ಸಿದ್ದಾಪುರ: ಇಲ್ಲಿನ ಕೃಷ್ಣ ಬೇಕರಿ ಮುಂಭಾಗ ಭಾನುವಾರ ರಾತ್ರಿ ಅಪರೂಪದ ಬಿಳಿ ಗೂಬೆಯೊಂದು ಪ್ರತ್ಯಕ್ಷವಾಗಿ ಎಲ್ಲರನ್ನು ಚಕಿತಗೊಳಿಸಿದೆ.
ಅಪರೂಪದ ಬಿಳಿ ಗೂಬೆಯೊಂದು ಸಿದ್ದಾಪುರದ ಕೃಷ್ಣ ಬೇಕರಿ ಮುಂಭಾಗ ಬಂದು ಕುಳಿತಿದೆ ಎಂಬ ವಿಷಯ ತಿಳಿದ ಜನರು ಅಂಗಡಿ ಮುಂದೆ ಜಮಾಯಿಸಿ ಕಣ್ತುಂಬಿಕೊಂಡರು. ಕೆಲವರು ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿದರೆ, ಮತ್ತೆ ಕೆಲವರು ಸೆಲ್ಫಿಗೆ ಮೊರೆ ಹೋದರು.
ಗೂಬೆಗಳ ಬಗ್ಗೆ ಅನೇಕ ನಂಬಿಕೆ ಹಾಗೂ ಮೂಢನಂಬಿಕೆಗಳಿವೆ. ಕೆಲವು ನಂಬಿಕೆಗಳು ಗೂಬೆಯನ್ನು ಶುಭವೆಂದು ಹೇಳಿದರೆ, ಇನ್ನೂ ಕೆಲವು ನಂಬಿಕೆ ಗೂಬೆಯನ್ನು ಅಶುಭದ ಸಂಕೇತವೆಂದು ಹೇಳುತ್ತದೆ. ಆದರೆ ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳದ ಜನರು ಬಿಳಿ ಗೂಬೆ ಬಂದಿರುವ ವಿಚಾರ ಕೇಳಿ ಅದನ್ನು ನೋಡಲು ದೌಡಾಯಿಸಿ ಬಂದರು.
ಅಂಗಡಿ ಮಾಲೀಕ ಬಿಜು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ನೀಡಿದ್ದಾರೆ. ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪ ವಲಯ ಅರಣ್ಯ ಅಧಿಕಾರಿ ಸಂಜಿತ್ ಸೋಮಯ್ಯ ಅವರ ಮಾರ್ಗದರ್ಶನದಲ್ಲಿ ತಕ್ಷಣ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಗೂಬೆಯನ್ನು ವಶಕ್ಕೆ ಪಡೆದುಕೊಂಡು ಪಶುವೈದ್ಯರ ಬಳಿ ಗೂಬೆಯ ಆರೋಗ್ಯ ಪರಿಶೀಲಿಸಿ ನಂತರ ಮಾಲ್ದಾರೆ ಅರಣ್ಯದಲ್ಲಿ ಬಿಟ್ಟಿದ್ದಾರೆ.
ಪ್ರಾಣಿ, ಪಕ್ಷಿಗಳ ಮೇಲೆ ಕೆಲವರು ಮೂಢನಂಬಿಕೆ, ಅಪಪ್ರಚಾರ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ. ಅಪರೂಪದ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಹಾಗಾಗಿ ಅಪರೂಪದ ಬಿಳಿ ಗೂಬೆಯನ್ನು ಕಾಡಿಗೆ ಬಿಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶಿವರಾಮ್ ತಿಳಿಸಿದ್ದಾರೆ.