ಮಂಡ್ಯ: ರಥಸಪ್ತಮಿ ಅಂಗವಾಗಿ ಜಿಲ್ಲಾದ್ಯಂತ ದೇವಸ್ಥಾನದಲ್ಲಿ ಬ್ರಹ್ರರಥೋತ್ಸವ ನಡೆಯಿತು.
ತಾಲೂಕಿನ ಸಾತನೂರು ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಾಲಯದಲ್ಲಿ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ನೆರವೇರಿತು. ಕಳೆದ ನಾಲ್ಕು ವರ್ಷದಿಂದ ಬ್ರಹ್ಮರಥೋತ್ಸವವು ರಥಸಪ್ತಮಿ ದಿನದಂದು ನಡೆಯುತ್ತಿದ್ದು, ಬೆಳಗ್ಗೆ 10.45ಕ್ಕೆ ಕಂಬದ ನರಸಿಂಹಸ್ವಾಮಿಗೆ ಅಲಂಕಾರ ಮಾಡಲಾಗಿತ್ತು. ನಂತರ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ಬೆಟ್ಟದ ಸುತ್ತಲೂ ರಥೋತ್ಸವ ನಡೆಸಲಾಯಿತು. ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರು ರಥಕ್ಕೆ ಹಣ್ಣು ಜವನ ಎಸೆಯುವ ಮೂಲಕ ತಮ್ಮ ಭಕ್ತಿ ಭಾವವನ್ನು ಮೆರೆದರು.
ರಥಬೀದಿಯಲ್ಲಿ ಪಾನಕ ಮಜ್ಜಿಗೆ ನೀಡಿ ಭಕ್ತರ ದಾಹ ತಣಿಸಿದರು. ದೇವಾಲಯದ ಸಮಿತಿ ವತಿಯಿಂದ ಬಂದಂತಹ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. 6 ದಿನಗಳ ಕಾಲ ದನಗಳ ಜಾತ್ರೆ ಆಯೋಜಿಸಿದ್ದು ಈ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಗಳಿಂದ ರಾಸು ಪ್ರಿಯರು ಆಗಮಿಸಿ ಉತ್ತಮ ರಾಸುಗಳನ್ನು ವೀಕ್ಷಿಸಿದರು. ಸಮಿತಿ ವತಿಯಿಂದ ಉತ್ತಮ ರಾಸುಗಳಿಗೆ ಮೊದಲನೇ ಬಹುಮಾನ 15 ಸಾವಿರ ರೂ, ಎರಡನೇ ಬಹುಮಾನ 10 ಸಾವಿರ ರೂ, ಮೂರನೇ ಬಹುಮಾನ 5 ಸಾವಿರ ರೂ ನೀಡಲಾಗುತಿದೆ. ಜತೆಗೆ ಚಾಂಪಿಯನ್ ರಾಸುಗೆ ನಮ್ಮ ಕುಟುಂಬದ ವತಿಯಿಂದ ಎರಡು ಗ್ರಾಂ ಚಿನ್ನವನ್ನು ನೀಡಲಾಗುವುದು. ಕಂಬದ ನರಸಿಂಹಸ್ವಾಮಿ ಜಾತ್ರೆಗೆ 400ಕ್ಕೂ ಹೆಚ್ಚು ರಾಸುಗಳು ಪಾಲ್ಗೊಂಡಿದ್ದವು. ಉತ್ಸವದ ಕೊನೆ ದಿನದಂದು ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಮಹೇಶ್ ತಿಳಿಸಿದರು.
ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿರುವ ಶನೇಶ್ಚರ ಸ್ವಾಮಿಯ ಬ್ರಹ್ಮ ರಥೋತ್ಸವ ಸಂಭ್ರಮ ಸಡಗರದಿಂದ ನಡೆಯಿತು. ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ನಗರದಲ್ಲಿ ಯೋಗ ಪ್ರದರ್ಶನ
ಮಂಡ್ಯ ನಗರದ ಬನ್ನೂರು ರಸ್ತೆಯ ಶನಿಮಹಾತ್ಮ ದೇವಾಲಯದ ಆವರಣದಲ್ಲಿ ಸಂಸ್ಕಾರ ಸಂಘಟನೆ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ರಥಸಪ್ತಮಿ ಪ್ರಯುಕ್ತ ಯೋಗಾಸನ ಕಾರ್ಯಕ್ರಮವನ್ನು ನಡೆಸಲಾಯಿತು.
ಯೋಗ ಶಿಕ್ಷಕಿ ಶೋಭಾ ಮಾತನಾಡಿ, ರಥಸಪ್ತಮಿ ಅಂಗವಾಗಿ ಯೋಗಾಸನ ಮೂಲಕ 108 ಸೂರ್ಯ ನಮಸ್ಕಾರವನ್ನು ಸಾಮೂಹಿಕವಾಗಿ ಮಾಡುವ ಮೂಲಕ ಭಕ್ತಿ ಸಮರ್ಪಿಸಿದ್ದೇವೆ. ವಿಶೇಷವಾಗಿ ಸೂರ್ಯನ ಕಿರಣಗಳು ರಥಸಪ್ತಮಿ ಅಂದು ನಮ್ಮ ದೇಹದ ಮೇಲೆ ಬೀಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಯೋಗಾಸನದ ಮೂಲಕ ರೋಗಗಳನ್ನು ದೂರ ಮಾಡುವುದಲ್ಲದೆ ನಮ್ಮ ದೈನಂದಿನ ಚಟುವಟಿಕೆಗೆ ಸಹಕಾರಿಯಾಗಲಿದೆ. ಮನುಷ್ಯನಿಗೆ ಯೋಗ ಅತ್ಯಾವಶ್ಯಕವಾಗಿದೆ ಎಂದರು.
ಡಾ.ರೂಪ, ಲತಾ ಶಂಕರ್, ಹಿಮಾ, ವೀಣಾ, ಪ್ರಮೀಳಾ, ಯೋಗೇಶ್, ಶ್ರೀನಿವಾಸ್ ಇತರರಿದ್ದರು. 30ಕ್ಕೂ ಹೆಚ್ಚು ಯೋಗಪಟುಗಳು ವಿವಿಧ ಯೋಗಾಸನ ಪ್ರದರ್ಶಿಸಿ ಗಮನ ಸೆಳೆದರು.