ರಣವೀರ್-ದೀಪಿಕಾ ಮದುವೆ ಇಟಲಿಯಲ್ಲಿ?

ಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎನ್ನುವ ವದಂತಿ ತಣ್ಣಗಾದ ಬೆನ್ನಲ್ಲೇ ಹರಿದಾಡಿದ್ದು ಅವರ ವಿವಾಹದ ವಿಚಾರ. ಈ ಜೋಡಿ ಮುಂದಿನ ತಿಂಗಳು ಮದುವೆಯಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದರೆ, ಈ ವರ್ಷಾಂತ್ಯಕ್ಕೆ ವಿವಾಹ ನಡೆಯಲಿದೆ ಎಂದು ಮತ್ತೆ ಕೆಲವರು ಸುದ್ದಿ ಹಬ್ಬಿಸಿದ್ದರು. ಆದರೆ, ಇದರಲ್ಲಿ ಹುರುಳಿಲ್ಲ ಎಂದು ಇಬ್ಬರೂ ಮಾಧ್ಯಮದ ಮುಂದೆ ನಕ್ಕಿದ್ದರು. ಈಗ ರಣವೀರ್-ದೀಪಿಕಾ ಮದುವೆ ದಿನಾಂಕ ಹಾಗೂ ಸ್ಥಳ ಅಂತಿಮಗೊಂಡಿದೆ ಎಂಬ ಮಾತು ಮತ್ತೊಮ್ಮೆ ಕೇಳಿಬರುತ್ತಿದೆ. ಮಾಧ್ಯಮಗಳ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು. ಈಗ ಇದೇ ಸೂತ್ರವನ್ನು ರಣವೀರ್-ದೀಪಿಕಾ ಅನುಸರಿಸುತ್ತಿದ್ದಾರಂತೆ! ಹೌದು, ಈ ಜೋಡಿ ನ.20ರಂದು ಇಟಲಿಯಲ್ಲಿ ಹಸೆಮಣೆ ಏರಲು ನಿರ್ಧರಿಸಿದೆ ಎಂಬುದು ಮೂಲಗಳ ಮಾಹಿತಿ. 30 ಜನರಿಗೆ ಮಾತ್ರ ಮದುವೆಗೆ ಆಮಂತ್ರಣ ನೀಡಲು ನಿರ್ಧರಿಸಲಾಗಿದೆಯಂತೆ. ಅಲ್ಲಿಂದ ವಾಪಸಾದ ನಂತರ ಸೆಲೆಬ್ರಿಟಿಗಳಿಗೋಸ್ಕರ ಮುಂಬೈನಲ್ಲಿ ವಿಶೇಷ ಔತಣಕೂಟ ಏರ್ಪಡಿಸಲಾಗುತ್ತಿದೆ. ಇತ್ತೀಚೆಗೆ ಈ ಜೋಡಿ ಇಟಲಿಯಲ್ಲಿ ಕಾಣಿಸಿಕೊಂಡಿತ್ತು. ಮದುವೆ ತಯಾರಿಗಾಗಿ ಅವರು ಅಲ್ಲಿಗೆ ತೆರಳಿದ್ದರು ಎನ್ನಲಾಗುತ್ತಿದೆ. ನ.20ಕ್ಕೆ ರಣವೀರ್-ದೀಪಿಕಾ ವಿವಾಹವಾಗಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿತ್ತು. ಇದನ್ನು ರೀ-ಟ್ವೀಟ್ ಮಾಡಿರುವ ಬಾಲಿವುಡ್ ನಟ ಕಬೀರ್ ಬೇಡಿ, ‘ಅದ್ಭುತ ಸ್ಥಳ. ಅತ್ಯುತ್ತಮ ಜೋಡಿ. ನಿಮಗೆ ಒಳ್ಳೆಯದಾಗಲಿ’ ಎಂದು ಬರೆದುಕೊಂಡಿದ್ದಾರೆ. ಇದು ಅವರ ಮದುವೆ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.-ಏಜೆನ್ಸೀಸ್