ರೇಷನ್ ಕಾರ್ಡ್ ಗುರುತಿನ ಚೀಟಿ ಅಲ್ಲ

>

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಬಗ್ಗೆ ಮತದಾರರಿಗೆ ನೀಡಲಾದ ಭಾವಚಿತ್ರ ಇರುವ ಗುರುತಿನ ಚೀಟಿ ಇಲ್ಲದಿದ್ದರೆ ರೇಷನ್ ಕಾರ್ಡ್ ಹಾಜರಿಪಡಿಸುವಂತಿಲ್ಲ. ವೋಟರ್ ಸ್ಲಿಪ್ ಕೂಡ ಪರಿಗಣಿಸುವಂತಿಲ್ಲ ಎಂದು ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಮತದಾರರಿಗೆ ನೀಡಲಾದ ಭಾವಚಿತ್ರ ಇರುವ ಗುರುತಿನ ಚೀಟಿ ಇಲ್ಲದೇ ಇದ್ದರೆ ಆಧಾರ್ ಕಾರ್ಡ್ ಸಹಿತ ಇತರ 11 ದಾಖಲೆಗಳನ್ನು ಹಾಜರುಪಡಿಸಲು ಅವಕಾಶವಿದೆ. ಆದರೆ ರೇಷನ್ ಕಾರ್ಡ್ ಮತ್ತು ವೋಟರ್ ಸ್ಲಿಪ್ ದಾಖಲೆಯನ್ನು ಮತದಾನಕ್ಕೆ ಗುರುತಿನ ಚೀಟಿಯಾಗಿ ಪರಿಗಣಿಸಲಾಗುವುದಿಲ್ಲ. ಮತದಾರರು ಈ ಬಗ್ಗೆ ಎಚ್ಚರ ವಹಿಸಬೇಕು. ಗೊಂದಲಕ್ಕೆ ಅವಕಾಶ ನೀಡದೆ ಆಯೋಗ ಸೂಚಿಸಿದ ದಾಖಲೆಗಳನ್ನೇ ಮತಗಟ್ಟೆಗೆ ತರಬೇಕೆಂದು ಡಿಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾನ್ಯ ಮಾಡುವ ದಾಖಲೆಗಳು: * ಪಾಸ್‌ಪೋರ್ಟ್, * ಡ್ರೈವಿಂಗ್ ಲೈಸೆನ್ಸ್ * ಕೇಂದ್ರ, ರಾಜ್ಯ ಹಾಗೂ ಪಬ್ಲಿಕ್ ಸೆಕ್ಟರ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ನೀಡಿದ ಭಾವಚಿತ್ರ ಇರುವ ಗುರುತಿನ ಚೀಟಿ * ಅಂಚೆ, ಬ್ಯಾಂಕ್‌ಗಳಲ್ಲಿ ತೆರೆದ ಉಳಿತಾಯ ಖಾತೆಯ ಕುರಿತು ನೀಡಿದ ಭಾವಚಿತ್ರ ಇರುವ ಪಾಸ್‌ಬುಕ್ * ಪಾನ್‌ಕಾರ್ಡ್ * ಆರ್‌ಜಿಐ, ಎನ್‌ಪಿಆರ್ ಬಾಬ್ತು ಸ್ಮಾರ್ಟ್ ಕಾರ್ಡ್ * ಎಂಎನ್‌ಆರ್‌ಇಜೆಎ ಜಾಬ್ ಕಾರ್ಡ್ * ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ನೀಡಿದ ಆರೋಗ್ಯ ಸೇವೆಯ ಸ್ಮಾರ್ಟ್ ಕಾರ್ಡ್ * ಭಾವಚಿತ್ರ ಇರುವ ಪಿಂಚಣಿ ದಾಖಲೆಗಳು * ಸಂಸದರು, ಶಾಸಕರಿಗೆ ನೀಡಲಾದ ಅಧಿಕೃತ ಕಾರ್ಡ್ * ಆಧಾರ್ ಕಾರ್ಡ್.
ಅಪರ ಜಿಲ್ಲಾಧಿಕಾರಿ ಆರ್.ವೆಂಕಟಾಚಲಪತಿ, ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಸೆಲ್ವಮಣಿ ಸುದ್ದಿಗೋಷ್ಠಿಯಲ್ಲಿದ್ದರು.

