವಾಗಿದ್ದರೆ, ಅವರಿಗೆ ಏನು ಬೇಕು ಮತ್ತು ಏನನ್ನು ಖರೀದಿಸುವುದಕ್ಕಾಗಿ ಅವರು ದುಡ್ಡು ಕೂಡಿಡುತ್ತಿದ್ದಾರೆ ಅಂತ ಅರ್ಥಮಾಡಿಕೊಂಡು ಅದನ್ನು ನೀವೇ ತಂದುಕೊಟ್ಟುಬಿಡಿ.

    ನನ್ನ ಮಟ್ಟಿಗೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಕೊಡಬಹುದಾದ ಅತಿದೊಡ್ಡ ಮತ್ತು ಅಮೂಲ್ಯವಾದ ಗಿಫ್ಟೆಂದರೆ-ಟೈಮು! ನೆನಪಿಡಿ, ವಾಚ್ ಅಲ್ಲ. ನಿಮ್ಮೊಂದಿಗೆ ನಾನು ಐದು ನಿಮಿಷ ಕಳೆದೆನೆಂದರೆ, ಅದು ನಾವಿಬ್ಬರೂ ಒಬ್ಬರಿಗೊಬ್ಬರು ಕೊಟ್ಟುಕೊಂಡ ಅತ್ಯಮೂಲ್ಯ ಉಡುಗೊರೆಗಳೇ. ಏಕೆಂದರೆ, ನಾವು ಎಷ್ಟು ಪ್ರಯತ್ನಪಟ್ಟರೂ ಅದನ್ನು ಹಿಂತಿರುಗಿಸಲಾಗುವುದಿಲ್ಲ. ತಿರಸ್ಕರಿಸಲಾಗುವುದಿಲ್ಲ. ಬೇರೆ ಇನ್ಹೇಗೋ ಬಳಸಲಾಗುವುದಿಲ್ಲ. ಶೋಕೇಸ್​ನಲ್ಲಿ ಇಡಲಾಗುವುದಿಲ್ಲ. ‘ಇದನ್ನು ಕೊಟ್ಟವರ್ಯಾರು?’ ಅಂತ ಗಿಫ್ಟ್ ರ್ಯಾಪರು ತಡಕಿ ನೋಡಬೇಕಾಗುವುದಿಲ್ಲ. ಅದಕ್ಕಿಂತ ಸಮೃದ್ಧ ಉಡುಗೊರೆ ಮತ್ತೊಂದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts