ಶಿವಮೊಗ್ಗ: ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜು.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.
ಜು.1ವರೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ 55,112 ಪ್ರಕರಣ ಬಾಕಿ ಇದ್ದು, ಜು.6ರವರೆಗೆ 14,926 ಪ್ರಕರಣಗಳನ್ನು ಲೋಕ ಅದಾಲತ್‌ಗೆ ಗುರುತಿಸಲಾಗಿದೆ. ರಾಜಿ ಸಂಧಾನಕ್ಕಾಗಿ ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಬಾರಿ 12 ಸಾವಿರ ಪ್ರಕರಣ ವಿಲೇವಾರಿ ಗುರಿ ಹೊಂದಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಅದಾಲತ್ ನಡೆಸಲಾಗುತ್ತಿದ್ದು ಸಿವಿಲ್, ವೈವಾಹಿಕ, ಮೋಟಾರು ಪರಿಹಾರ ಪ್ರಕರಣ, ಚೆಕ್‌ಬೌನ್ಸ್, ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣ, ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲಿಗೆ ಸಂಬಂಧಿಸಿದ ವಿಭಜನಾ ಪ್ರಕರಣ ಹಾಗೂ ಇತರ ಪ್ರಕರಣ ಗುರುತಿಸಿ ಉಭಯ ಕಕ್ಷಿದಾರರ ಸಮಕ್ಷಮ ರಾಜಿ ಸಂಧಾನದ ಮೂಲಕ ಇತ್ಯರ್ಥ ಮಾಡಲಾಗುವುದು. ಮಾ.16ರಂದು ನಡೆದ ಅದಾಲತ್‌ನಲ್ಲಿ 14,669 ಪ್ರಕರಣ ಪೈಕಿ 10,815 ವಿಲೇವಾರಿ ಮಾಡಲಾಗಿತ್ತು ಎಂದರು.
ಬ್ಯಾಂಕ್‌ಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣ, ವಿದ್ಯುಚ್ಛಕ್ತಿ, ಜಲಮಂಡಳಿ ಹಾಗೂ ನ್ಯಾಯಾಲಯಕ್ಕೆ ಬರಬಹುದಾದ ಇತರ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ ಅವುಗಳ ಉಭಯ ಕಕ್ಷಿದಾರರನ್ನು ಕರೆಯಿಸಿ ರಾಜಿ ಸಂಧಾನದ ಮೂಲಕ ವಿವಾದ ಬಗೆಹರಿಸಿ ಅವಾರ್ಡ್ ಪಾಸು ಮಾಡಲಾಗುವುದು ಎಂದು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.
ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಪ್ರಯತ್ನ
ಹೈಕೋರ್ಟ್ ನಿರ್ದೇಶನದಂತೆ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ರಾಜ್ಯಾದ್ಯಂತ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಮತ್ತು ಇತರ ಮೂಲ ಸೌಕರ್ಯ ಪರಿಶೀಲಿಸಿ ಅಪೌಷ್ಟಿಕತೆ ಮತ್ತು ಕುಂದುಕೊರತೆ ನಿವಾರಿಸಲು ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ. ಅಂಗನವಾಡಿಗಳಿಗೆ ಭೇಟಿ ನೀಡಿ ಸ್ಥಿತಿಗತಿ ಬಗ್ಗೆ ವರದಿ ನೀಡಲು ಸೂಚಿಸಿದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿಲ್ಲೆಯ 8 ಅಂಗನವಾಡಿಗಳಿಗೆ ಭೇಟಿ ನೀಡಿ ಹಲವು ಕುಂದುಕೊರತೆ ಬಗ್ಗೆ ಸಮಿತಿಗೆ ವರದಿ ಸಲ್ಲಿಸಿದ್ದಾರೆ ಎಂದು ನ್ಯಾಯಾಧೀಶ ಮಂಜುನಾಥ ನಾಯಕ್ ತಿಳಿಸಿದರು.