ನಾಳೆ ಮತಯಂತ್ರ ಸಿದ್ಧಪಡಿಸುವ ಕಾರ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಸಂಬಂಧಿಸಿ ವಿದ್ಯುನ್ಮಾನ ಮತಯಂತ್ರಗಳನ್ನು ವಿಧಾನಸಭಾವಾರು ಹಂಚಿಕೆ ಮಾಡಲಾಗಿದೆ. ಏ.10ರಂದು ಬೆಳಗ್ಗೆ 9.30ಕ್ಕೆ ವಿಧಾನಸಭಾವಾರು ನಿಗದಿಪಡಿಸಿದ ಕೇಂದ್ರದಲ್ಲಿ ಮತಯಂತ್ರಗಳನ್ನು ಸಿದ್ಧಪಡಿಸುವ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಜಿಲ್ಲೆಗೆ ನಿಯೋಜಿತರಾದ ಬಿಇಎಲ್ ತಾಂತ್ರಿಕ ಸಿಬ್ಬಂದಿ ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಮಕ್ಷಮ ವಿದ್ಯುನ್ಮಾನ ಮತಯಂತ್ರಗಳಿಗೆ ಸಿಂಬಲ್ ಲೋಡಿಂಗ್ ಕಾರ್ಯ ನಡೆಯಲಿದೆ. ಜಿಲ್ಲೆಯ 1861 ಮತಗಟ್ಟೆಗಳಿಗೆ 2236 ಕಂಟ್ರೋಲಿಂಗ್ ಯುನಿಟ್, 2236 ಬ್ಯಾಲೆಟ್ ಯುನಿಟ್ ಮತ್ತು 2495 ವಿವಿ ಪ್ಯಾಟ್ ಹಂಚಿಕೆ ಮಾಡಲಾಗಿದೆ ಎಂದರು.
ವಿಧಾನಸಭಾವಾರು ವಿದ್ಯುನ್ಮಾನ ಮತಯಂತ್ರ ಸಿದ್ಧಪಡಿಸುವ ಕಾರ್ಯ ನಡೆಯಲಿದ್ದು, ಬೆಳ್ತಂಗಡಿ-ಎಸ್‌ಡಿಎಂ ಪದವಿಪೂರ್ವ ಕಾಲೇಜು ಉಜಿರೆ, ಮೂಡುಬಿದಿರೆ- ಧವಳಾ ಕಾಲೇಜು ಮೂಡುಬಿದಿರೆ, ಮಂಗಳೂರು ಉತ್ತರ-ರೊಸಾರಿಯೊ ಶಿಕ್ಷಣ ಸಂಸ್ಥೆ ಪಾಂಡೇಶ್ವರ, ಮಂಗಳೂರು ದಕ್ಷಿಣ-ಕೆನರಾ ಹೈಸ್ಕೂಲ್ ಉರ್ವ, ಮಂಗಳೂರು-ರಾಮಕೃಷ್ಣ ಶಿಕ್ಷಣ ಸಂಸ್ಥೆ ಬಂಟ್ಸ್‌ಹಾಸ್ಟೆಲ್, ಬಂಟ್ವಾಳ- ಇನ್‌ಫಾಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ ಮೊಡಂಕಾಪು, ಪುತ್ತೂರು-ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು, ಸುಳ್ಯ- ಸರ್ಕಾರಿ ಪದವಿಪೂರ್ವ ಕಾಲೇಜು ಸುಳ್ಯ ಇಲ್ಲಿ ನಡೆಯಲಿದೆ ಎಂದರು.

