ಕೊನೇ ಪಂದ್ಯಕ್ಕೆ ಗಂಭೀರ್ ರೆಡಿ

ನವದೆಹಲಿ: ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿರುವ ಅನುಭವಿ ಎಡಗೈ ಬ್ಯಾಟ್ಸ್​ಮನ್ ಗೌತಮ್ ಗಂಭೀರ್ ಕೊನೇ ಪಂದ್ಯಕ್ಕೆ ಸಜ್ಜಾಗಿದ್ದಾರೆ. ತನ್ನ ತವರು ಮೈದಾನ ಫಿರೋಜ್ ಷಾ ಕೋಟ್ಲಾದಲ್ಲಿ ಗುರುವಾರದಿಂದ ಆಂಧ್ರ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯದ ಮೂಲಕ ದೆಹಲಿ ಬ್ಯಾಟ್ಸ್​ಮನ್, ವೃತ್ತಿಬದುಕಿನ ಕೊನೇ ಪಂದ್ಯವನ್ನಾಡಲಿದ್ದಾರೆ. ದೆಹಲಿ ಈಗಾಗಲೆ ಆಡಿರುವ 3 ಪಂದ್ಯಗಳ ಪೈಕಿ 2 ಡ್ರಾ ಮತ್ತು 1 ಸೋಲು ಕಂಡಿದೆ. ಇದರಲ್ಲಿ ಗಂಭೀರ್ 2 ಪಂದ್ಯಗಳನ್ನಾಡಿದರೂ 1 ಅರ್ಧಶತಕ ಮಾತ್ರ ಬಾರಿಸಿದ್ದಾರೆ.

ಗಂಭೀರ್​ಗೆ ರಾಜಕೀಯದತ್ತ ಒಲವು?: ಕ್ರಿಕೆಟಿಗರು ವಿದಾಯ ಹೇಳಿದ ನಂತರ ರಾಜಕೀಯ ಅಖಾಡಕ್ಕೆ ಇಳಿಯುವುದು ವಿಶೇಷವೇನಲ್ಲ. 2 ದಶಕಗಳ ಕ್ರಿಕೆಟ್ ಬದುಕಿಗೆ ಗುಡ್​ಬೈ ಹೇಳಿದ ಭಾರತದ ಯಶಸ್ವಿ ಬ್ಯಾಟ್ಸ್​ಮನ್ ಗಂಭೀರ್ ಕೂಡ ರಾಜಕೀಯ ಕ್ಷೇತ್ರದಲ್ಲಿ ಮುಂದಿನ ಜೀವನ ಮುಂದುವರಿಸುವ ನಿರೀಕ್ಷೆ ದಟ್ಟವಾಗಿದೆ. ಜಾಲತಾಣಗಳಲ್ಲಿ ಚರ್ಚೆಯಾಗುತ್ತಿರುವ ಪ್ರಕಾರ ಗಂಭೀರ್ ಬಿಜೆಪಿಗೆ ಸೇರುವ ಸಾಧ್ಯತೆಯಿದೆ.