ರೈಲ್ವೇಸ್​ಗೆ ರೋನಿತ್ ಮೋರೆ ಸ್ಪೀಡ್​ಬ್ರೇಕ್

| ಅರವಿಂದ ಅಕ್ಲಾಪುರ ಶಿವಮೊಗ್ಗ

ರೋನಿತ್ ಮೋರೆ ನೇತೃತ್ವದಲ್ಲಿ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಕರ್ನಾಟಕ ತಂಡ ಪ್ರವಾಸಿ ರೈಲ್ವೇಸ್ ತಂಡದ ವಿರುದ್ಧದ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ 71 ರನ್​ಗಳ ಅಮೂಲ್ಯ ಮೊದಲ ಇನಿಂಗ್ಸ್ ಮುನ್ನಡೆ ಸಂಪಾದಿಸಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ 2ನೇ ಬಾರಿ ಐದು ವಿಕೆಟ್ (45ಕ್ಕೆ 5) ಗೊಂಚಲು ಪಡೆದ ಬೆಳಗಾವಿಯ ಬೌಲರ್ ರೋನಿತ್ ಮೋರೆ ರಾಜ್ಯ ತಂಡ ಮೇಲುಗೈ ಪಡೆಯಲು ಪ್ರಮುಖವಾಗಿ ಕಾರಣರಾದರು.

ನವುಲೆ ಕೆಎಸ್​ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 9 ವಿಕೆಟ್​ಗೆ 208 ರನ್​ಗಳಿಂದ 2ನೇ ದಿನದಾಟ ಆರಂಭಿಸಿದ ಕರ್ನಾಟಕ, ಮೊದಲ ದಿನದ ಮೊತ್ತಕ್ಕೆ 6 ರನ್ ಸೇರಿಸಿ 91.4 ಓವರ್​ಗಳಲ್ಲಿ 214 ರನ್​ಗೆ ಆಲೌಟ್ ಆಯಿತು. ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ರೈಲ್ವೇಸ್, ರೋನಿತ್ ಮೋರೆ ಅಲ್ಲದೆ, ಅಭಿಮನ್ಯು ಮಿಥುನ್ (22ಕ್ಕೆ 2) ಹಾಗೂ ಪ್ರಸಿದ್ಧ ಕೃಷ್ಣ (26ಕ್ಕೆ 2) ದಾಳಿಗೆ ಕುಸಿದು 60.2 ಓವರ್​ಗಳಲ್ಲಿ 143 ರನ್​ಗೆ ಆಲೌಟ್ ಆಯಿತು. 71 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ದಿನದಂತ್ಯಕ್ಕೆ 14 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿ ಒಟ್ಟಾರೆ 112 ರನ್ ಮುನ್ನಡೆ ಕಲೆಹಾಕಿದೆ.

ಸ್ಲಿಪ್​ನಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಬೆರಳಿಗೆ ಗಾಯ ಮಾಡಿಕೊಂಡ ಆರ್.ಸಮರ್ಥ್, ಬಳಿಕ ಮೈದಾನಕ್ಕೆ ಇಳಿಯಲಿಲ್ಲ. 2ನೇ ಇನಿಂಗ್ಸ್​ನಲ್ಲಿ ಡಿ.ನಿಶ್ಚಲ್ (25) ಜತೆಗೆ ದೇವದತ್ ಪಡಿಕ್ಕಲ್ (11) ಆರಂಭಿಕರಾಗಿ ಕಣಕ್ಕಿಳಿದಿದ್ದು, ತಂಡಕ್ಕೆ ಎಚ್ಚರಿಕೆಯ ಆರಂಭ ಒದಗಿಸಿದ್ದಾರೆ. ಮೊದಲ ಇನಿಂಗ್ಸ್

ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಡಿ.ನಿಶ್ಚಲ್ ಎರಡನೇ ಇನಿಂಗ್ಸ್​ನಲ್ಲೂ ಗಮನ ಸೆಳೆದರು. ಆಫ್​ಡ್ರೖೆವ್ ಮೂಲಕ 2 ಬೌಂಡರಿ ಬಾರಿಸಿ ಆತ್ಮವಿಶ್ವಾಸದಿಂದ ಎದುರಾಳಿ ಬೌಲರ್​ಗಳನ್ನು ಎದುರಿಸಿದರು. ಮೊದಲ ದಿನ ರೈಲ್ವೇಸ್​ನ ಬೌಲಿಂಗ್​ಗೆ ದಿಕ್ಕುತಪ್ಪಿದ್ದ ಕರ್ನಾಟಕ, ದಿನದ ಆರಂಭದ 3ನೇ ಓವರ್​ನಲ್ಲಿಯೇ ಆಲೌಟ್ ಆಯಿತು. ಶರತ್ ಶ್ರೀನಿವಾಸ್ ಮೂರು ರನ್ ಗಳಿಸಿದರೆ, 3 ಇತರೆ ರನ್​ಗಳು ಲಭಿಸಿದವು. ಪ್ರಸಿದ್ಧ ಕೃಷ್ಣ, ಕರಣ್ ಠಾಕೂರ್​ಗೆ ವಿಕೆಟ್ ಒಪ್ಪಿಸುವುದರೊಂದಿಗೆ ಮೊದಲ ಇನಿಂಗ್ಸ್ ಮುಕ್ತಾಯವಾಯಿತು.

ವೇಗಿಗಳಿಗೆ ಕುಸಿದ ರೈಲ್ವೇಸ್

ಪಿಚ್​ನ ತೇವಾಂಶ ಹಾಗೂ ಸ್ವಿಂಗ್​ನ ಸಂಪೂರ್ಣ ಲಾಭ ಪಡೆದ ಕರ್ನಾಟಕದ ವೇಗಿಗಳು ಆರಂಭದಲ್ಲೇ ರೈಲ್ವೇಸ್ ಮೇಲೆ ಹಿಡಿತ ಸಾಧಿಸಿದರು. 4ನೇ ಓವರ್​ನಲ್ಲಿ ಎಸ್.ವಾಕಸ್ಕರ್ 4 ರನ್ ಗಳಿಸಿದ್ದಾಗ ಕೀಪರ್ ಶರತ್​ಗೆ ಕ್ಯಾಚ್ ನೀಡಿ ಮಿಥುನ್​ಗೆ ವಿಕೆಟ್ ಒಪ್ಪಿಸಿದರು. ಮರು ಓವರ್​ನಲ್ಲಿ ಪ್ರಸಿದ್ಧ್ ಕೃಷ್ಣ, ನಿತಿನ್ ಬಿಲ್ಲೆ(0) ಅವರನ್ನು ಎಲ್​ಬಿ ಬಲೆಗೆ ಬೀಳಿಸಿದರು. ಆಗ ತಂಡದ ಮೊತ್ತ 18. ಅಲ್ಲಿಂದ ಸತತವಾಗಿ ರೈಲ್ವೇಸ್ ವಿಕೆಟ್ ಉರುಳಿದವು. ಪ್ರಥಮ್ ಸಿಂಗ್(2), ನಾಯಕ ಅರಿಂದಮ್ ಘೊಷ್(0), ಸಾಹಿಮ್ ಹಸನ್(2) ವಿಕೆಟ್ ಕಳೆದುಕೊಂಡ ರೈಲ್ವೇಸ್ ಭೋಜನ ವಿರಾಮದ ವೇಳೆಗೆ ಆರು ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತ್ತು. ಒಂದು ಹಂತದಲ್ಲಿ 100ರ ಗಡಿ ದಾಟುವುದೂ ಕಷ್ಟ ಎನ್ನುವಂತಿದ್ದ ರೈಲ್ವೇಸ್ ಚಹಾ ವಿರಾಮದ ನಂತರ ಚೇತರಿಕೆ ಕಂಡಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆಯ ಆಟ ಪ್ರದರ್ಶಿಸಿದ ಮನೀಷ್ ರಾವ್ 52 ರನ್​ಗಳಿಸಿ ಅಜೇಯರಾಗಿ ಉಳಿದರು.

ವಾಸಿಂ ಜಾಫರ್ 55ನೇ ಶತಕ

ನಾಗ್ಪುರ: ಭಾರತ ತಂಡದ ಮಾಜಿ ಟೆಸ್ಟ್ ಬ್ಯಾಟ್ಸ್​ಮನ್ ವಾಸಿಂ ಜಾಫರ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 55ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಅತ್ಯಧಿಕ ಶತಕ ಸಿಡಿಸಿರುವ ಭಾರತೀಯರಲ್ಲಿ ಜಂಟಿ 4ನೇ ಸ್ಥಾನಕ್ಕೇರಿದ್ದಾರೆ. ಮೊಹಮದ್ ಅಜರುದ್ದೀನ್ (54) ದಾಖಲೆ ಮುರಿದಿರುವ 40 ವರ್ಷದ ಜಾಫರ್, ದಿಲೀಪ್ ವೆಂಗ್ಸರ್ಕಾರ್ ಮತ್ತು ವಿವಿಎಸ್ ಲಕ್ಷ್ಮಣ್ ದಾಖಲೆ ಸರಿಗಟ್ಟಿದ್ದಾರೆ. ಹಾಲಿ ಚಾಂಪಿಯನ್ ವಿದರ್ಭ ಪರ ರಣಜಿ ಟ್ರೋಫಿಯಲ್ಲಿ ಆಡುತ್ತಿರುವ ಮುಂಬೈ ಮೂಲದ ಜಾಫರ್, ಗುಜರಾತ್ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 126 ರನ್ (176 ಎಸೆತ, 13 ಬೌಂಡರಿ, 2 ಸಿಕ್ಸರ್) ಬಾರಿಸಿದರು. ಇದು ರಣಜಿಯಲ್ಲಿ ಅವರ 38ನೇ ಶತಕವಾಗಿದೆ. ಭಾರತದ ಅತ್ಯಧಿಕ ಪ್ರಥಮ ದರ್ಜೆ ಶತಕವೀರರು: ಸುನೀಲ್ ಗಾವಸ್ಕರ್ (81), ಸಚಿನ್ ತೆಂಡುಲ್ಕರ್ (81), ರಾಹುಲ್ ದ್ರಾವಿಡ್ (68), ವಿಜಯ್ ಹಜಾರೆ (60), ದಿಲೀಪ್ ವೆಂಗ್ಸರ್ಕಾರ್ (55), ವಿವಿಎಸ್ ಲಕ್ಷ್ಮಣ್ (55), ವಾಸಿಂ ಜಾಫರ್ (55), ಮೊಹಮದ್ ಅಜರುದ್ದೀನ್ (54).

ವೇಗಿಗಳ ನಿಖರ ದಾಳಿ

ಮಿಥುನ್, ರೋನಿತ್ ಹಾಗೂ ಪ್ರಸಿದ್ಧಕೃಷ್ಣ ಎಸೆತಗಳನ್ನು ಎದುರಿಸಲು ತಿಣುಕಾಡಿದ ರೈಲ್ವೇಸ್​ನ ಬ್ಯಾಟ್ಸ್​ಮನ್​ಗಳು, ಒಂದೊಂದು ರನ್​ಕೂಡ ಪ್ರಯಾಸಕರವಾಗಿ ಕೂಡಿಸಿದರು. ಮೂವರು ವೇಗಿಗಳು ಒಟ್ಟು 46 ಓವರ್ ಎಸೆದರೆ, ಸ್ಪಿನ್ನರ್​ಗಳಾದ ಕೆ.ಗೌತಮ್ ಹಾಗೂ ಶ್ರೇಯಸ್ ಗೋಪಾಲ್ ಕೇವಲ 14 ಓವರ್ ಮಾಡಿದರು. ಮುಂಬೈ ವಿರುದ್ಧ ಬೆಳಗಾವಿಯಲ್ಲಿ ನಡೆದ ಪಂದ್ಯದಲ್ಲೂ ರೋನಿತ್ 5 ವಿಕೆಟ್ ಉರುಳಿಸಿದ್ದರು.

ಕೆಲಕಾಲ ಆಟ ನಿಲ್ಲಿಸಿದ ಜೇನು!

ಎರಡನೇ ದಿನದಾಟದಲ್ಲಿ ಜೇನು ದಾಳಿಯಿಟ್ಟ ಕಾರಣ 3-4 ನಿಮಿಷ ಆಟ ಸ್ಥಗಿತಗೊಳಿಸಲಾಯಿತು. ಮೈದಾನದ ಮೇಲ್ಭಾಗದಲ್ಲಿ ಜೇನು ನೊಣಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾರುತ್ತಿದ್ದುದನ್ನು ಗಮನಿಸಿದ ಅಂಪೈರ್ ಆಟ ನಿಲ್ಲಿಸುವಂತೆ ಸೂಚಿಸಿದರು. ಆಗ ಕರ್ನಾಟಕ ಬ್ಯಾಟಿಂಗ್ ಆರಂಭಿಸಿತ್ತು. ಮೂರ್ನಾಲ್ಕು ನಿಮಿಷ ಕೆಲ ಆಟಗಾರರು ಮೈದಾನದಲ್ಲಿ ಕುಳಿತುಕೊಂಡರೆ, ಇನ್ನು ಕೆಲವರು ಮಲಗಿಕೊಂಡು ಜೇನಿನಿಂದ ಪಾರಾದರು. ಬಳಿಕ ಆಟ ಮುಂದುವರಿಯಿತು.