ವಿವಿಪ್ಯಾಟ್ ಪ್ರಾತ್ಯಕ್ಷಿಕೆ: ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿ ಪ್ಯಾಟ್ (ಮತದಾನ ಖಾತ್ರಿ ಯಂತ್ರ) ಪ್ರಾತ್ಯಕ್ಷಿಕೆ ನಡೆಸಲಾಯಿತು. ಇವಿಎಂನಲ್ಲಿ ಮತ ಚಲಾಯಿಸುವ ಗುಂಡಿ ಒತ್ತಿದ ಏಳು ಸೆಕೆಂಡ್‌ಗಳ ಅವಧಿಯಲ್ಲಿ ಚಲಾಯಿಸಿದ ಮತದ ವಿವರ ವಿವಿ ಪ್ಯಾಟ್‌ನಲ್ಲಿ ಕಾಣಿಸುತ್ತದೆ. ಬಳಿಕವಷ್ಟೇ ಮತ ದಾಖಲೆಗೊಳ್ಳಲಿದೆ. ಬಳಿಕ ವಿವರ ಕಾಗದದಲ್ಲಿ ಮುದ್ರಿತವಾಗಿ ವಿವಿಪ್ಯಾಟ್‌ನೊಳಗೆ ಬೀಳುತ್ತದೆ. ಮತ ಎಣಿಕೆ ಸಂದರ್ಭ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದಾದರೂ ಒಂದು ಮತಗಟ್ಟೆಯ ಮುದ್ರಿತ ಮತಪತ್ರಗಳ ಮತ ಎಣಿಕೆ ನಡೆಯಲಿದೆ. ವಿಧಾನಸಭೆ ಚುನಾವಣೆ ಈ ರೀತಿ ನಡೆಸಿದ ಮತ ಎಣಿಕೆಯಲ್ಲಿ ಎರಡೂ ಸಂಖ್ಯೆಗಳು ಶೇ.100 ತಾಳೆಯಾಗಿತ್ತು. ವಿವಿಪ್ಯಾಟ್ ಅಳವಡಿಕೆಯಿಂದಾಗಿ ಇವಿಎಂ ಬಗ್ಗೆ ಸಂಶಯ ಪಡುವ ಅಗತ್ಯ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಂಟ್ರೋಲ್ ರೂಂಗೆ 2598 ಕರೆ:  ಚುನಾವಣಾ ಪ್ರಕ್ರಿಯೆ ಆರಂಭವಾದ ಬಳಿಕ ಚುನಾವಣಾ ಕಂಟ್ರೋಲ್ ರೂಂಗೆ 2598 ಕರೆ ಬಂದಿದ್ದು ಇದುವರೆಗೆ 2,595 ಕರೆಗಳಿಗೆ ಸ್ಪಂದಿಸಲಾಗಿದೆ. ಈ ಪೈಕಿ ಬಹುತೇಕ ಕರೆಗಳು ಮಾಹಿತಿ ಕೋರಿ ಬಂದಿದ್ದು, ಅವರಿಗೆ ಸೂಕ್ತ ಮಾಹಿತಿ ನೀಡಲಾಗಿದೆ. ಸಮಸ್ಯೆ ತಿಳಿಸಿದವರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಿ ವಿಜಿಲ್ ಮೂಲಕ ಸಲ್ಲಿಕೆಯಾದ 32 ದೂರುಗಳ ಪೈಕಿ 24 ದೂರುಗಳಿಗೆ ಪರಿಹಾರ ನೀಡಲಾಗಿದೆ. 28.10 ಲಕ್ಷ ರೂ. ನಗದು ಮುಟ್ಟುಗೋಲು ಹಾಕಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ಪೂರ್ಣ ಹಣ ಹಿಂತಿರುಗಿಸಲಾಗಿದೆ. 93.92 ಲಕ್ಷ ರೂ. ಮೌಲ್ಯದ ಸುಮಾರು 84 ಸಾವಿರ ಲೀಟರ್ ಮದ್ಯ ವಶ ಪಡಿಸಿಕೊಳ್ಳಲಾಗಿದೆ. ಒಟ್ಟು 1.07 ಕೋಟಿ ರೂ. ಮೌಲ್ಯದ 3 ದ್ವಿಚಕ್ರ ವಾಹನ, 3 ಲಾರಿ, 1907 ಭಿತ್ತಪತ್ರ, 3 ಕಾರು, 1 ಟ್ರಕ್ , 1 ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಖರ್ಚುವೆಚ್ಚ ಸಂಬಂಧಿಸಿ 3 ಹಾಗೂ ಅಬಕಾರಿ ನಿಯಮ ಉಲ್ಲಂಘಿಸಿದ 461 ಪ್ರಕರಣ ದಾಖಲಾಗಿದೆ. ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ ಇದುವರೆಗೆ 10 ದೂರುಗಳನ್ನು ಸ್ವೀಕರಿಸಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *