ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಸೋಲು

ರಾಜ್​ಕೋಟ್: ಕೆಟ್ಟ ಬ್ಯಾಟಿಂಗ್ ನಿರ್ವಹಣೆ ತೋರಿದ ಕರ್ನಾಟಕ ತಂಡ ರಣಜಿ ಟ್ರೋಫಿ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ 87 ರನ್​ಗಳಿಂದ ಸೌರಾಷ್ಟ್ರಕ್ಕೆ ಶರಣಾಗಿದೆ. ಮೂರೇ ದಿನಗಳಲ್ಲಿ ಮುಗಿದ ಪಂದ್ಯದಲ್ಲಿ ಉಭಯ ತಂಡಗಳು ಸ್ಪಿನ್ ಪ್ರಹಾರಕ್ಕೆ ತತ್ತರಿಸಿದರೂ, ಸುಲಭ ಮೊತ್ತವನ್ನು ಚೇಸಿಂಗ್ ಮಾಡುವಲ್ಲಿ ಎಡವಿದ ಕರ್ನಾಟಕ ಜಯದ ಅವಕಾಶವನ್ನು ಕೈಚೆಲ್ಲಿತು. ಶನಿವಾರ ಒಂದೇ ದಿನ ಬರೋಬ್ಬರಿ 20 ವಿಕೆಟ್​ಗಳು ಉರುಳಿದವು.

ಮೊದಲ ಇನಿಂಗ್ಸ್​ನಲ್ಲಿ ಹಿನ್ನಡೆ ಕಂಡು ಮಾನಸಿಕವಾಗಿ ಕುಸಿದಿದ್ದ ಕರ್ನಾಟಕ 3ನೇ ದಿನದಾಟದಲ್ಲಿ, ಸೌರಾಷ್ಟ್ರ ತಂಡದ 2ನೇ ಇನಿಂಗ್ಸ್​ಅನ್ನು 79 ರನ್​ಗೆ ಕಟ್ಟಿಹಾಕುವ ಮೂಲಕ ಮೇಲುಗೈ ಕಂಡಿತ್ತು. ಇದರಿಂದ 179 ರನ್​ಗಳ ಸವಾಲು ಪಡೆದಿದ್ದ ವಿನಯ್ ಕುಮಾರ್ ಪಡೆ, ಕೇವಲ 91 ರನ್​ಗೆ ಆಲೌಟ್ ಆಗಿ ಹೀನಾಯವಾಗಿ ಶರಣಾಯಿತು. ಇದು ಕರ್ನಾಟಕ್ಕೆ ಹಾಲಿ ಟೂರ್ನಿಯಲ್ಲಿ ಮೊದಲ ಸೋಲಾಗಿದೆ. ದ್ವಿತೀಯ ಇನಿಂಗ್ಸ್​ನಲ್ಲಿ ಸೌರಾಷ್ಟ್ರವನ್ನು ಕರ್ನಾಟಕ ಎರಡಂಕಿ ಮೊತ್ತಕ್ಕೆ ಕಟ್ಟಿ ಹಾಕಬಹುದೆಂಬ ನಿರೀಕ್ಷೆಯಿರಲಿಲ್ಲ. ಆದರೆ ಜೆ ಸುಚಿತ್(29ಕ್ಕೆ 3), ಪವನ್ ದೇಶಪಾಂಡೆ(5ಕ್ಕೆ 3) ಮತ್ತು ಶ್ರೇಯಸ್ ಗೋಪಾಲ್(10ಕ್ಕೆ 3)ಜಂಟಿಯಾಗಿ ಮಾರಕ ಸ್ಪಿನ್ ದಾಳಿ ನಡೆಸಿ ಸೌರಾಷ್ಟ್ರವನ್ನು ಕೇವಲ 27.4 ಓವರ್​ಗಳಲ್ಲಿ ಪೆವಿಲಿಯನ್​ಗೆ ಅಟ್ಟಿತು. ಸ್ನೇಲ್ ಪಟೇಲ್(22), ಅವಿ ಬರೋಟ್(10) ಹಾಗೂ ಅರ್ಪಿತ್ ವಸವಾಡ(13) ಆತಿಥೇಯರ ಪರವಾಗಿ ಎರಡಂಕಿ ಮೊತ್ತ ಪೇರಿಸಿದ್ದು ಬಿಟ್ಟರೆ, ಉಳಿದ 8 ಆಟಗಾರರು ಒಂದಂಕಿ ಮೊತ್ತಕ್ಕೆ ಔಟಾದರು.

ಸ್ಪಿನ್ನರ್​ಗಳಿಗೆ 38 ವಿಕೆಟ್!: ಪಂದ್ಯದ 4 ಇನಿಂಗ್ಸ್​ಗಳ 40 ವಿಕೆಟ್​ಗಳ ಪೈಕಿ 38 ವಿಕೆಟ್​ಗಳನ್ನು ಸ್ಪಿನ್ನರ್​ಗಳು ಕಬಳಿಸಿದರು. 1 ರನೌಟ್ ಮತ್ತು ವೇಗಿ ಮಿಥುನ್ ಮಾತ್ರವಷ್ಟೆ 1 ವಿಕೆಟ್ ಕಬಳಿಸಿದರು. ಇನ್ನುಳಿದಂತೆ ರಾಜ್ಯದ ಸುಚಿತ್ 9, ಶ್ರೇಯಸ್ 4, ಪವನ್ 6, ಸೌರಾಷ್ಟ್ರದ ಧಮೇಂದ್ರ ಜಡೇಜಾ 11, ಕಮಲೇಶ್ ಮಕ್ವಾನ 7 ವಿಕೆಟ್ ಕಬಳಿಸಿದರು.

ಎಡವಿದ ಕರ್ನಾಟಕ

ಧಮೇಂದ್ರ ಜಡೇಜಾ(44ಕ್ಕೆ4) ಮತ್ತು ಮಕ್ವಾನ(28ಕ್ಕೆ 5) ದಾಳಿಗೆ ಕೇವಲ 5 ರನ್​ಗೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ ಚೇಸಿಂಗ್ ಮಾಡುವುದು ಕಷ್ಟ ಎಂದು ಊಹಿಸಬಹುದಿತ್ತು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್(30) ಮತ್ತು ಶ್ರೇಯಸ್ ಗೋಪಾಲ್(27) 4ನೇ ವಿಕೆಟ್​ಗೆ 60 ರನ್ ಜತೆಯಾಟವಾಡಿ ಚೇತರಿಕೆ ನೀಡಿದರು. ಈ ಜತೆಯಾಟ ಬೇರ್ಪಟ್ಟ ಬಳಿಕ ರಾಜ್ಯ ತಂಡ ಕೊನೇ 7 ವಿಕೆಟ್​ಗಳನ್ನು 26 ರನ್ ಅಂತರದಲ್ಲಿ ಕಳೆದುಕೊಂಡಿತು.