ಇಂದಿನಿಂದ ಕರ್ನಾಟಕಕ್ಕೆ ಸೌರಾಷ್ಟ್ರ ಸವಾಲು

ರಾಜ್​ಕೋಟ್: ಯುವ ಆಟಗಾರರ ಕೆಚ್ಚೆದೆಯ ಹೋರಾಟದ ನೆರವಿನಿಂದ ಆರಂಭಿಕ 3 ಪಂದ್ಯಗಳಲ್ಲೂ ಮೇಲುಗೈ ಕಂಡಿರುವ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ 85ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ 4ನೇ ಕದನಕ್ಕೆ ಸನ್ನದ್ಧವಾಗಿದೆ. ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರದಿಂದ ನಡೆಯಲಿರುವ ಎಲೈಟ್ ಎ ಗುಂಪಿನ ಪಂದ್ಯದಲ್ಲಿ ವಿನಯ್ ಕುಮಾರ್ ಬಳಗ ಆತಿಥೇಯ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ನ್ಯೂಜಿಲೆಂಡ್ ಪ್ರವಾಸದಿಂದ ವಾಪಸಾಗಿರುವ ಅನುಭವಿ ಆಟಗಾರರಾದ ಕರುಣ್ ನಾಯರ್ ಹಾಗೂ ಆರ್.ಸಮರ್ಥ್ ಸೇರ್ಪಡೆಗೊಂಡಿರುವುದು ರಾಜ್ಯ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲಬಂದಿದೆ.

ಮೊದಲ 3 ಪಂದ್ಯಗಳಲ್ಲೂ ಮಹಾರಾಷ್ಟ್ರ ರಾಜ್ಯದ 3 ತಂಡಗಳ (ವಿದರ್ಭ, ಮುಂಬೈ, ಮಹಾರಾಷ್ಟ್ರ) ವಿರುದ್ಧ ಮೇಲುಗೈ ಸಾಧಿಸಿರುವ ಕರ್ನಾಟಕ ಎಲೈಟ್ ಎ ಮತ್ತು ಬಿ ಗುಂಪಿನಿಂದ ಒಟ್ಟಾರೆ 6ನೇ ಸ್ಥಾನದಲ್ಲಿದೆ. 3 ಪಂದ್ಯಗಳಲ್ಲಿ 2ರಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿ, ಒಂದು ಪಂದ್ಯದಲ್ಲಿ ಜಯ ದಾಖಲಿಸಿದೆ. ಕರುಣ್ ನಾಯರ್ ಹಾಗೂ ಆರ್.ಸಮರ್ಥ್​ಗೆ

ಸ್ಥಾನ ಕಲ್ಪಿಸಲು ಮೀರ್ ಕೌನೇನ್ ಅಬ್ಬಾಸ್ ಹಾಗೂ ಅಭಿಷೇಕ್ ರೆಡ್ಡಿ ಅವರನ್ನು ಕೈಬಿಡಲಾಗಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಉದಯೋನ್ಮುಖ ಆಟಗಾರರ ಟೂರ್ನಿಯಲ್ಲಿ ಆಡಲು ಭಾರತ

ಯುವ ತಂಡದೊಂದಿಗೆ ತೆರಳಿರುವ ಪ್ರಸಿದ್ಧ ಕೃಷ್ಣ ಬದಲಿಗೆ ಮತ್ತೋರ್ವ ವೇಗಿ ಪ್ರತೀಕ್ ಜೈನ್ ಸ್ಥಾನ ಪಡೆದಿದ್ದಾರೆ. ಕರುಣ್, ಸಮರ್ಥ್ ಆಡುವ 11ರ ಬಳಗ ದಲ್ಲಿ ಸ್ಥಾನ ಪಡೆದರೆ, 19ರ ಹರೆಯದ ದೇವದತ್ ಪಡಿಕ್ಕಲ್ ಅಥವಾ ಡಿ. ನಿಶ್ಚಲ್ ಸ್ಥಾನ ತೆರವು ಮಾಡಬೇಕಾಗುತ್ತದೆ. ಬೌಲಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಹಿಂದಿನ ಪಂದ್ಯದಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದರೂ ಇನಿಂಗ್ಸ್ ಮುನ್ನಡೆ ಸಾಧಿಸಲು ವಿಫಲವಾದ ಆತಿಥೇಯ ಸೌರಾಷ್ಟ್ರ ತಂಡ ಉತ್ತಮ ಬ್ಯಾಟಿಂಗ್ ಪಡೆ ಹೊಂದಿದೆ. ಅನುಭವಿ ವೇಗಿ ಜೈದೇವ್ ಉನಾದ್ಕತ್ ಅನುಪಸ್ಥಿತಿಯಲ್ಲಿ ಇತರ ಬೌಲರ್​ಗಳು ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಶೆಲ್ಡನ್ ಜಾಕ್ಸನ್, ಹಾರ್ವಿಕ್ ದೇಸಾಯಿ, ಅರ್ಪಿತ್ ವಸವಾಡ ಹಾಗೂ ನಾಯಕ ಜೈದೇವ್ ಷಾ ಒಳಗೊಂಡ ಬ್ಯಾಟಿಂಗ್ ಪಡೆ ಕರ್ನಾಟಕಕ್ಕೆ ಸವಾಲಾಗಬಲ್ಲದು. -ಏಜೆನ್ಸೀಸ್

ಜೈದೇವ್ ಷಾ ವಿದಾಯ ಪಂದ್ಯ

ಕಳೆದ 16 ವರ್ಷಗಳಿಂದ ಸೌರಾಷ್ಟ್ರ ತಂಡದ ಭಾಗವಾಗಿರುವ ಅನುಭವಿ ಆಟಗಾರ ಜೈದೇವ್ ಷಾ ಪಾಲಿಗೆ ಕರ್ನಾಟಕ ವಿರುದ್ಧದ ಪಂದ್ಯವೇ ಕಡೆಯದಾಗಿದೆ. ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್ ಷಾ ಪುತ್ರನೂ ಆಗಿರುವ 35 ವರ್ಷದ ಜೈದೇವ್, ಕರ್ನಾಟಕ ವಿರುದ್ಧ ಪಂದ್ಯದ ಬಳಿಕ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ. ಹಿಂದಿನ ಪಂದ್ಯದಲ್ಲಿ ತವರು ನೆಲದಲ್ಲೇ ಇನಿಂಗ್ಸ್ ಹಿನ್ನಡೆ ಮುಖಭಂಗಕ್ಕೀಡಾಗಿರುವ ಸೌರಾಷ್ಟ್ರ ತಂಡದ ಆಟಗಾರರು, ಇದೀಗ ಕರ್ನಾಟಕ ವಿರುದ್ಧ ನಾಯಕ ಜೈದೇವ್​ಗೆ ಗೆಲುವಿನ ವಿದಾಯ ನೀಡುವ ಉತ್ಸಾಹದಲ್ಲಿದ್ದಾರೆ. 119 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಜೈದೇವ್ ಷಾ, 10 ಶತಕ ಸೇರಿದಂತೆ 5,253 ರನ್ ಗಳಿಸಿದ್ದಾರೆ. ಜತೆಗೆ ಇದುವರೆಗೂ 110 ಪಂದ್ಯಗಳಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸಿರುವ ಜೈದೇವ್, ದೇಶೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ದಾಖಲೆ ಹೊಂದಿದ್ದಾರೆ.