More

    ಯುದ್ಧವೆಂಬುದು ಸಾವಿರ ಕದನಗಳ ಒಟ್ಟು ಮೊತ್ತ!; ನಮ್ಮನಮ್ಮಲ್ಲಿ ರವಿ ಬೆಳಗೆರೆ..

    ‘ಪ್ರತಿ ಸೋಲನ್ನೂ ಗೆಲುವನ್ನಾಗಿಸಿಕೊಳ್ಳುವುದು ಹೇಗೆ?’

    ಅದು ಎಲ್ಲರ ಪ್ರಶ್ನೆ.

    ‘ಯಾವ ಕಾರಣಕ್ಕೂ ಸೋಲದಿರುವುದು ಹೇಗೆ?’

    ಇದು ಹಠಮಾರಿಗಳ ಪ್ರಶ್ನೆ.

    ನಾನು ಎರಡನೆಯ ಗುಂಪಿನವನು. Fight to finish ಅನ್ನುವ ಮಂತ್ರದೀಕ್ಷೆ ತೆಗೆದುಕೊಂಡವನು. ಸೋತ ದಿನ ನಾನಿರುವುದಿಲ್ಲ. ನಾನು ಗೆಲ್ಲಲೇಬೇಕು. ಅದಕ್ಕೆ ನನಗೆ ಗೊತ್ತಿರುವ ಒಂದೇ ಒಂದು ತಂತ್ರವೆಂದರೆ, ಗೆಲುವಿಗೋಸ್ಕರ ಅಣಿಯಾಗುತ್ತಲೇ ಇರುವುದು. ಗೆಲುವಿಗೋಸ್ಕರ ದುಡಿಯುತ್ತಲೇ ಇರುವುದು. ಮನಸ್ಸನ್ನು ಕೇವಲ ಗೆಲುವಿನ ಮೇಲೆ ಕೇಂದ್ರೀಕರಿಸಿರುವುದು.

    ಒಂದು ಸಲ ನಿಮ್ಮ ಟೀವಿ ಆನ್ ಮಾಡಿಕೊಂಡು ಸ್ಪೋರ್ಟ್ಸ್ ಚಾನಲ್ ಯಾವುದಾದರೂ ನೋಡುತ್ತ ಕೂತುಕೊಳ್ಳಿ. ಸಾವಿರಾರು, ಲಕ್ಷಾಂತರ ಜನ ನಿಬ್ಬೆರಗಾಗುವಂತೆ ಒಬ್ಬ ವ್ಯಕ್ತಿ ಓಟದ ಸ್ಪರ್ಧೆಯಲ್ಲಿ ಗೆದ್ದುಬಿಡುತ್ತಾನೆ. ಓಡಿದ್ದು ಕೆಲವೇ ನಿಮಿಷ. ಗೆದ್ದದ್ದು ಇಷ್ಟಗಲ ಬಂಗಾರದ ಪದಕ. ಸಿಕ್ಕಿದ್ದು ಲಕ್ಷಾಂತರ ಡಾಲರು. ಜಗತ್ತಿನಾದ್ಯಂತ ಅವತ್ತು ಅವನದೇ ಮಾತು. ಆ ಕ್ಷಣಕ್ಕೆ ಅವನೇ ಹೀರೋ. ಆದರೆ ಅವನಿಗಷ್ಟೆ ಗೊತ್ತಿರುತ್ತದೆ: ಆ ಕೆಲವೇ ನಿಮಿಷಗಳ ಓಟದ ಗೆಲುವಿಗಾಗಿ ಅವನು ಅದೆಷ್ಟು ವರ್ಷ ಟ್ರಾ್ಯಕುಗಳಲ್ಲಿ ಗೆಲುವಿನ ಬೆನ್ನತ್ತಿ ಓಡಿದ್ದ, ಅದೆಷ್ಟು ಸಲ ಸೋಲಿನ ಕಲ್ಲು ಎಡವಿಕೊಂಡು ಬಿದ್ದಿದ್ದ ಅಂತ. ಬಿದ್ದಾಗ ಸ್ಪರ್ಧೆ ಕೈ ಬಿಟ್ಟು ಬಿಟ್ಟಿದ್ದಿದ್ದರೆ- ಅವನಿವತ್ತು ಇರುತ್ತಿರಲಿಲ್ಲ. ಅವನು ಇದ್ದದ್ದೇ ಗೆಲ್ಲಲಿಕ್ಕೆ.

    ಅವನು ನಿಜಕ್ಕೂ ಯುದ್ಧ ಮಾಡಿದ್ದು ಗೆಲುವಿಗಾಗಿ ಅಲ್ಲ. ಅವನದೇನಿದ್ದರೂ ಸೋಲಿನ ವಿರುದ್ಧದ ಯುದ್ಧ. ಕೇವಲ ಗೆಲುವಿಗೋಸ್ಕರ ಯುದ್ಧ ಮಾಡುವವನನ್ನು ಸೋಲಿಸಬಹುದು. ಹಿಟ್ಲರ್ ಸೋತ, ನೆಪೋಲಿಯನ್ ಸೋತ, ರಾವಣಾಸುರ ಸೋತ. ಆದರೆ ಸೋಲಿನ ವಿರುದ್ಧ ಯುದ್ಧಕ್ಕೆ ಹೊರಟವನಿದ್ದಾನಲ್ಲ? ಅವನು ಚಿಕ್ಕ ಚಿಕ್ಕ ಕದನಗಳನ್ನು ಗೆದ್ದು ಬಂದಿರುತ್ತಾನೆ. ಸಾವಿರ ಕದನ ಸೇರಿ ಒಂದು ಯುದ್ಧವಾಗಿರುತ್ತದೆ.

    ಒಮ್ಮೆಲೆ ಯುದ್ಧ ಗೆಲ್ಲುತ್ತೇನೆಂದು ಹೊರಡುವವನು ಒಮ್ಮೆಲೆ ಸೋಲಲೂಬಹುದು. ಆದರೆ ಕದನಗಳ ಸಂಗತಿ ಹಾಗಲ್ಲ. ಪ್ರತಿ ಕದನವೂ ಅವತ್ತಿನ ಮಟ್ಟಿಗೆ ನಿರ್ಣಾಯಕ. ಸೋಲು-ಗೆಲುವು ಫಿಫ್ಟಿ ಫಿಫ್ಟಿ. ಇವತ್ತು ನಾನು ಎಷ್ಟು ಪುಟ ಬರೆಯಬೇಕು ಅಂದುಕೊಂಡೆನೋ, ಅಷ್ಟು ಪುಟ ಬರೆದರೆ-ಇವತ್ತಿನ ಕದನ ಗೆದ್ದ ಹಾಗೇ. ಅಂದುಕೊಂಡಿದ್ದರಲ್ಲಿ ಅರ್ಧ ಬರೆದರೆ, ಗೆದ್ದದ್ದು ಅರ್ಧವಷ್ಟೇ. ಈ ಒಂದು ವರ್ಷ ಓದಿಬಿಟ್ಟರೆ ಇಂಜಿನಿಯರಿಂಗ್ ಮುಗೀತು ಅಂದುಕೊಳ್ಳುತ್ತಾನೆ ಹುಡುಗ. ಒಂದು ವರ್ಷ ಎಲ್ಲಿ ಓದುತ್ತಾನೆ? ಓದುವುದು ಕಡೇ ಮೂರು ತಿಂಗಳು. ಅವನ ಗೆಲುವಿನ ಶೇರ್ ಅದನ್ನು ಮೀರಿರುವುದಿಲ್ಲ. ಇಡೀ ಕೆಲಸ ಒಂದೇ ದಿನದಲ್ಲಿ ಮುಗಿಸುತ್ತೇವೆ ಎಂದುಕೊಳ್ಳುತ್ತೇವೆ. ಒಂದು ದಿನವೆಂದರೆ ಇಪ್ಪತ್ನಾಲ್ಕು ಗಂಟೆ. ಎಂಟು ತಾಸು ಮುಗಿಯುವುದರೊಳಗಾಗಿ ನಮ್ಮ ಪಾಲಿನ ‘ದಿನ’ ಮುಗಿದು ಹೋಗುತ್ತದೆ. ಆದರೆ ಕದನವೆಂಬುದು ದಿನದ ಅನುಕ್ಷಣ ಬೇಡುತ್ತದೆ.

    ಅಯ್ಯೋ ಬಿಡಪ್ಪ, ಆ ಪರಿ ಕದನ ಮಾಡಿಕೊಂಡು ಗೆಲ್ಲೋ ಅಂಥಾದ್ದು ನಮಗೇನಿದೆ? ನಾವು ಆರಾಮಾಗಿ, ನೆಮ್ಮದಿಯಾಗಿ ಇದ್ದುದರಲ್ಲೇ ಸುಖವಾಗಿರೋ ಜನ ಅಂತ ನೀವನ್ನೋದಾದರೆ, ಸ್ಪೋರ್ಟ್ಸ್ ಚಾನಲ್ ಆಫ್ ಮಾಡಿ. ಕಾರ್ಟೂನ್ ನೆಟ್​ವರ್ಕ್ ನೆಮ್ಮದಿ ಕೊಡುತ್ತದೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ: ಈ ಬದುಕು ಕೆಲವು ಸಲ ನೀವು ಬೇಡ ಅಂದರೂ ಕದನಕ್ಕೆ ಎಳೆದುಬಿಡುತ್ತದೆ. ಯುದ್ಧಕ್ಕೆ ಹೊರಡೆನ್ನುತ್ತದೆ. ಗೆಲುವೋ, ಸೋಲೋ- ಶಸ್ತ್ರವನ್ನಂತೂ ಕೈಗೆತ್ತಿಕೊಳ್ಳಲೇಬೇಕು ಎಂಬಂತೆ ಮಾಡಿಬಿಡುತ್ತದೆ. ಆಗಲೂ ಆರಾಮಾಗಿ, ನೆಮ್ಮದಿಯಾಗಿ ಇರಬಯಸಿದ್ದೇ ಆದರೆ-ಇವತ್ತಿನ ಕದನವನ್ನು ಇವತ್ತು ಗೆದ್ದುಬಿಟ್ಟಿರಿ.

    ತುಂಬ ನೆಮ್ಮದಿಯಾಗಿ ಮಕ್ಕಳೊಂದಿಗೆ ಸೆಟ್ಲಾಗಿ ನಿವೃತ್ತಿ ಜೀವನ ಕಳೆಯಲು ಆರಂಭಿಸುವಾತನ ಹಿರಿಮಗ ಆಕ್ಸಿಡೆಂಟಿನಲ್ಲಿ ತೀರಿಹೋಗುತ್ತಾನೆ. ಅವನ ಕುಟುಂಬದ ಅಷ್ಟೂ ಭಾರ ಈ ನಿವೃತ್ತ ವೃದ್ಧನ ಹೆಗಲ ಮೇಲೆ! ಮದುವೆ ಮಾಡಿ ಕಳಿಸಿದ ಮಗಳು, ಅದರ ಸಾಲ ತೀರುವ ಮೊದಲೇ ಮನೆಗೆ ವಾಪಸು ಬಂದಿರುತ್ತಾಳೆ. ನೌಕರಿಗೆ ಕಳಿಸೋಣವೆಂದರೆ, ಹುಡುಗಿ ಓದಿದವಳಲ್ಲ. ಪ್ರಜ್ಞಾವಂತೆಯೂ ಅಲ್ಲ. ಆಗಿದ್ದಿದ್ದರೆ ಗಂಡನ ಮನೆಯಿಂದ ವಾಪಸು ಬರುತ್ತಿರಲಿಲ್ಲ. ಈಗ ಅವಳನ್ನಂದು ಉಪಯೋಗವೇನು? ಅವಳು ಚಿಕ್ಕವಳಾಗಿದ್ದಾಗ ಪ್ರತೀ ಸಂಜೆ ಕೂತು ಪಾಠ ಹೇಳಿಕೊಡಬೇಕಿತ್ತು.

    ಅವತ್ತಿನ ಕದನವನ್ನು ಆತ ಸುಳ್ಳೇ ಸೋತ. ಈಗ ಇಳಿವಯಸ್ಸಿನಲ್ಲಿ ಗಂಡ ಬಿಟ್ಟ ಮಗಳನ್ನು ಸಾಕುವ ಯುದ್ಧ ಆರಂಭಿಸಬೇಕು! ಎಂಥ ಕಂದಾಯ? ಇದೆಲ್ಲ ಕದನ, ಯುದ್ಧ, ಶಸ್ತ್ರ, ಸೋಲು-ಗೆಲುವುಗಳ ಮಧ್ಯೆಯೇ ಬದುಕು ಮುಗಿದು ಹೋಗಬೇಕಾ? ಯಾವತ್ತೋ ಬಂಗಾರದ ಪದಕ ಗೆಲ್ಲುವಂತೆ ಓಡಬೇಕೆಂಬ ಕಾರಣಕ್ಕಾಗಿ ಇಷ್ಟೆಲ್ಲ ವರ್ಷ ಸುಖಗಳನ್ನು ಕಳೆದುಕೊಂಡು ಬಯಲಲ್ಲಿ ಬದುಕಬೇಕಾ-ಅಂತ ಕೇಳುವವರಿದ್ದಾರೆ. ‘ಇಷ್ಟು ದುಡೀತೀ. ಇಷ್ಟು ಕೆಲಸ ಮಾಡ್ತೀ. ಏನುಪಯೋಗ? ಸುಖ ಪಡೋ ನಸೀಬೇ ನಿಂಗಿಲ್ಲ’ ಅಂತ ನನ್ನನ್ನೇ ಅನ್ನುವ ಗೆಳೆಯರಿದ್ದಾರೆ. ಅವರೆಲ್ಲ ನನ್ನೊಂದಿಗೆ ಇದ್ದವರೇ. ವರ್ಷಗಟ್ಟಲೆ ಪ್ರತೀ ಸಂಜೆ-ರಾತ್ರಿ ಸುಖಪಟ್ಟಿದ್ದೇವೆ. ಅವೇ ವರ್ಷಗಳಲ್ಲಿ ಬೆಳಗಿನ ಜಾವ ಸ್ವಲ್ಪ ಮುಂಚೆ ಎದ್ದು ಆಟದ ಬಯಲಿನಲ್ಲಿ ಸ್ವಲ್ಪ ಕಷ್ಟಪಟ್ಟು ಬಿಟ್ಟಿದ್ದಿದ್ದರೆ-ಇವತ್ತಿಗೆ ಎಂತೆಂಥ ಗೆಲುವುಗಳು ಅವರವಾಗಿರುತ್ತಿದ್ದವೋ! ‘ಲೈಫು ಹಿಂಗೇ ಇರುತ್ತಾ ಗುರೂ? ಒಳ್ಳೇ ದಿವಸ ಬಂದೇ ಬರ್ತವೆ’ ಅಂತ ಮಾತಾಡಿಕೊಂಡು ಒಳ್ಳೆಯ ರಾತ್ರಿಗಳನ್ನು ವಿಸ್ಕಿಯಲ್ಲಿ ಮುಗಿಸಿಹಾಕುವವರಿಗೆ ‘ಲೈಫು ಹಿಂಗೂ ಇರಲ್ಲ: ಇನ್ನಷ್ಟು ನಿಕೃಷ್ಟಗೊಳ್ಳುತ್ತದೆ’ ಎಂಬ ಕಲ್ಪನೆ ಕೂಡ ಇರುವುದಿಲ್ಲ. ಅಂಥ ಗೆಳೆಯರ ನಡುವೆಯೇ ನಾನು ದೊಡ್ಡ ದೊಡ್ಡ ಸಾಹಸಿಗಳನ್ನು ನೋಡಿದ್ದೇನೆ.

    ಯಾವ ಪ್ರಚಂಡ ಯುದ್ಧವನ್ನಾದರೂ ಗೆಲ್ಲಬಲ್ಲೆನೆಂಬ ಆತ್ಮವಿಶ್ವಾಸವಿರುವವರನ್ನು ನೋಡಿದ್ದೇನೆ. ಆದರೆ ಅದೇ ಸಾಹಸಿಗಳು- ಚಿಕ್ಕ ಚಿಕ್ಕ ಕದನ ಒಲ್ಲರು! ಅವರು ಯುದ್ಧಗಳಲ್ಲಿ ಸೋಲುವುದೇ ಆ ಕಾರಣಕ್ಕೆ. ಇಷ್ಟು ಕೆಲಸ ಮಾಡಿ, ಇಷ್ಟು ದುಡಿದು-ಲೈಫ್​ನ ಎಂಜಾಯ್ ಮಾಡಲೇ ಇಲ್ಲವಲ್ಲ ಎಂಬುದು ದಡ್ಡರ ಚಡಪಡಿಕೆ. ಇಷ್ಟೆಲ್ಲ ಮಾಡಿದ ನಂತರವೂ ನಾನು ಅತ್ಯುತ್ತಮ ಸಂಗೀತ ಕೇಳಿದ್ದೇನೆ. ಶ್ರೇಷ್ಠ ಪುಸ್ತಕ ಓದಿದ್ದೇನೆ. ಗಾಢ ಸ್ನೇಹಗಳನ್ನು ಅನುಭವಿಸಿದ್ದೇನೆ. intense ಆಗಿ, passionate ಆಗಿ ಬದುಕಿದ್ದೇನೆ. ಮಕ್ಕಳೊಂದಿಗೆ ನಲಿದಿದ್ದೇನೆ. ಅವರ ಬದುಕು ರೂಪಿಸಿದ್ದೇನೆ. ನಾಯಿಮರಿಯೊಂದಿಗೆ ಆಟವಾಡಿದ್ದೇನೆ. ದೇಶ-ದೇಶ ಸುತ್ತಿದ್ದೇನೆ. ಅದ್ಭುತ ಊಟ, ಶ್ರದ್ಧಾವಂತ ಸುಖಿಸುವಿಕೆ, ನಿಚ್ಚಳ ನಿದ್ರೆ, ಮತ್ತ ಭಾವ, ನಿರ್ಲಿಪ್ತ ಕ್ಷಣ-ಯಾವುದನ್ನೂ ಬಿಟ್ಟಿಲ್ಲವಲ್ಲ?

    ಏಕೆಂದರೆ, ನನಗೆ ಕದನವೂ ಗೊತ್ತು: ಕದನವಿರಾಮವೂ ಗೊತ್ತು. ಹೀಗೆಲ್ಲ ಬರೆದೆ: ಅಹಂಕಾರಿ ಅಂದುಕೊಳ್ಳಬೇಡಿ. ನಾನು ತುಂಬ ಕದನಗಳನ್ನು ಕದನಕ್ಕಿಳಿಯದೇನೇ ಸೋತು ಈ ಪಾಠ ಕಲಿತಿದ್ದೇನೆ.

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts