ಬೆಳಗಾವಿ: ಮೊದಲೇ ಸಂಕಷ್ಟದಲ್ಲಿರುವ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಇದೀಗ ಲಾಕ್‌ಡೌನ್ ಪರಿಣಾಮದಿಂದಾಗಿ ಮರಳು, ಕಟ್ಟಡ ಸಾಮಗ್ರಿ ಹಾಗೂ ಕಾರ್ಮಿಕರು ಸಿಗದೆ ಮತ್ತೊಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ, ಒಂದು ಲಾರಿ ನದಿ ಮರಳಿನ ದರ 28 ರಿಂದ 32 ಸಾವಿರ ರೂ.ಗೆ ಏರಿಕೆಯಾಗಿದ್ದು, ಜನರು ಮತ್ತಷ್ಟು ಕಂಗೆಟ್ಟಿದ್ದಾರೆ.
ಕಳೆದ ವರ್ಷ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಸೂರು ಕಳೆದುಕೊಂಡು ಸಂಕಷ್ಟದಲ್ಲಿದ್ದ ಜಿಲ್ಲೆಯ ಸಂತ್ರಸ್ತರು, ಸರ್ಕಾರ ನೀಡುತ್ತಿರುವ ಹಣದಿಂದ ಅಲ್ಪಸ್ವಲ್ಪ ಮನೆ ದುರಸ್ತಿ, ಮನೆ ಮರು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಧುತ್ತನೆ ಎದುರಾದ ಲಾಕ್‌ಡೌನ್‌ನಿಂದಾಗಿ ಕಳೆದ 45 ದಿನಗಳಿಂದ ಮರಳು, ಸಿಮೆಂಟ್ ಸೇರಿ ಇನ್ನಿತರ ಕಟ್ಟಡ ಸಾಮಗ್ರಿ ಸಿಗುತ್ತಿಲ್ಲ. ವಾಹನ ಸಮಸ್ಯೆ ಇನ್ನಿತರ ಕಾರಣಗಳಿಂದ ಯಾವುದೇ ಕಾರ್ಮಿಕರೂ ಸಹ ಕೆಲಸಕ್ಕೆ ಬರುತ್ತಿಲ್ಲ. ಇದರಿಂದ ಪ್ರವಾಹ ಸಂತ್ರಸ್ತರಿಗೆ ದಿಕ್ಕು ತೋಚದಾಗಿದೆ.
15 ಸಾವಿರ ರೂ. ಏರಿಕೆ: ಸರ್ಕಾರ ಈಗ ಲಾಕ್‌ಡೌನ್ ಸಡಿಲುಗೊಳಿಸಿದ ಬೆನ್ನಲ್ಲೇ ಒಂದು ಲಾರಿ ನದಿ ಮರಳಿನ ದರ 28 ರಿಂದ 32 ಸಾವಿರ ರೂಪಾಯಿಗೆ ಏರಿಕೆ ಮಾಡಿದ್ದಾರೆ. 2019 ಡಿಸೆಂಬರ್‌ನಿಂದ 2020ರ ಫೆಬ್ರವರಿ ವರೆಗೆ ನದಿಯ ಮರಳು ಒಂದು ಲಾರಿಗೆ 18 ಸಾವಿರ ರೂ.ಗೆ ಸಿಗುತ್ತಿತ್ತು. ಆದರೆ, ಇದೀಗ ಅದೇ ಮರಳು ಏಕಾಏಕಿ 10ರಿಂದ 15 ಸಾವಿರ ರೂ.ಏರಿಕೆ ಕಂಡಿದೆ. ಇತ್ತ ಕಾರ್ಮಿಕರ ಕೂಲಿ 250 ರೂ.ನಿಂದ 320 ರೂ. ಏರಿಕೆಯಾಗಿದೆ.
