ಪತಿ-ಪತ್ನಿ ಪ್ರಕರಣದಲ್ಲಿ ಟ್ರಾನ್ಸ್ಫರ್ ಮಾಡ್ತಿಲ್ಲ ಎಂದು ಆಕ್ರೋಶ | ಮಧ್ಯಪ್ರವೇಶಕ್ಕೆ ರಾಜ್ಯಪಾಲರಿಗೂ ಮನವಿ
| ಕೀರ್ತಿನಾರಾಯಣಸಿ, ಬೆಂಗಳೂರು
ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಕಾನ್ಸ್ಟೆಬಲ್ಗಳ ಗೋಳು ಕೇಳುವವರಿಲ್ಲದಂತಾಗಿದೆ. ಪತಿ-ಪತ್ನಿ ಪ್ರಕರಣ ಹಾಗೂ ಪರಸ್ಪರ ವರ್ಗಾವಣೆ ವಿಚಾರವಾಗಿ ಕಾನ್ಸ್ಟೆಬಲ್ಗಳ ಮನವಿಗೆ ಕಿವಿಗೊಡದ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ಮುಂದುವರಿದಿದೆ. ವರ್ಗಾವಣೆ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವ ಜತೆಗೆ ಇಂದು (ಸೋಮವಾರ) ಆರಂಭವಾಗುತ್ತಿರುವ ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಲು ಪೊಲೀಸ್ ಕುಟುಂಬಗಳು ಸಿದ್ಧತೆ ನಡೆಸಿವೆ.
7 ವರ್ಷ ಸೇವೆ ಪೂರೈಸಿರುವವರನ್ನು ಅಂತರ ಜಿಲ್ಲಾ ವರ್ಗಾವಣೆ ಮಾಡುವುದಾಗಿ ಪೊಲೀಸ್ ಇಲಾಖೆ ಮಾರ್ಗಸೂಚಿ ಪ್ರಕಟಿಸಿತ್ತು. ಆದರೆ, ವರ್ಗಾವಣೆ ಸಮಯದಲ್ಲಿ 10 ವರ್ಷ ಸೇವಾವಧಿ ಮುಗಿಸಿರುವ 47 ಕಾನ್ಸ್ಟೆಬಲ್ಗಳನ್ನು ಮಾತ್ರವೇ ವರ್ಗಾವಣೆಗೊಳಿಸಿತ್ತು. ಪತಿ-ಪತ್ನಿ ಒಂದೇ ಜಿಲ್ಲೆಯಲ್ಲಿ ಕೆಲಸ ಮಾಡಲು 7 ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿದ್ದವರಿಗೆ ಸರ್ಕಾರ ‘ಕೈ’ ಕೊಟ್ಟಿತ್ತು. ಪತಿ-ಪತ್ನಿ ಪ್ರಕರಣಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸುವುದಾಗಿ ಹೇಳಿ ಇಲಾಖೆ ಸುಮ್ಮನಾಗಿರುವ ಬಗ್ಗೆ ಸಿಬ್ಬಂದಿ ಬೆಂಕಿಕಾರಿದ್ದಾರೆ.
