ಅತ್ಯಾಚಾರ ದೂರು ಹಿಂಪಡೆಯದ ಸಂತ್ರಸ್ತೆಯನ್ನು ಗುಂಡಿಕ್ಕಿ ಕೊಂದ ಆರೋಪಿ

ಗುರುಗ್ರಾಮ: ಅತ್ಯಾಚಾರ ದೂರು ಹಿಂಪಡೆದಿಲ್ಲ ಎಂದು 22 ವರ್ಷದ ಯುವತಿಯನ್ನು ಬೌನ್ಸರ್​ವೊಬ್ಬ ಗುಂಡಿಕ್ಕಿ ಕೊಂದಿದ್ದಾನೆ.

ಶುಕ್ರವಾರ ಯುವತಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಬೇಕಿತ್ತು. ಆದರೆ, ಅದಕ್ಕೂ ಮುಂಚೆ ಯುವತಿಯ ಮನೆಗೆ ತೆರಳಿದ ಬೌನ್ಸರ್​ ಸಂದೀಪ್​ ಕುಮಾರ್​ ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದ. ಯುವತಿಯ ತಾಯಿ ಎದುರಲ್ಲಿದ್ದರೂ ಆತನನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಆಕೆಯ ತಾಯಿ ಹೇಳಿಕೊಂಡಿದ್ದಾರೆ.

ನೈಟ್​ ಕ್ಲಬ್​ನಲ್ಲಿ ನೃತ್ಯಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯನ್ನು ಮನೆಯಿಂದ ಕರೆದೊಯ್ದ ನಂತರ ಗುರುಗ್ರಾಮದ ಫರೀದಾಬಾದ್​ ಎಕ್ಸ್​ಪ್ರೆಸ್​ವೇನಲ್ಲಿ ಆಕೆಯನ್ನು ನಾಲ್ಕು ಬಾರಿ ಗುಂಡಿಕ್ಕಿ ಕೊಂಡಿದ್ದಾನೆ. ಘಟನೆ ನೋಡುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಮಾರ್ಚ್​ 2017ರಲ್ಲಿ ಯುವತಿ ಸಂದೀಪ್​ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ಯುವತಿ ತಾಯಿ ಹೇಳಿಕೆ ಅನುಸಾರ ಸಂದೀಪ್​ ವಿರುದ್ಧ ಎಫ್​ಐಆರ್​ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಿದ್ದೇವೆ ಎಂದು ಗುರುಗ್ರಮಾದ ಪೊಲೀಸ್​ ವಕ್ತಾರ ಸುಭಾಷ್​ ಬೋಕನ್​ ತಿಳಿಸಿದ್ದಾರೆ. (ಏಜೆನ್ಸೀಸ್)