ಕರ್ನಾಟಕದ ರಣಜಿ ಟ್ರೋಫಿ ಕನಸು ಛಿದ್ರ: ಸೆಮಿಫೈನಲ್‌ನಲ್ಲಿ ಗೆದ್ದು ಬೀಗಿದ ಸೌರಾಷ್ಟ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2019ನೇ ಸಾಲಿನ ರಣಜಿ ಟ್ರೋಫಿಯ ಎರಡನೇ ಸೆಮಿಫೈನಲ್​ ಹಣಾಹಣಿಯಲ್ಲಿ ಕರ್ನಾಟಕ ತಂಡವನ್ನು ಮಣಿಸಿದ ಸೌರಾಷ್ಟ್ರ ಫೈನಲ್​ಗೆ ಲಗ್ಗೆ ಇಟ್ಟಿದೆ.

ತೀವ್ರ ಕುತೂಹಲ ಮೂಡಿಸಿದ್ದ ಸೆಮಿಫೈನಲ್​ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಕರ್ನಾಟಕ 275 ರನ್​ಗೆ ಆಲೌಟ್​ ಆಗಿತ್ತು. ಗುರಿ ಬೆನ್ನತ್ತಿದ್ದ ಸೌರಾಷ್ಟ್ರ ಮೊದಲ ಇನಿಂಗ್ಸ್​ನಲ್ಲಿ 236 ರನ್​ಗೆ ಸರ್ವಪತನ ಕಂಡು 39 ರನ್​ ಹಿನ್ನಡೆಯನ್ನು ಅನುಭವಿಸಿತ್ತು.

39ರನ್​ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್​ ಆರಂಭಿಸಿದ ಕರ್ನಾಟಕ ತಂಡ 239 ರನ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಸೌರಾಷ್ಟ್ರ ಗೆಲುವಿಗೆ 279 ರನ್​ ಗುರಿ ನೀಡಿತ್ತು.

ಕರ್ನಾಟಕ ನೀಡಿದ ಗುರಿ ಬೆನ್ನತ್ತಿದ ಸೌರಾಷ್ಟ್ರ ತಂಡ ಎರಡನೇ ಇನಿಂಗ್ಸ್​ನಲ್ಲಿ ಚೇತೇಶ್ವರ ಪೂಜಾರ(131*) ಹಾಗೂ ಶೆಲ್ಡನ್​ ಜಾಕ್ಸನ್​(100) ಬ್ಯಾಟಿಂಗ್​ ನೆರವಿನಿಂದ ಐದು ವಿಕೆಟ್​ ನಷ್ಟಕ್ಕೆ 279 ರನ್​ ಗಳಿಸುವ ಮೂಲಕ ಅಮೋಘ ಜಯ ಸಾಧಿಸಿ, ಫೈನಲ್​ಗೆ ಲಗ್ಗೆ ಇಟ್ಟಿದೆ.

ಕರ್ನಾಟಕ ಪರ ವಿನಯ್​ ಕುಮಾರ್​ 3 ವಿಕೆಟ್​ ಪಡೆದರೆ, ಅಭಿಮನ್ಯು ಮಿಥುನ್ ಹಾಗೂ ರೋನಿತ್​ ಮೋರೆ ತಲಾ ಒಂದು ವಿಕೆಟ್​ ಪಡೆದರು.

ಪೂಜಾರಗೆ ಅಂಪೈರ್ ವರದಾನ
ಮೊದಲ ಇನಿಂಗ್ಸ್​ನಲ್ಲಿ ಅಂಪೈರ್ ಕೃಪಾ ಕಟಾಕ್ಷಕ್ಕೆ ಒಳಗಾಗಿದ್ದ ಅನುಭವಿ ಚೇತೇಶ್ವರ ಪೂಜಾರ ಎರಡನೇ ಇನಿಂಗ್ಸ್​ನಲ್ಲೂ ಅಂಪೈರ್ ಖಾಲೀದ್ ಹುಸೇನ್​ರಿಂದ ಜೀವದಾನ ಪಡೆದರು. 4ನೇ ದಿನದ ಭೋಜನ ವಿರಾಮದ ನಂತರ ವಿನಯ್​ ಕುಮಾರ್ ಎಸೆದ 3ನೇ ಓವರ್​ನಲ್ಲಿ ಪೂಜಾರ ಬ್ಯಾಟ್​ಗೆ ತಾಗಿದ ಚೆಂಡು ನೇರವಾಗಿ ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ ಕೈಸೇರಿತು. ಆಗ ರಾಜ್ಯದ ಆಟಗಾರರು ಬಲವಾದ ಮನವಿ ಸಲ್ಲಿಸಿದರೂ ಅಂಪೈರ್ ಪುರಸ್ಕರಿಸಲಿಲ್ಲ. ಈ ವೇಳೆ ಪೂಜಾರ 34 ರನ್​ಗಳಿಸಿದ್ದರು. ಪೂಜಾರ ಮೊದಲ ಇನಿಂಗ್ಸ್​ನಲ್ಲಿ ಮಿಥುನ್ ಎಸೆತದಲ್ಲಿ ಔಟಾಗಿದ್ದರೂ ಅಂಪೈರ್ ಖಾಲೀದ್ ಹುಸೇನ್ ವ್ಯತಿರಿಕ್ತ ತೀರ್ಪು ನೀಡಿದ್ದರು. ಔಟಾಗಿದ್ದರೂ ಬ್ಯಾಟಿಂಗ್ ಮುಂದುವರಿಸಿದ ಪೂಜಾರ ಹಾಗೂ ಅಂಪೈರ್ ಖಾಲೀದ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಪೂಜಾರ ಕ್ರೀಡಾಸ್ಫೂರ್ತಿ ಮರೆತಿದ್ದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕಕ್ಕೆ ಪೂಜಾರ ಕಂಟಕ