ಪರವಾನಗಿ ನವೀಕರಣ ಇಲ್ಲ: ಸದ್ಯ ಜಿಲ್ಲೆಯಲ್ಲಿ ಪಟ್ಟಾ ಭೂಮಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 40 ್ಲಡ್ ಮರಳು ಘಟಕಗಳ ಪರವಾನಗಿ ಅವಧಿ ಮಾರ್ಚ್ 31ಕ್ಕೆ ಪೂರ್ಣಗೊಂಡಿದೆ. ಲಾಕ್‌ಡೌನ್ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ನಿರ್ಬಂಧಿತ ಪ್ರದೇಶದಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಪರವಾನಗಿ ನವೀಕರಣ ಕಾರ್ಯ ನಡೆದಿಲ್ಲ. ಅಲ್ಲದೆ, ನದಿಗಳ ಮರಳು ಘಟಕಗಳ ಟೆಂಡರ್ ಕೆಲಸವೂ ಮೊಟಕುಗೊಂಡಿದೆ. ಆನ್‌ಲೈನ್‌ನಲ್ಲಿ ಕೆಲಸ ಆರಂಭಿಸಲಾಗಿದೆ. ಆದರೆ, ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂದು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತರ ತೊಳಲಾಟ: ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ 69,381 ಮನೆಗಳು ಹಾನಿಯಾಗಿದ್ದವು. ಅದರಲ್ಲಿ ಸುಮಾರು 20 ಸಾವಿರ ಮನೆಗಳು ಪೂರ್ಣಗೊಂಡಿದ್ದು, 45 ಸಾವಿರಕ್ಕೂ ಅಧಿಕ ಮನೆಗಳ ಮರು ನಿರ್ಮಾಣಕ್ಕೆ ಮರಳಿನ ಅವಶ್ಯಕತೆಯಿದೆ. ಆದರೆ, ದರ ಏರಿಕೆಯಿಂದಾಗಿ ಅರ್ಧಕ್ಕೇ ನಿಂತ ತಮ್ಮ ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೆ ನೆರೆ ಸಂತ್ರಸ್ತರು ಸಮಸ್ಯೆ ಅನುಭವಿಸುವಂತಾಗಿದೆ.
ಜಿಲ್ಲೆಯಲ್ಲಿ 98 ಮರಳು ಬ್ಲಾಕ್‌ಗಳು: ಹೊಸ ಮರಳು ನೀತಿ ಅನ್ವಯ ಜಿಲ್ಲೆಯಲ್ಲಿ 10 ನದಿ ಮರಳು ಬ್ಲಾಕ್‌ಗಳು ಇವೆ. ರಾಮದುರ್ಗ- 7, ಖಾನಾಪುರ- 2 ಮತ್ತು ಬೈಲಹೊಂಗಲ- 1 ಬ್ಲಾಕ್ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ 48 ಎಂ- ಸ್ಯಾಂಡ್ (ಕೃತಕ ಮರಳು) ಘಟಕಗಳು, ಪಟ್ಟಾ ಭೂಮಿಯಲ್ಲಿ ಸಂಗ್ರಹವಾಗಿರುವ ಮರಳು ತೆಗೆಯಲು 40 ್ಲಡ್ ಮರಳು ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಹರಾಜಿನಲ್ಲಿ ಮರಳು ಖರೀದಿಸಿರುವ ಗುತ್ತಿಗೆದಾರರು ಸಾರಿಗೆ, ಕಾರ್ಮಿಕರ ವೆಚ್ಚ ಸೇರಿಸಿ ಮರಳಿನ ದರ ನಿಗದಿಪಡಿಸುತ್ತಿದ್ದಾರೆ. ಕೆಲವರು ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಭೂ ವಿಜ್ಞಾನ ಇಲಾಖೆ ಜಿಲ್ಲಾ ನಿರ್ದೇಶಕ ಬಿ.ಉಮೇಶ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿದ್ದ ಮನೆಗಳ ದುರಸ್ತಿ, ಮರು ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿದೆ. ಲಾಕ್‌ಡೌನ್‌ನಿಂದ ಸಾರಿಗೆ ಸಂಚಾರ ಸ್ಥಗಿತಗೊಳಿಸಿದ್ದರಿಂದ ಮರಳು, ಸಿಮೆಂಟ್ ಇನ್ನಿತರ ಸಾಮಗ್ರಿಗಳ ಪೂರೈಕೆ ಮಾಡಲು ಸಮಸ್ಯೆ ಉಂಟಾಗಿತ್ತು. ಈಗ ಪೂರೈಕೆ ಮರು ಆರಂಭವಾಗಿದೆ. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲಾಗುವುದು.
| ಡಾ. ಎಸ್.ಬಿ. ಬೊಮ್ಮನಹಳ್ಳಿ
ಜಿಲ್ಲಾಧಿಕಾರಿ