ಬಾಲಕಿ ಮೇಲೆ ಆರು ಮಂದಿ ಅತ್ಯಾಚಾರ

ಉಪ್ಪಿನಂಗಡಿ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗಿದೆ ಎಂಬ ಪ್ರಕರಣವನ್ನು ಭೇದಿಸಿದ ಉಪ್ಪಿನಂಗಡಿ ಪೊಲೀಸರು ಬಾಲಕಿಯನ್ನು ಬೇರೆ ಬೇರೆ ದಿನಗಳಲ್ಲಿ ಅತ್ಯಾಚಾರ ನಡೆಸಿದ ಆರು ಮಂದಿಯ ಮಾಹಿತಿ ಕಲೆ ಹಾಕಿ ಈ ಪೈಕಿ ಐವರನ್ನು ಮಂಗಳವಾರ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ 16ರ ಹರೆಯದ ವಿದ್ಯಾರ್ಥಿನಿ ಜುಲೈ 17ರ ಬೆಳಗ್ಗೆ ತನ್ನ ಮನೆಯಿಂದ ಬಟ್ಟೆ ಹಾಗೂ ಶಾಲಾ ಬ್ಯಾಗ್‌ನೊಂದಿಗೆ ನಾಪತ್ತೆಯಾಗಿದ್ದು, ಆಕೆ ತಂದೆ ಉಪ್ಪಿನಂಗಡಿ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚಿ ಆಕೆ ಮೇಲೆ ಅತ್ಯಾಚಾರವೆಸಗಿದ ಐವರನ್ನು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಇಳಂತಿಲ ಗ್ರಾಮದ ಅಣಬೆಕೋಡಿ ಮನೆಯ ಚಂದ್ರಾಕ್ಷ(25), ಉರುವಾಲು ಗ್ರಾಮ ಜನತಾ ಕಾಲನಿ ನಿವಾಸಿ ಸಂದೀಪ್ ಯಾನೆ ಸಂದೀಪ್ ಕುಮಾರ್(23), ಕಣಿಯೂರು ಗ್ರಾಮದ ಬರಂಬು ಮನೆ ನಿವಾಸಿ ಹರ್ಷೇಂದ್ರ ಯಾನೆ ಹರ್ಷ ಯಾನೆ ರವಿ(24), ಕಣಿಯೂರು ಗ್ರಾಮದ ನಾಲೋಡಿ ಮನೆ ನಿವಾಸಿ ಲವ ಕುಮಾರ್ ಯಾನೆ ಲವ(27) ಹಾಗೂ ಶಿಶಿಲ ಗ್ರಾಮ ಪೊಲಿಪುಮನೆ ನಿವಾಸಿ ಲಕ್ಷ್ಮೀಶ ಯಾನೆ ಚರಣ್(24) ಬಂಧಿತರು. ಪ್ರಕರಣದ ಇನ್ನೋರ್ವ ಆರೋಪಿ ಮಿಥುನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಚಂದ್ರಾಕ್ಷ ಎಂಬಾತನ ಮೇಲೆ ಬಾಲಕಿ ಅಪಹರಣ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದರೆ, ಉಳಿದ ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಹಾಸನದಲ್ಲಿ ಬಾಲಕಿ ಪತ್ತೆ
ಬಾಲಕಿ ಬೆಂಗಳೂರಿಗೆ ಪರಾರಿಯಾಗುವ ಯತ್ನದಲ್ಲಿದ್ದಾಗ ಪೊಲೀಸರು ಹಾಸನದಲ್ಲಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಆಕೆ ಮನೆಯಿಂದ ಚಂದ್ರಾಕ್ಷ ಎಂಬಾತನೊಂದಿಗೆ ತೆರಳಿದ್ದು, ಆತ ಆಕೆ ಮೇಲೆ ಅತ್ಯಾಚಾರ ನಡೆಸಿ ಬಳಿಕ ಬೆಂಗಳೂರಿನಲ್ಲಿರುವ ತನ್ನ ಚಿಕ್ಕಮ್ಮನ ಮನೆಯಲ್ಲಿರಿಸಲು ಸಿದ್ಧತೆ ನಡೆಸಿ ಬೆಂಗಳೂರಿಗೆ ಕಳುಹಿಸಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ದೊರಕಿದೆ. ಆಕೆಯ ಮೊಬೈಲ್ ಕಾಲ್ ಡಿಟೇಲ್ಸ್ ಪರಿಶೀಲಿಸಿದಾಗ ಆಕೆ ಜತೆ ಹಲವರು ಸಂಪರ್ಕದಲ್ಲಿರುವುದು ತಿಳಿದು ಬಂದಿದೆ. ಆಕೆಯನ್ನು ಇನ್ನಷ್ಟು ವಿಚಾರಣೆ ನಡೆಸಿದಾಗ ಒಟ್ಟು ಆರು ಮಂದಿ ಬೇರೆ ಬೇರೆ ದಿನಗಳಲ್ಲಿ ಅತ್ಯಾಚಾರ ನಡೆಸಿರುವುದಾಗಿ ತಿಳಿಸಿದ್ದಾರೆ. ಆಕೆ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕಿಯನ್ನು ‘ಇಂಚರ’ ಸಲಹಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *