ನಿಶ್ಚಲ್ ಶತಕ, ಜಯದತ್ತ ಕರ್ನಾಟಕ

| ಅರವಿಂದ ಅಕ್ಲಾಪುರ ಶಿವಮೊಗ್ಗ

ಆರಂಭಿಕ ಎರಡೂ ದಿನ ಬೌಲರ್​ಗಳು ಮೆರೆದಾಡಿದ್ದ ನವುಲೆಯ ಪಿಚ್ ಸೋಮವಾರ ಸಂಪೂರ್ಣ ಬ್ಯಾಟ್ಸ್ ಮನ್​ಗಳ ಪರವಾಗಿತ್ತು. ಪ್ರವಾಸಿ ತಂಡಕ್ಕೆ ಬೃಹತ್ ಮೊತ್ತದ ಗೆಲುವಿನ ಗುರಿ ನೀಡಬೇಕೆಂಬ ಹಂಗಾಮಿ ನಾಯಕ ಮನೀಷ್ ಪಾಂಡೆಯ ಯೋಜನೆ ಕಡೆಗೂ ಕೈಗೂಡಿತು. ಆರಂಭಿಕ ಡೇಗಾ ನಿಶ್ಚಲ್ (101 ರನ್, 232 ಎಸೆತ, 7 ಬೌಂಡರಿ) ಶತಕದಾಟದ ನೆರವಿನಿಂದ 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ 85ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರೈಲ್ವೇಸ್ ತಂಡಕ್ಕೆ 362 ರನ್ ಗೆಲುವಿನ ಗುರಿ ನೀಡಿದ್ದು, ಅಂತಿಮ ದಿನ ಗೆಲುವು ಒಲಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

ಕೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 41 ರನ್​ಗಳಿಂದ ಮೂರನೇ ದಿನದಾಟ ಆರಂಭಿಸಿದ ಕರ್ನಾಟಕ ತಂಡ, ನಿಶ್ಚಲ್ ಶತಕ ಹಾಗೂ ಯುವ ಬ್ಯಾಟ್ಸ್​ಮನ್​ಗಳಾದ ಕೆವಿ ಸಿದ್ಧಾರ್ಥ್ (84*ರನ್, 86 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ದೇವದತ್ ಪಡಿಕ್ಕಲ್ (75 ರನ್, 159 ಎಸೆತ, 5 ಬೌಂಡರಿ, 1 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಫಲವಾಗಿ 2 ವಿಕೆಟ್​ಗೆ 290 ರನ್​ಗಳಿಸಿ 2ನೇ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ಪ್ರತಿಯಾಗಿ ಕರ್ನಾಟಕ ನೀಡಿರುವ ಬೃಹತ್ ಮೊತ್ತ ಬೆನ್ನಟ್ಟಿರುವ ಪ್ರವಾಸಿ ರೈಲ್ವೇಸ್ ತಂಡ, ದಿನದಂತ್ಯಕ್ಕೆ 1 ವಿಕೆಟ್​ಗೆ 44 ರನ್ ಗಳಿಸಿದ್ದು, ಗೆಲುವು ಸಾಧಿಸಲು ಇನ್ನೂ 318 ರನ್ ಗಳಿಸಬೇಕಿದೆ. ಕರ್ನಾಟಕ ತಂಡ ಮೊದಲ ಇನಿಂಗ್ಸ್​ನಲ್ಲಿ 214 ರನ್ ಗಳಿಸಿದರೆ, ರೈಲ್ವೇಸ್ 143 ರನ್ ಕಲೆಹಾಕಿತ್ತು. ಮನೀಷ್ ಪಡೆ ಮೊದಲ ಇನಿಂಗ್ಸ್​ನಲ್ಲಿ 71 ರನ್ ಮುನ್ನಡೆ ಸಾಧಿಸಿತ್ತು.

ಯುವ ಬ್ಯಾಟ್ಸ್​ಮನ್​ಗಳ ಅಬ್ಬರದ ಬ್ಯಾಟಿಂಗ್: ಮೊದಲ ದಿನದಾಟದಲ್ಲಿ ಬಿರುಸಿನ ಬೌಲಿಂಗ್​ನಿಂದ ಅಬ್ಬರಿಸಿದ ರೈಲ್ವೇಸ್ ಬೌಲರ್​ಗಳ ಉತ್ಸಾಹ 3ನೇ ದಿನದಾಟದಲ್ಲಿ ಕಂಡು ಬರಲಿಲ್ಲ. ಇದಕ್ಕೆ ಕಾರಣವಾಗಿದ್ದು ಡಿ. ನಿಶ್ಚಲ್ ಹಾಗೂ ಭಾರತ 19 ವಯೋಮಿತಿ ತಂಡದ ಆಟಗಾರ ದೇವದತ್ ಪಡಿಕ್ಕಲ್ ಜೋಡಿ. ದಿನದ ಆರಂಭದಿಂದಲೇ ರಕ್ಷಣಾತ್ಮಕ ಪ್ರದರ್ಶನ ನೀಡುವ ಮೂಲಕ ವಿಕೆಟ್ ಕಾಯ್ದುಕೊಂಡ ಈ ಜೋಡಿ ರೈಲ್ವೇಸ್ ಉತ್ಸಾಹಕ್ಕೆ ತಣ್ಣೀರೆರಚಿತು. ಭೋಜನ ವಿರಾಮದವರೆಗೂ ವಿಕೆಟ್ ಕಾಯ್ದುಕೊಂಡ ಈ ಜೋಡಿ ಮೊದಲ ವಿಕೆಟ್​ಗೆ 150 ರನ್ ಸೇರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿತು. ಭೋಜನ ವಿರಾಮದ ನಂತರ 6ನೇ ಓವರ್​ನಲ್ಲಿ ಪಡಿಕ್ಕಲ್, ಹರ್ಷ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್​ಗಿಳಿದ ಸಿದ್ಧಾರ್ಥ್ ಕೂಡ ಉತ್ತಮ ಆಟ ಪ್ರದರ್ಶಿಸಿದರು.

ಚಹಾ ವಿರಾಮದ ನಂತರ ಮೊದಲ ಎಸೆತದಲ್ಲೇ ನಿಶ್ಚಲ್, ಹರ್ಷ್ ತ್ಯಾಗಿ ಬೌಲಿಂಗ್​ನಲ್ಲಿ ನಾಯಕ ಅರಿಂದಮ್ೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆಗೆ ನಿಶ್ಚಲ್ ಹಾಗೂ ಸಿದ್ಧಾರ್ಥ್ 2ನೇ ವಿಕೆಟ್​ಗೆ 94 ರನ್ ಸೇರಿಸಿದ್ದರು. ನಂತರ ಕಣಕ್ಕಿಳಿದ ನಾಯಕ ಮನೀಷ್ ಪಾಂಡೆ (18) 3ನೇ ವಿಕೆಟ್​ಗೆ ಸಿದ್ಧಾರ್ಥ್ ಜೊತೆಗೂಡಿ ತಂಡದ ಮೊತ್ತವನ್ನು 84 ಓವರ್​ಗಳಲ್ಲಿ 290ಕ್ಕೆ ಹಿಗ್ಗಿಸಿದರು. ಬೃಹತ್ ಮೊತ್ತ ದಾಖಲಿಸಿದ ಹಿನ್ನೆಲೆಯಲ್ಲಿ ಇನಿಂಗ್ಸ್ ಡಿಕ್ಲೇರ್ ಘೋಷಿಸಿ ಎದುರಾಳಿ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು.

ರೈಲ್ವೇಸ್ ತಂಡದಿಂದ ಎಚ್ಚರಿಕೆಯಾಟ

ಮೂರನೇ ದಿನದ ಅಂತ್ಯಕ್ಕೆ ಎದುರಾಳಿ ತಂಡಕ್ಕೆ ಆಘಾತ ನೀಡಬೇಕೆಂಬ ಕರ್ನಾಟಕದ ಯೋಜನೆ ಕೈಗೂಡಲಿಲ್ಲ. ಎರಡನೇ ಓವರ್​ನಲ್ಲೇ ಪ್ರಸಿದ್ಧ ಕೃಷ್ಣ ಬೌಲಿಂಗ್​ನಲ್ಲಿ ಸ್ಲಿಪ್​ನಲ್ಲಿದ್ದ ಸಿದ್ಧಾರ್ಥ್​ಗೆ ಕ್ಯಾಚ್ ನೀಡಿ ಪ್ರಶಾಂತ್ ಗುಪ್ತಾ (4) ನಿರ್ಗಮಿಸಿದರು. ಬಳಿಕ ರೈಲ್ವೇಸ್ ತಂಡ ಆರಂಭಿಕ ಆಘಾತದ ನಡುವೆಯೂ ಎಚ್ಚರಿಕೆಯ ಆಟ ಪ್ರದರ್ಶಿಸಿದೆ. ಕನ್ನಡಿಗ ನಿತಿನ್ ಬಿಲ್ಲೆ (16 ರನ್, 45 ಎಸೆತ, 1 ಬೌಂಡರಿ) ಹಾಗೂ ಸೌರಭ್ ವಕಸ್ಕರ್ (20ರನ್, 43 ಎಸೆತ, 3 ಬೌಂಡರಿ) ಜೋಡಿ 2ನೇ ವಿಕೆಟ್​ಗೆ 39 ರನ್ ಕಲೆಹಾಕಿದೆ. ಈ ಜೋಡಿಯನ್ನು ಬೇರ್ಪಡಿಸಲು ಕರ್ನಾಟಕದ ನಾಲ್ವರು ಬೌಲರ್​ಗಳು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ದಿನದ ಆರಂಭದಲ್ಲಿ ನಾನು ಹಾಗೂ ಪಡಿಕಲ್ ಎಚ್ಚರಿಕೆ ಆಟವಾಡಿದೆವು. ಪಿಚ್​ನಲ್ಲಿ ಸಾಕಷ್ಟು ಬೌನ್ಸ್ ಇತ್ತು. ನಂತರ ನಿಧಾನವಾಗಿ ಹೊಂದಿಕೊಂಡ ನಾವಿಬ್ಬರೂ ರನ್ ಗಳಿಕೆಗೆ ವೇಗ ನೀಡಿದೆವು. 300ರಿಂದ 350 ರನ್​ಗಳ ಗುರಿ ನೀಡಬೇಕೆಂಬುದು ನಮ್ಮ ಯೋಜನೆಯಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ.

| ಡಿ. ನಿಶ್ಚಲ್