ಸಿಬ್ಬಂದಿ ಪರಸ್ಪರ ವರ್ಗಾವಣೆಯಿಂದ ಎರಡು ಜಿಲ್ಲೆಗಳಲ್ಲೂ ರಿಕ್ತ ಸ್ಥಾನದ ಸಮಸ್ಯೆ ಆಗಲ್ಲ. ಸ್ವಂತ ಖರ್ಚಿನಲ್ಲಿ ಪರಸ್ಪರ ವರ್ಗಾವಣೆಯಾಗುವುದರಿಂದ ಇಲಾಖೆಗೂ ಆರ್ಥಿಕ ನಷ್ಟವಿಲ್ಲ. ಸಿಬ್ಬಂದಿಗೆ ವಯಸ್ಸಾದ ತಂದೆ-ತಾಯಿ ಹಾಗೂ ಕುಟುಂಬ ವರ್ಗದವರಿದ್ದಾರೆ. ಅಂತಹವರನ್ನೂ ವರ್ಗಾವಣೆ ಮಾಡಲು ಇಲಾಖೆ ಹಿರಿಯ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. 2017ನೇ ಸಾಲಿನಲ್ಲಿ ನೇಮಕಾತಿ ಹೊಂದಿದ ಕಾನ್ಸ್ಟೆಬಲ್ಗಳ ಪೈಕಿ ಪತಿ-ಪತ್ನಿ ಪ್ರಕರಣದಲ್ಲಿ ಒಂದು ಬಾರಿ ವರ್ಗಾವಣೆ ಮಾಡಿದರೆ ಮುಂದಿನ 2 ವರ್ಷ ಯಾವುದೇ ಪೊಲೀಸ್ ದಂಪತಿ ವರ್ಗಾವಣೆಗೆ ಅರ್ಹರಾಗುವುದಿಲ್ಲ. ಆದ್ದರಿಂದ ಪತಿ-ಪತ್ನಿ ಪ್ರಕರಣದಲ್ಲಿ 7ವರ್ಷ ಸೇವೆ ಪೂರೈಸಿದ ಕಾನ್ಸ್ಟೆಬಲ್ಗಳನ್ನು ವರ್ಗಾವಣೆ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡುವಂತೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಕಾನ್ಸ್ಟೆಬಲ್ಗಳು ಮನವಿ ಸಲ್ಲಿಸಿ, ಅಳಲು ತೋಡಿಕೊಂಡಿದ್ದಾರೆ.
ಗೃಹಸಚಿವರ ಪತ್ರಕ್ಕೂ ಬೆಲೆ ಇಲ್ಲ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪೈಕಿ ಪತಿ-ಪತ್ನಿ ಪ್ರಕರಣದಲ್ಲಿ 7 ವರ್ಷ ಸೇವೆ ಪೂರೈಸಿದ ಸಿಬ್ಬಂದಿಗೆ ವರ್ಗಾವಣೆಯಲ್ಲಿ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. 2017ನೇ ಸಾಲಿನಲ್ಲಿ ನೇಮಕಾತಿ ಹೊಂದಿದ ಕಾನ್ಸ್ಟೆಬಲ್ಗಳಲ್ಲಿ ಪತಿ-ಪತ್ನಿ ಪ್ರಕರಣದಲ್ಲಿ 7 ವರ್ಷ ಪೂರೈಸಿದವರನ್ನು ವರ್ಗಾವಣೆಗೊಳಿಸುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ ಹಲವು ಬಾರಿ ಆಡಳಿತ ವಿಭಾಗದ ಎಡಿಜಿಪಿ ಅವರಿಗೆ ಲಿಖಿತ ಪತ್ರ ಕಳುಹಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರೋದೆ 40-50 ಸಿಬ್ಬಂದಿ
ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಅರ್ಹತೆ ಹೊಂದಿರುವುದು 40 ರಿಂದ 50 ಸಿಬ್ಬಂದಿ ಇದ್ದಾರೆ. 7 ವರ್ಷ ಸೇವೆ ಪೂರೈಸಿರುವವರನ್ನು ವರ್ಗಾವಣೆ ಮಾಡಿದರೆ ಆಡಳಿತ ನಿರ್ವಹಣೆಗೆ ಸಮಸ್ಯೆ ಆಗಲ್ಲ. ಆದರೆ, ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪೊಲೀಸ್ ದಂಪತಿ ಹೇಳುವುದೇನು?
1. ಪತಿ ಒಂದು ಜಿಲ್ಲೆಯಲ್ಲಿ, ಪತ್ನಿ ಇನ್ನೊಂದು ಜಿಲ್ಲೆಯಲ್ಲಿ ಕೆಲಸ. ಅನೇಕ ಪೊಲೀಸರಿಗೆ ಮಕ್ಕಳೇ ಆಗಿಲ್ಲ.
2. ಪತಿ-ಪತ್ನಿ ದೂರವಾಗಿರುವುದರಿಂದ ಅನೈತಿಕ ಸಂಬಂಧ ಹೆಚ್ಚುತ್ತಿರುವ ಜತೆಗೆ ಕರ್ತವ್ಯದಲ್ಲಿ ದಕ್ಷತೆ ಕಡಿಮೆ ಆಗಿದೆ.
3. ಪತಿ-ಪತ್ನಿ ದೂರವಾಗಿರುವುದರಿಂದ ಒತ್ತಡದಲ್ಲಿ ಕೆಲಸ, ದಿನೇದಿನೆ ಕೌಟಂಬಿಕ ಕಲಹ ಜಾಸ್ತಿ.
4. ಪತಿ-ಪತ್ನಿ ಒಂದೇ ಕಡೆ ಕರ್ತವ್ಯ ನಿರ್ವಹಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶಕ್ಕೂ ಮಾನ್ಯತೆ ಇಲ್ಲ.
5. ಷರತ್ತಿನ ಅನ್ವಯ ಸೇವಾ ಜೇಷ್ಠತೆ ಬಿಟ್ಟುಕೊಟ್ಟರೂ ವರ್ಗಾವಣೆಗೆ ಪರಿಗಣಿಸುತ್ತಿಲ್ಲ.
6. ವರ್ಗಾವಣೆ ಮಾಡದಿದ್ದರೆ ಸಾಮೂಹಿಕ ದಯಾಮರಣ ಕೊಡಿ ಅಥವಾ ವಿಚ್ಚೇದನ ಕೊಡಿಸಿ.
ವರ್ಷ 10 ತಿಂಗಳು ಸೇವೆ ಆಗಿದೆ. ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ಮಾಡುತ್ತಿಲ್ಲ. ನಾನು ಬೆಳಗಾವಿಯಲ್ಲಿ ಪೇದೆ, ಪತ್ನಿ ಬೀದರ್ ಜಿಲ್ಲೆಯಲ್ಲಿ ಶಾಲಾ ಶಿಕ್ಷಕಿ. ನಮಗೆ ಒಂದು ಮಗುವಿದೆ. ವರ್ಗಾವಣೆ ಸಿಗದೆ ಕುಟುಂಬದಲ್ಲಿ ನೆಮ್ಮದಿ ಇಲ್ಲದಾಗಿದೆ.
| ಪೊಲೀಸ್ ಕಾನ್ಸ್ಟೆಬಲ್
ಕೋಲಾರದಲ್ಲಿ 7 ವರ್ಷ 6 ತಿಂಗಳಿಂದ ಪೇದೆಯಾಗಿದ್ದೇನೆ. ನನ್ನ ಹೆಂಡತಿ ಬೆಳಗಾವಿಯಲ್ಲಿ ಕಾನ್ಸ್ಟೆಬಲ್ ಆಗಿದ್ದಾಳೆ. ಒಟ್ಟಿಗಿರಲಾಗದೆ ಜೀವನದಲ್ಲಿ ಜಿಗುಪ್ಸೆ ಬಂದಿದ್ದು, ಇಲಾಖೆಯಲ್ಲಿ ಕರ್ತವ್ಯನಿರ್ವಹಿಸಲು ಆಗುತ್ತಿಲ್ಲ.
| ಪೊಲೀಸ್ ಕಾನ್ಸ್ಟೆಬಲ್
ಪರಸ್ಪರ ವರ್ಗಕ್ಕೂ ನಿರಾಸಕ್ತಿ
ರಾಜ್ಯದಲ್ಲಿ ಪರಸ್ಪರ ವರ್ಗಾವಣೆ ಬಯಸಿರುವ ಅಂದಾಜು 30 ರಿಂದ 40 ಪೊಲೀಸ್ ಕಾನ್ಸ್ಟೆಬಲ್ಗಳಿದ್ದಾರೆ. ಕೆಎಸ್ಪಿ ಆನ್ಲೈನ್ ಟ್ರಾನ್ಸ್ಫರ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ. ಕಡಿಮೆ ಪ್ರಮಾಣದ ಸಿಬ್ಬಂದಿ ಇರುವುದರಿಂದ ಇಲಾಖೆ ಆಡಳಿತ ನಿರ್ವಹಣೆಗೆ ತೊಂದರೆ ಇಲ್ಲ ಎನ್ನಲಾಗಿದೆ.
ಬಲವಂತದ ಮದುವೆ, ಐಟಂ ಸಾಂಗ್ಗಳಿಂದಲೇ ಜೀವನ; ‘ಸಿಲ್ಕ್’ ಆಗಿ ಮಿಂಚಿದ ಸ್ಮಿತಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ!